ಕನ್ನಡ ಪ್ರಭ ವಾರ್ತೆ ಹೊನ್ನಾಳಿ
ರಾಜ್ಯದಲ್ಲಿ ಅಮಾಯಕ ರೈತರು, ಮಠ ಮಾನ್ಯಗಳ ಆಸ್ತಿಗಳಲ್ಲಿ ವಕ್ಫ್ ಆಸ್ತಿ ಪರಬಾರೆ ನಿಷೇದ ಎಂದು ನಮೂದಾಗುವ ಮೂಲಕ ಇಡೀ ರಾಜ್ಯದಲ್ಲಿ ಗೊಂದಲ ಮೂಡಿದ್ದು, ಕೂಡಲೇ ಈ ನಮೂದುಗಳನ್ನು ಸರ್ಕಾರ ರದ್ದುಪಡಿಸಬೇಕು ಎಂದು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜೆ.ಕೆ. ಸುರೇಶ್ ಹೇಳಿದರು.ಸೋಮವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಹಾಗೂ ತಾಲೂಕು ಕಚೇರಿ ಮುತ್ತಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರದ ಕ್ರಮಗಳ ಬಗ್ಗೆ ಉಗ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೇತ್ತುಕೊಂಡ ಸಿಎಂ ಸಿದ್ದರಾಮಯ್ಯ ರೈತರಿಗೆ ನೀಡಿರುವ ನೊಟೀಸ್ ಹಿಂಪಡೆಯಲಾಗುವುದು ಎಂದು ಹೇಳಿದ್ದು, ಇದು ಕೂಡ ಉಪಚುನಾವಣೆಯ ಗಿಮಿಕ್ ಅಗಿದೆ ಎಂದರು.
ಪಹಣೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಬಗ್ಗೆ ರಾಜ್ಯಾದ್ಯಂತ ಉಗ್ರವಾದ ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯನವರು ಈ ಕುರಿತು ರೈತರಿಗೆ ಹಾಗೂ ಜನರಿಗೆ ನೀಡಲಾಗಿರುವ ನೊಟೀಸ್ ಹಿಂಪಡೆಯುವಂತೆ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ. ಆದರೆ ಕೇವಲ ನೊಟೀಸ್ ಹಿಂಪಡೆಯುವಂತೆ ಅದೇಶ ಮಾಡಿದಾಕ್ಷಣ ಈ ಸಮಸ್ಯೆ ಬಗೆಹರಿಯುವುದಿಲ್ಲ, ಇದರ ಬದಲಿಗೆ ರಾಜ್ಯದ ರೈತರ ಮತ್ತು ಜನರ ಪಹಣೆ ಮತ್ತು ದಾಖಲೆಗಳಲ್ಲಿ ನಮೂದಾಗಿರುವ ವಕ್ಫ್ ಆಸ್ತಿ ಪರಬಾರೆ ನಿಷಧಿಸಿದೆ ಎನ್ನುವ ನಮೂದನ್ನು ಕೂಡಲೇ ರದ್ದು ಪಡಿಸಬೇಕು ಎಂದು ಅವರು ಅಗ್ರಹಿಸಿದರು.ಬಿಜೆಪಿ ಮುಖಂಡರು ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಅಲ್ಲಿಂದ ತಾಲೂಕು ಕಚೇರಿಗೆ ಆಗಮಿಸಿ ತಾಲೂಕು ಕಚೇರಿ ಮುತ್ತಿಗೆ ಹಾಕುವ ಕಾರ್ಯಕ್ರಮ ನಡೆಸಿದರು. ಈ ವೇಳೆ ನೆಲಹೊನ್ನೆ ಮಂಜು, ಕುಮಾರಸ್ವಾಮಿ ಸಿ.ಆರ್.ಶಿವಾನಂದ ಮಾತನಾಡಿದರು.
ಪ್ರತಿಭಟನೆ ಮನವಿ ಪತ್ರವನ್ನು ಉಪವಿಭಾಗಾಧಿಕಾರಿ ಅಭಿಷೇಕ್ ಅವರಿಗೆ ನೀಡುವ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಎಂ.ಪಿ.ಬಸವರಾಜ್, ಸುರೇಂದ್ರನಾಯ್ಕ, ಶಿವುಹುಡೇದ್, ಕೆ.ವಿ. ಕ್ಷೀಧರ, ಆರಕೆರೆ ನಾಗರಾಜ್, ನ್ಯಾಮತಿ ಸುರೇಶ್, ತರಗನಹಳ್ಳಿ ರಮೇಶ್ ಗೌಡ,, ಬೆನಕನಹಳ್ಳಿ ಮಹೇಂದ್ರಗೌಡ,,ಇಂಚರ ಮಂಜುನಾಥ್ ಸೇರಿದಂತೆ ನೂರಾರು ಜನ ಮುಖಂಡರು, ಕಾರ್ಯಕರ್ತರು ಇದ್ದರು.