ಕನ್ನಡಪ್ರಭ ವಾರ್ತೆ ಅಥಣಿ
ತಾಲೂಕಿನ ಅನಂತಪುರ ಗ್ರಾಮದ ದರ್ಗಾದಲ್ಲಿ ಸಭೆ ನಡೆಸಿದ ಮುಸ್ಲಿಂ ಸಮದಾಯದ ರೈತರು, ನ.25 ರೊಳಗಾಗಿ ಅನಂತಪುರ, ಬಳ್ಳಿಗೇರಿ ಗ್ರಾಮದ 60ಕ್ಕೂ ಅಧಿಕ ರೈತರ ಜಮೀನಿನ ಪಹಣಿಯಲ್ಲಿ ನೊಂದಣಿಯಾದ ವಕ್ಫ್ ಹೆಸರು ತೆರವುಗೊಳಿಸಬೇಕು ಎಂದು ಕಾಗವಾಡ ಹಾಗೂ ಅಥಣಿ ಶಾಸಕರಿಗೆ ಗಡುವು ನೀಡಿದ್ದು, ಇಲ್ಲವಾದರೆ ಸರ್ಕಾರದ ವಿರುದ್ಧ ತೀವ್ರ ಹೋರಾಟ ಮಾಡಲು ತೀರ್ಮಾನಿಸಿದ್ದಾರೆ.ಸಭೆಯ ನೇತೃತ್ವ ವಹಿಸಿದ್ದ ವಕೀಲ ಸಂಪತ್‌ಕುಮಾರ ಶೆಟ್ಟಿ ಮಾತನಾಡಿ, ಕೇವಲ ಎರಡು ಗ್ರಾಮಗಳ 60ಕ್ಕೂ ಅಧಿಕ ರೈತರ 500 ಎಕರೆಗೂ ಅಧಿಕ ಜಮೀನು ವಕ್ಪ್ ಎಂದು 2018ರಲ್ಲಿ ನೋಂದಣಿಯಾಗಿದೆ, ಮುಖ್ಯಮಂತ್ರಿ ಅವರು ಈಚೆಗೆ ನೀಡಿದ ನೋಟಿಸ್ ಮಾತ್ರ ಮರಳಿ ಪಡೆಯಲು ಆದೇಶಿಸಿದ್ದಾರೆ. ಈ ಹಿಂದೆಯೂ ದಾಖಲಾದ ರೈತರ ಗತಿಯೇನು? ಅವರು ಯಾರನ್ನ ಕೇಳಬೇಕು, ಯಾರು ನ್ಯಾಯ ಕೊಡಿಸುವವರು ಯಾರು ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಅಥಣಿ ಹಾಗೂ ಕಾಗವಾಡ ತಾಲೂಕಿನ ಅನೇಕ ಗ್ರಾಮಗಳ 60ಕ್ಕೂ ಅಧಿಕ ರೈತರು ಸಭೆ ಸೇರಿದ್ದರು. ಸಭೆಯಲ್ಲಿ ಶಾಸಕದ್ವಯರಿಗೆ ಗಡುವು ನೀಡಿದ್ದು, ಶಾಸಕರು ಯಾವ ರೀತಿ ಸ್ಪಂದಿಸದಿದ್ದರೆ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲು ನಿರ್ಣಯ ಮಾಡಲಾಯಿತು.ಅನೇಕ ರೈತರು ಮಾತನಾಡಿ, 2018ರಲ್ಲಿ ಪಹಣಿಯಲ್ಲಿ ಬಂದಿದ್ದ ವಕ್ಪ್ ಆಸ್ತಿ ತೆರವುಗೊಳಿಸಿ ಇಲ್ಲವಾದರೆ ಯಾವುದೇ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದರು.
ಈ ವೇಳೆ ಅಪ್ಪನಗೌಡ ಬಿರಾದಾರ, ರಾಯಗೊಂಡ ಮೇತ್ರಿ, ರಾಜೇಸಾಬ ಮುಲ್ಲಾ, ಪೈಗಂಬರ ಮುಲ್ಲಾ, ಸಂಗಪ್ಪಗೌಡ ಪಾಟೀಲ, ರಾಜೇಸಾಬ ಮುಜಾವರ, ಶಂಕರ ಚವ್ಹಾಣ, ರಂಜಾನ ಮುಲ್ಲಾ, ದಾವಲ್ ಮುಲ್ಲಾ, ಗುಲಾಬ ಮುಲ್ಲಾ, ಅರಮಾನ ಮುಲ್ಲಾ, ನೂರಾಹ್ಮದ ಮುಜಾವರ, ನಬಿಸಾಬ ಮುಜಾವರ, ಶಂಸುದ್ದೀನ್ ಮುಲ್ಲಾ, ಶಫೀಕ್ ಮುಜಾವರ, ಅಬ್ದುಲ್ ಮುಲ್ಲಾ, ಝುಲೇಖಾನ ಮುಲ್ಲಾ, ಅಲ್ಲಾಸಾಬ ಮುಲ್ಲಾ, ಇಲಾಯಿ ಮುಜಾವರ, ಜಮಾಲ್ ಮುಲ್ಲಾ ಸೇರಿದಂತೆ ಅನೇಕರಿದ್ದರು.