ಶಿರಹಟ್ಟಿ: ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಲು ಯಾರು ಕಾರಣೀಕರ್ತರು ಎಂಬುದನ್ನು ಮುಖ್ಯಮಂತ್ರಿಗಳು ತನಿಖೆ ಮಾಡಿಸಿ ಅವರ ವಿರುದ್ಧ ಕ್ರಮ ಕೈಗೊಳಬೇಕು. ಬರೀ ಹೇಳಿಕೆ ನೀಡಿ ಸಮಾಧಾನ ಪಡಿಸುವುದರಿಂದ ಒತ್ತುವರಿ ತೆರವಾಗುವುದಿಲ್ಲ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸೋಮವಾರ ಮಾರುತಿ ದೇವಸ್ಥಾನದ ಮೂಲಕ ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ನೆಹರು ವೃತ್ತದ ಮಾರ್ಗವಾಗಿ ಬಿಜೆಪಿ ಶಿರಹಟ್ಟಿ ಮಂಡಲದ ವತಿಯಿಂದ ಜನ ವಿರೋಧಿ, ರೈತ ವಿರೋಧಿ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿ ಮಾತನಾಡಿದರು.ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿರುವುದರ ಹಿಂದೆ ಚಿತಾವಣೆ ನಡೆದಿದೆ ಎಂಬ ಅನುಮಾನವಿದೆ. ಯಾರ ಆದೇಶದ ಹಿಂದೆ ಇಂತಹ ತಿದ್ದುಪಡಿಗಳಾಗಿವೆ ಎಂಬ ಬಗ್ಗೆ ತನಿಖೆಯಾಗಬೇಕಿದೆ. ಆದರೆ, ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಕಿಲ್ಲ. ರೈತರ ಪರವಾಗಿ ಬಿಜೆಪಿ ಸದಾ ಹೋರಾಟಕ್ಕೆ ಬರುತ್ತದೆ ಎಂದು ಭರವಸೆ ನೀಡಿದರು.
ತಾಲೂಕಿನಲ್ಲಿ ಖೊಟ್ಟಿ (ನಕಲಿ) ದಾಖಲೆ ಸೃಷ್ಟಿ ಮಾಡಿ ಆ ಮೂಲಕ ರೈತರಿಗೆ ವಂಚನೆ ಮಾಡಿರುವ ಕುರಿತು ಅಧಿಕಾರಿಗಳು ವಿವರವಾದ ಮಾಹಿತಿ ನೀಡಬೇಕು. ವಿವೇಚನೆ ಇಲ್ಲದೇ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರಗಳಿಂದಾಗಿ ರಾಜ್ಯದ ಅನೇಕ ಆಸ್ತಿಗಳ ವ್ಯಾಜ್ಯಗಳು ಬೀದಿಗೆ ಬರುತ್ತಿದೆ. ಹಲವೆಡೆ ಕೋಮು ಸಾಮರಸ್ಯಕ್ಕೆ ಧಕ್ಕೆ ಬರುತ್ತಿದ್ದು, ತಕ್ಷಣ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ನಿಮ್ಮ ರಾಜಕೀಯ ಹಿತಾಸಕ್ತಿಗೆ ಜನರನ್ನು ಹಾಗೂ ರೈತರನ್ನು ಬಲಿಪಶು ಮಾಡಬೇಡಿ. ನಿಮ್ಮ ಓಲೈಕೆ ರಾಜಕಾರಣ ಇಲ್ಲಿಗೆ ನಿಲ್ಲಿಸಿ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸುನೀಲ್ ಮಹಾಂತಶೆಟ್ಟರ, ತಾಪಂ ಮಾಜಿ ಅಧ್ಯಕ್ಷ ಜಾನು ಲಮಾಣಿ, ಫಕೀರೇಶ ರಟ್ಟಿಹಳ್ಳಿ, ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಶಂಕರ ಮರಾಠೆ, ಬಿ.ಡಿ. ಪಲ್ಲೇದ, ಗೂಳಪ್ಪ ಕರಿಗಾರ, ರಾಮಣ್ಣ ಕಂಬಳಿ, ಸಂದೀಪ ಕಪ್ಪತ್ತನವರ, ಪರಶುರಾಮ ಡೊಂಕಬಳ್ಳಿ, ಅಶೋಕ ವರವಿ, ಗಂಗಾಧರ ಮೆಣಸಿನಕಾಯಿ, ಯಲ್ಲಪ್ಪ ಇಂಗಳಗಿ, ರಾಜೀವರೆಡ್ಡಿ ಬೊಮ್ಮನಕಟ್ಟಿ, ಶ್ರೀನಿವಾಸ ಬಾರ್ಬರ, ನಂದಾ ಪಲ್ಲೇದ, ರೂಪಾ ಪಾಶ್ಚಾಪೂರ, ಬಸವರಾಜ ಪೂಜಾರ, ಮಲ್ಲು ಕಬಾಡಿ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನಾಕಾರರು ತಹಸೀಲ್ದಾರ್ ಕಾರ್ಯಾಲಯಕ್ಕೆ ಆಗಮಿಸುತ್ತಿದ್ದಂತೆ ಪೊಲೀಸರು ತಕ್ಷಣ ಕಚೇರಿ ಮುಖ್ಯ ಗೇಟ್ ಬಂದ್ ಮಾಡಿದ ಪರಿಣಾಮ ಕೆಲಕಾಲ ಗೊಂದಲಮಯ ಸನ್ನಿವೇಶ ಉಂಟಾಗಿತ್ತು. ತಹಸೀಲ್ದಾರ್ ಅನಿಲ ಬಡಿಗೇರ ಸ್ಥಳಕ್ಕೆ ಧಾವಿಸಿ ಕಚೇರಿ ಮುಂದೆಯೇ ಮನವಿ ಸ್ವೀಕರಿಸುವ ಭರವಸೆ ನೀಡಿದ್ದರಿಂದ ಪರಿಸ್ಥಿತಿ ಶಾಂತಗೊಂಡಿತು. ಸಿಪಿಐ ನಾಗರಾಜ ಮಾಡಳ್ಳಿ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.