ದೇಶದಲ್ಲಿ ವಕ್ಫ್‌ ಆಸ್ತಿ 9 ಲಕ್ಷ ಎಕರೆಯಷ್ಟಿದೆ, ಈ ಜಮೀನು ಬಂದಿದ್ದು ಎಲ್ಲಿಂದ?: ಕಾರಜೋಳ ಪ್ರಶ್ನೆ

KannadaprabhaNewsNetwork | Updated : Nov 04 2024, 01:08 PM IST

ಸಾರಾಂಶ

ದೇಶದಲ್ಲಿ 9 ಲಕ್ಷ ಎಕರೆಯಷ್ಟು ಆಸ್ತಿ ವಕ್ಫ್‌ ಹೆಸರಿನಲ್ಲಿದೆ.

ಬಳ್ಳಾರಿ: ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು 1952ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ವಕ್ಫ್‌ ಕಾನೂನು ಜಾರಿಗೆ ತಂದಾಗ ವಕ್ಫ್‌ ಆಸ್ತಿ 1.20 ಲಕ್ಷ ಎಕರೆ ಇತ್ತು. ಈ ದೇಶದಲ್ಲಿ 9 ಲಕ್ಷ ಎಕರೆಯಷ್ಟು ಆಸ್ತಿ ವಕ್ಫ್‌ ಹೆಸರಿನಲ್ಲಿದೆ. ಈ ಆಸ್ತಿ ಎಲ್ಲಿಂದ ಬಂತು? ದಾನ ಕೊಟ್ಟಿದ್ದಾ? ಖರೀದಿ ಮಾಡಿದ್ದಾ? ಪಿತ್ರಾರ್ಜಿತ ಆಸ್ತಿ ಇತ್ತಾ? ಎಂಬುದನ್ನು ದಾಖಲೆ ನೀಡಬೇಕು ಎಂದು ಬಿಜೆಪಿ ಮುಖಂಡ ಗೋವಿಂದ ಕಾರಜೋಳ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 10 ಜಿಲ್ಲೆಗಳಲ್ಲಿ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿದೆ. ವಕ್ಫ್‌ನಿಂದ ನೋಟಿಸ್‌ ನೀಡಿದ ಮೇಲೆ ರೈತರಿಗೆ ಗೊತ್ತಾಗಿದೆ. ಉಳಿದ ಜಿಲ್ಲೆಗಳಲ್ಲಿ ಏನೇನಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಕುಮ್ಮಕ್ಕಿನಿಂದಾಗಿಯೇ ವಕ್ಫ್‌ ಆಸ್ತಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ ಎಂದು ದೂರಿದರು.

ದೇಶ ರಕ್ಷಣೆ ಮಾಡುವ ಮಿಲಿಟರಿಗೆ 20 ಲಕ್ಷ ಎಕರೆ ಆಸ್ತಿಯಿದೆ. ರೈಲ್ವೆ ಇಲಾಖೆಗೆ 12 ಲಕ್ಷ ಎಕರೆ ಜಮೀನಿದೆ. ಈ ಎರಡು ಹೊರತುಪಡಿಸಿದರೆ ಅತಿ ಹೆಚ್ಚು ಆಸ್ತಿ ವಕ್ಫ್‌ ಬಳಿಯಿದೆ. 9 ಲಕ್ಷ ಎಕರೆಯಷ್ಟು ಆಸ್ತಿ ದೇಶದ ಯಾವುದೇ ಜಾತಿ, ಧರ್ಮ ಅಥವಾ ಸಂಸ್ಥೆಗಳಿಗೆ ಇಲ್ಲ. ಕಾಂಗ್ರೆಸ್ ಸರ್ಕಾರದ ಓಲೈಕೆಯ ರಾಜಕಾರಣದಿಂದಾಗಿಯೇ ನಿರ್ದಿಷ್ಟ ಧರ್ಮಕ್ಕೆ ಲಕ್ಷಾಂತರ ಎಕರೆ ಜಮೀನು ಪಾಲಾಗುತ್ತಿದೆ ಎಂದು ದೂರಿದರು.

ಚಾಲುಕ್ಯರು ಮೊದಲೋ? ವಕ್ಫ್‌ ಮೊದಲೋ?:

ಚಾಲುಕ್ಯರ ಕಾಲದ ದೇವಸ್ಥಾನಗಳು, ಮಠಗಳನ್ನು ವಕ್ಫ್‌ ಆಸ್ತಿ ಎಂದು ಪಹಣೆ ಬದಲಾವಣೆ ಮಾಡಲಾಗುತ್ತಿದೆ. ವಿಜಯಪುರ ಜಿಲ್ಲೆಯ ಪಡಗನೂರು ಗ್ರಾಮದಲ್ಲಿ ಚಾಲುಕ್ಯರ ಕಾಲದಲ್ಲಿ ಕಟ್ಟಿದ ಸೋಮೇಶ್ವರ ದೇವಸ್ಥಾನವಿದೆ. ಇವತ್ತಿಗೂ ದೇವಸ್ಥಾನದಲ್ಲಿ ನಿತ್ಯ ಪೂಜೆ ನಡೆಯುತ್ತಿದೆ. ಈ ದೇವಸ್ಥಾನದ 57 ಎಕರೆ ಜಮೀನನ್ನು ವಕ್ಫ್‌ಗೆ ಸೇರಿಸಲಾಗಿದೆ. ಸಿಂದಗಿಯಲ್ಲಿ 12ನೇ ಶತಮಾನದಲ್ಲಿ ಕಟ್ಟಿದ ವಿರಕ್ತಮಠ ಹಾಗೂ ಮಠದ ಆಸ್ತಿಯನ್ನು ವಕ್ಫ್‌ಗೆ ಸೇರಿಸಲಾಗಿದೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಸರ್ಕಾರಿ ಭೂಮಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ರೈತರ, ದೇವಸ್ಥಾನ, ಮಠಗಳ ಭೂಮಿಯನ್ನು ವಕ್ಫ್‌ ಆಸ್ತಿ ಎಂದು ಪಹಣಿಯಲ್ಲಿ ನಮೂದಿಸಲಾಗಿದೆ. ಹಾಗಾದರೆ ದೇಶದಲ್ಲಿ ವಕ್ಫ್‌ ಮೊದಲೋ ಅಥವಾ ಚಾಲುಕ್ಯರು ಮೊದಲೋ ಎಂಬುವುದನ್ನು ಸಿಎಂ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಸುಪ್ರೀಂಕೋರ್ಟ್‌ ಕಳೆದ 2023ರ ಜೂನ್‌ 23ರಂದು ನೀಡಿದ ಆದೇಶದಲ್ಲಿ ವಕ್ಫ್‌ ಆಸ್ತಿ ತನ್ನದೆಂದು ಹೇಳಲು ಪೂರಕ ದಾಖಲೆ ನೀಡಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ನಾವು ಸಹ ಅದನ್ನೇ ಒತ್ತಾಯ ಮಾಡುತ್ತಿದ್ದೇವೆ. ರಾಜ್ಯದಲ್ಲಿರುವ ಎಲ್ಲ ವಕ್ಫ್‌ ಆಸ್ತಿಯ ಮೂಲ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ ಕಾರಜೋಳ, ನಮ್ಮ ಪಿತಾರ್ಜಿತ ಆಸ್ತಿಗೆ ಯಾರೋ ಮಾಲೀಕರಾಗಲು ಬಿಡಲ್ಲ. ರಾಜ್ಯಾದ್ಯಂತ ಬಿಜೆಪಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಿದ್ದರಾಮಯ್ಯ ಮಹಾ ಮೋಸಗಾರ:

ಸಿಎಂ ಸಿದ್ದರಾಮಯ್ಯ ಮಹಾ ಮೋಸಗಾರ. ಒಳಮೀಸಲಾತಿ ಜಾರಿಗೆ ಇಲ್ಲಸಲ್ಲದ ಸುಳ್ಳು ಹೇಳುತ್ತಿದ್ದಾರೆ. ಸುಪ್ರೀಂಕೋರ್ಟ್‌ ಸೂಚನೆ ನೀಡಿದ ಬಳಿಕ ಒಳ ಮೀಸಲಾತಿ ಜಾರಿಗೆ ಸಿಎಂ ಹಿಂದೇಟು ಹಾಕುತ್ತಿರುವುದೇಕೆ ಎಂದು ಗೋವಿಂದ ಕಾರಜೋಳ ಪ್ರಶ್ನಿಸಿದರು.

ದಲಿತ ವಿರೋಧಿಯಾಗಿರುವ ಸಿಎಂ ಏಕವ್ಯಕ್ತಿ ಆಯೋಗ ಮಾಡಿ 3 ತಿಂಗಳು ದೂಡಿದ್ದಾರೆ. ಇದು ಮೋಸದ ಮತ್ತೊಂದು ಮುಖ. ದಲಿತರು ವಿದ್ಯಾವಂತರು ಆಗಬಾರದು, ಉದ್ಯೋಗ ಪಡೆಯಬಾರದು, ಉದ್ಧಾರ ಆಗಬಾರದೆಂಬ ಕಾರಣಕ್ಕೆ ಒಳ ಮೀಸಲಾತಿ ಜಾರಿಗೆ ತರುತ್ತಿಲ್ಲ. ನುಡಿದಂತೆ ನಡೆಯುವ ಸರ್ಕಾರವೆಂದು ಹೇಳುವ ಸಿದ್ದರಾಮಯ್ಯ ಅವರು ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಮುಖಂಡರಾದ ಕೆ.ಎ. ರಾಮಲಿಂಗಪ್ಪ, ಎಚ್‌. ಹನುಮಂತಪ್ಪ, ಗಣಪಾಲ್ ಐನಾಥ ರೆಡ್ಡಿ ಇದ್ದರು.

Share this article