ಹನುಮಸಾಗರ: ಗ್ರಾಮದಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿರುವ ಹನುಮಸಾಗರದಲ್ಲಿ ವಾರ್ಡ್ ವಿಂಗಡಣೆ ಸಂಬಂಧಿಸಿದ ಸಮೀಕ್ಷೆ ಕಾರ್ಯಗಳು ವೇಗವಾಗಿ ನಡೆಯುತ್ತಿವೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ತಿಳಿಸಿದ್ದಾರೆ.
ಇದರೊಂದಿಗೆ, ಈ ಹಿಂದೆ ಸೂಚಿಸಿದಂತೆ ಇನ್ನೂ ಆಸ್ತಿ ತೆರಿಗೆ ಪಾವತಿಸದವರು ಕೂಡಲೇ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ತೆರಿಗೆ ತುಂಬಬೇಕು ಎಂದು ಅವರು ಹೇಳಿದರು. ಜನನ ಪ್ರಮಾಣಪತ್ರ ಸೇರಿದಂತೆ ವಿವಿಧ ಅಗತ್ಯ ದಾಖಲೆಗಳು ಈಗ ಪಟ್ಟಣ ಪಂಚಾಯಿತಿಯಲ್ಲಿಯೇ ಲಭ್ಯವಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಪ್ರಸ್ತುತ ನಡೆಯುತ್ತಿರುವ ವಾರ್ಡ್ ಸಮೀಕ್ಷೆಯ ಆನಂತರ ಪಟ್ಟಣದಲ್ಲಿ ಸುಮಾರು ೧೮ ಅಥವಾ ೧೯ ವಾರ್ಡ್‌ಗಳು ರೂಪುಗೊಳ್ಳುವ ಸಾಧ್ಯತೆ ಇದೆ. ಸಿಬ್ಬಂದಿ ವರ್ಗಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ನಿರೀಕ್ಷಿಸಲಾಗಿದೆ. ಸದ್ಯ ಅನುಮೋದನೆಗೊಂಡಿರುವ ಗ್ರಾಮ ಪಂಚಾಯಿತಿ ಸಿಬ್ಬಂದಿ ಮುಂದುವರಿಯಲಿದ್ದಾರೆ ಎಂದು ಹೇಳಿದರು.ಪಟ್ಟಣ ವ್ಯಾಪ್ತಿಯಲ್ಲಿ ಯಾವುದೇ ಬ್ಯಾನರ್, ಜಾಹೀರಾತು ಫಲಕ ಅಥವಾ ಕಟೌಟ್‌ಗಳನ್ನು ಅಳವಡಿಸುವ ಮೊದಲು ಪಟ್ಟಣ ಪಂಚಾಯಿತಿಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ನಿಯಮ ಉಲ್ಲಂಘನೆ ಮಾಡಿದರೆ ಸಂಬಂಧಿತ ಅಧಿಕಾರಿಗಳಿಂದ ಅವುಗಳನ್ನು ತೆರವುಗೊಳಿಸಲಾಗುವುದು ಎಂದು ಎಚ್ಚರಿಸಿದರು.