ಜಿಲ್ಲೆಯಲ್ಲಿ ಅಕ್ರಮ ಮರಳು ಕಡಿವಾಣಕ್ಕೆ ತಾಕೀತು

KannadaprabhaNewsNetwork | Published : Mar 5, 2024 1:37 AM

ಸಾರಾಂಶ

ಜಿಲ್ಲೆಯಲ್ಲಿ ಕೃಷ್ಣಾ-ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮೇಲೆ ನಿಗಾ ವಹಿಸಬೇಕು, ಅಕ್ರಮ ದಂಧೆಗೆ ಕಡಿವಾಣ ಹಾಕಲು ಅಗತ್ಯಕ್ರಮ ವಹಿಸಬೇಕು

ರಾಯಚೂರು: ಜಿಲ್ಲೆಯಲ್ಲಿ ಕೃಷ್ಣಾ-ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮೇಲೆ ನಿಗಾ ವಹಿಸಬೇಕು, ಅಕ್ರಮ ದಂಧೆಗೆ ಕಡಿವಾಣ ಹಾಕಲು ಅಗತ್ಯಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ ನಾಯಕ ಕಟ್ಟುನಿಟ್ಟಿನ ಸೂಚನೆ ಸೋಮವಾರ ನೀಡಿದರು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಅಕ್ರಮ ಮರಳು ದಂಧೆ ಕಪ್ಪು ಚುಕ್ಕಿಯಾಗಿ ಮಾರ್ಪಟ್ಟಿದ್ದು, ಇದರಿಂದ ಜಿಲ್ಲೆ ಅಪಕೀರ್ತಿಗೆ ಗುರಿಯಾಗುತ್ತಿದೆ. ಆದರೂ ಸಹ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಅದನ್ನು ನಿಯಂತ್ರಿಸುವ ಕ್ರಮಗಳನ್ನು ಜರುಗಿಸದೇ ನಿರ್ಲಕ್ಷ್ಯ ತೋರಿದ್ದು ಸರಿಯಲ್ಲ. ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳನ್ನು ಸಹಿಸುವುದಿಲ್ಲ, ಸಂಬಂಧಿಸಿದ ಇಲಾಖೆಯ ಅಧಿಕಾರಿ, ಸಿಬ್ಬಂದಿ ಅಕ್ರಮ ತಡೆಗೆ ಶಿಸ್ತುಬದ್ಧ ಹಾಗೂ ಪರಿಣಾಮಕಾರಿ ಕ್ರಮವಹಿಸಬೇಕು. ಸಾರಿಗೆ ಇಲಾಖೆಯ ಅಧಿಕಾರಿಗಳು, ತಹಸೀಲ್ದಾರರು ಹಾಗೂ ಟಾಸ್ಕ್‌ಫೋರ್ಸ್‌ ಸಮಿತಿಯಿಂದ ಪರಸ್ಪರ ಸಹಕಾರ ಪಡೆದ ಅಕ್ರಮ ದಂಧೆಯನ್ನು ಮಟ್ಟಹಾಕಬೇಕು ಎಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಪುಷ್ಪಲತಾ ಮಾತನಾಡಿ, ದೇವದುರ್ಗ, ಸಿಂಧನೂರು ಹಾಗೂ ಮಾನ್ವಿ ತಾಲೂಕಿನಲ್ಲಿ ಮರಳು ಗಣಿಗಾರಿಕೆ ನಡೆಸಲು ಅರ್ಜಿ ಸಲ್ಲಿಸಲಾಗಿದೆ.

ರಾಯಚೂರು ತಾಲೂಕಿನ ಮಿಟ್ಟಿ ಮಲ್ಕಾಪುರನಲ್ಲಿ ಮೆ.ಶ್ರೀನಿವಾಸ್ ಮಿನರಲ್ಸ್, ಮ್ಯಾನೇಜಿಂಗ್ ಪಾರ್ಟನರ್ ಮದ್ದಿಪಾಟಿ ವೆಂಕಟರಮೇಶ ಹಾಗೂ ಮಾನ್ವಿಯ ಬುರಹಾನಪುರ ಗ್ರಾಮದ ಶ್ರೀನಿವಾಸ ರಾಜು ಎಂಬುವವರು ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ನಿರಾಕ್ಷೇಪಣೆ ಪತ್ರ ಪಡೆದಿದ್ದಾರೆ. ಜಂಟಿ ಇಲಾಖೆಯಿಂದ ಮೋಜಣಿ ಮಾಡಿದ್ದು ಖನಿಜದ ಲಭ್ಯವಿರುವ ಬಗ್ಗೆ ತಾಂತ್ರಿಕ ಅಧಿಕಾರಿಗಳ ವರದಿ ಪಡೆಯಲಾಗಿದೆ ಅದೇ ರೀತಿ ಮಾನ್ವಿಯ ಮೆ.ವಿಕಾಸ ಇಂಡಸ್ಟ್ರಿಸ್‌ವತಿಯಿಂದ ರೆಡಿಪ್ಲಾಸ್ಟ್ ತಯಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದು, ಇದಕ್ಕೆ ಮರಳಿನ ಅವಶ್ಯಕತೆ ಇದೆ. ಕೈಗಾರಿಕ ಘಟಕಕ್ಕೆ ಮರಳು ಪೂರೈಸಲು ಪ್ರತ್ಯೇಕ ಮರಳು ಬ್ಲಾಕ್ ನೀಡುವಂತೆ ಅರ್ಜಿ ಸಲ್ಲಿಸಲಾಗಿದ್ದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ನಿಖಿಲ್.ಬಿ, ರಾಯಚೂರು ತಹಸೀಲ್ದಾರ್ ಸುರೇಶ ವರ್ಮಾ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share this article