ಕಾವೇರಿ ಆರತಿ ಹೆಸರಿನಲ್ಲಿ ಹಣ ಪೋಲು: ಬಿ.ಟಿ.ವಿಶ್ವನಾಥ್ ಆರೋಪ

KannadaprabhaNewsNetwork |  
Published : Sep 26, 2024, 10:19 AM IST
25ಕೆಎಂಎನ್‌ಡಿ-5ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವೈಜ್ಞಾನಿಕ ಸಂಶೋಧನಾ ಪರಿಷತ್ ಗೌರವಾಧ್ಯಕ್ಷ ಬಿ.ಟಿ.ವಿಶ್ವನಾಥ್  ಮಾತನಾಡಿದರು. | Kannada Prabha

ಸಾರಾಂಶ

ಗಂಗಾರತಿ ಆಚರಣೆಗೆ ಹೇಗೆ ಜನರ ಹಣ ಪೋಲು ಮಾಡುವುದು ಅಪರಾಧವೋ, ಕಾವೇರಿ ಆರತಿಗೂ ಸರ್ಕಾರ ಮುಂದಾಗಿರುವುದು ಅಪರಾಧವೇ ಆಗಲಿದೆ. ಇದರ ಬದಲು ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಕೆರೆ, ಕುಂಟೆಗೆ ನೀರು ತುಂಬಿಸುವುದು. ಕೆರೆ ಜಾಲವನ್ನು ವಿಸ್ತರಣೆ ಮಾಡುವುದು. ಮುಖ್ಯವಾಗಿ ಕಾವೇರಿ ನದಿಗೆ ಸೇರುತ್ತಿರುವ ಕೊಳಚೆ ನೀರನ್ನು ತಪ್ಪಿಸಲಿ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರ ಕಾವೇರಿ ಆರತಿ ಹೆಸರಿನಲ್ಲಿ ಹಣ ಪೋಲು ಮಾಡುತ್ತಿರುವುದು ಖಂಡನೀಯ. ಇಂತಹ ಆಚರಣೆ ಬಿಟ್ಟು ರೈತರ ಬೆಳೆಗಳಿಗೆ ಹಾಗೂ ಜನಸಾಮಾನ್ಯರಿಗೆ ನೀರಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಿ ಎಂದು ಜಿಲ್ಲಾ ವೈಜ್ಞಾನಿಕ ಸಂಶೋಧನಾ ಪರಿಷತ್ ಗೌರವಾಧ್ಯಕ್ಷ ಬಿ.ಟಿ.ವಿಶ್ವನಾಥ್ ಒತ್ತಾಯಿಸಿದರು.

ಸಂವಿಧಾನದ ಆರ್ಟಿಕಲ್ ೫೧(ಎ)(ಎಚ್) ಸ್ಪಷ್ಟಪಡಿಸುವಂತೆ ದೇಶದ ಪ್ರಜೆ ತನ್ನ ನಡೆ, ನುಡಿ ಬದುಕಿನಲ್ಲಿ ವೈಚಾರಿಕತೆ ಅಳವಡಿಸಿಕೊಳ್ಳಬೇಕಿರುವುದು ಆದ್ಯ ಕರ್ತವ್ಯವಾಗಿದೆ. ಹೀಗಿರುವಾಗ ಸರ್ಕಾರ, ರಾಜಕೀಯ ಪಕ್ಷ ಪೈಪೋಟಿಗೆ ಬಿದ್ದು, ಧಾರ್ಮಿಕ ಚಟುವಟಿಕೆಗೆ ಜನರ ತೆರಿಗೆಯ ಹಣ ಪೋಲು ಮಾಡಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಗಂಗಾರತಿ ಆಚರಣೆಗೆ ಹೇಗೆ ಜನರ ಹಣ ಪೋಲು ಮಾಡುವುದು ಅಪರಾಧವೋ, ಕಾವೇರಿ ಆರತಿಗೂ ಸರ್ಕಾರ ಮುಂದಾಗಿರುವುದು ಅಪರಾಧವೇ ಆಗಲಿದೆ. ಇದರ ಬದಲು ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಕೆರೆ, ಕುಂಟೆಗೆ ನೀರು ತುಂಬಿಸುವುದು. ಕೆರೆ ಜಾಲವನ್ನು ವಿಸ್ತರಣೆ ಮಾಡುವುದು. ಮುಖ್ಯವಾಗಿ ಕಾವೇರಿ ನದಿಗೆ ಸೇರುತ್ತಿರುವ ಕೊಳಚೆ ನೀರನ್ನು ತಪ್ಪಿಸಲಿ. ಜನ, ಜಾನುವಾರು, ಪಕ್ಷಿ ಹಾಗೂ ಜಲಚರ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸಲಿ. ಅದನ್ನು ಬಿಟ್ಟು ಕಾವೇರಿ ಆರತಿ ಮಾಡುವುದರಿಂದ ಹಣ ವ್ಯರ್ಥವಾಗುವುದರ ಜತೆಗೆ ಜನರನ್ನು ಮೌಢ್ಯಕ್ಕೆ ತಳ್ಳಿದಂತಾಗುತ್ತದೆ ಎಂದರು.

ಇನ್ನು ಮಂಡ್ಯದಲ್ಲಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ವಿಷಯ. ಈ ಹಿನ್ನೆಲೆಯಲ್ಲಿ ನೆಲ ಮೂಲ ಸಂಸ್ಕೃತಿಯ ವೈಚಾರಿಕ ಗಟ್ಟಿತನದ ಜತೆಗೆ ಬುದ್ಧ ಮಾರ್ಗದ ಪ್ರತಿಪಾದಕರೂ ಆಗಿರುವ ಪ್ರೊ.ಕೆ.ಎಸ್.ಭಗವಾನ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ಪರಿಷತ್‌ನ ಗೌರವಾಧ್ಯಕ್ಷೆ ವಸಂತಮ್ಮ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿಯೂ ಮೌಢ್ಯಾಚರಣೆ ಕ್ಯಾನ್ಸರ್‌ನಂತೆ ಹಬ್ಬುತ್ತಿದೆ. ಇದಕ್ಕೆ ಮಹಿಳೆಯರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಲ್ಲದೆ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ವ್ಯಾಪಕವಾಗಿ ನಡೆಯುತ್ತಿದೆ. ಆದ್ದರಿಂದ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ೮೭ನೇ ನುಡಿಜಾತ್ರೆಯಲ್ಲಿ ಮಹಿಳಾ ವೈಚಾರಿಕ ಗೋಷ್ಠಿ ಆಯೋಜನೆ ಮಾಡಬೇಕೆಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಶಿವಲಿಂಗಯ್ಯ, ಗೌರವಾಧ್ಯಕ್ಷ ಬಸವರಾಜು, ಉಪಾಧ್ಯಕ್ಷ ಗುರುಮೂರ್ತಿ, ವೆಂಕಟಚಲಯ್ಯ, ಜಯರಾಮು ಇದ್ದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ