ಕೆರೆಗೆ ತ್ಯಾಜ್ಯ ನೀರು; ಫಾಕ್ಸ್‌ಕಾನ್‌ ಕಂಪನಿಗೆ ಎಚ್ಚರಿಕೆ

KannadaprabhaNewsNetwork |  
Published : Apr 03, 2025, 02:45 AM IST
ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಕೆರೆಗೆ ಫಾಕ್ಸ್‌ಕಾನ್‌ ಕಂಪನಿಯಿಂದ  ತ್ಯಾಜ್ಯ ನೀರು ಹರಿಯುತ್ತಿರುವ ಕುರಿತು ದೂರು ಕೇಳಿ ಬಂದ ಹಿನ್ನಲೆ  ಸ್ಥಳಕ್ಕೆ  ಶಾಸಕ  ಧೀರಜ್‌  ಮುನಿರಾಜ್‌  ಭೇಟಿ  ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ನಮ್ಮ ತಾಲೂಕಿನ ಜನರ ಜೀವ ತೆಗೆಯಲು ಬಂದಿದ್ದೀರಾ, ಕೊನಘಟ್ಟ ಕೆರೆಗೆ ಹರಿದು ಹೋಗುತ್ತಿರುವ ಕಾರ್ಖಾನೆಯ ಕಲುಷಿತ ಘನ ತ್ಯಾಜ್ಯ ನೀರನ್ನು ಈ ಕೂಡಲೇ ನಿಲ್ಲಿಸದಿದ್ದರೆ ಕಾರ್ಖಾನೆಯ ಮುಂದೆ ಧರಣಿ ಕೂರುತ್ತೇನೆ ಎಂದು ಶಾಸಕ ಧೀರಜ್‌ ಮುನಿರಾಜ್ ಫಾಕ್ಸ್‌ಕಾನ್‌ ಕಂಪನಿ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ದೊಡ್ಡಬಳ್ಳಾಪುರ: ನಮ್ಮ ತಾಲೂಕಿನ ಜನರ ಜೀವ ತೆಗೆಯಲು ಬಂದಿದ್ದೀರಾ, ಕೊನಘಟ್ಟ ಕೆರೆಗೆ ಹರಿದು ಹೋಗುತ್ತಿರುವ ಕಾರ್ಖಾನೆಯ ಕಲುಷಿತ ಘನ ತ್ಯಾಜ್ಯ ನೀರನ್ನು ಈ ಕೂಡಲೇ ನಿಲ್ಲಿಸದಿದ್ದರೆ ಕಾರ್ಖಾನೆಯ ಮುಂದೆ ಧರಣಿ ಕೂರುತ್ತೇನೆ ಎಂದು ಶಾಸಕ ಧೀರಜ್‌ ಮುನಿರಾಜ್ ಫಾಕ್ಸ್‌ಕಾನ್‌ ಕಂಪನಿ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ಫಾಕ್ಸ್ ಕಾನ್ ಕಂಪನಿಯ ಕಲುಷಿತ ಘನ ತ್ಯಾಜ್ಯ ನೀರು ತಾಲೂಕಿನ ಕೊನಘಟ್ಟ ಕೆರೆಯ ಒಡಲು ಸೇರುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ‌. ಕಳೆದ ಕೆಲವು ದಿನಗಳಿಂದ ಫಾಕ್ಸ್ ಕಾನ್ ಕಂಪನಿಯ ಕಲುಷಿತ ನೀರು ತಾಲೂಕಿನ ಕೊನಘಟ್ಟ ಕೆರೆಯ ಒಡಲು ಸೇರುತ್ತಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಸ್ಥಳಕ್ಕೆ ಆಗಮಿಸಿದ ಶಾಸಕರು ಕಂಪನಿ ವಿರುದ್ಧ ಹರಿಹಾಯ್ದರು.

ಫಾಕ್ಸ್ ಕಾನ್ ಕಂಪನಿ ನೂತನ ಎಸ್‌ಟಿಪಿ ಪ್ಲಾಂಟ್ ಮಾಡುತ್ತಿದ್ದು, ಕಾರ್ಖಾನೆಯ ಕಲುಷಿತ ನೀರನ್ನು ತಾತ್ಕಾಲಿಕವಾಗಿ ಶೇಖರಣೆ ಮಾಡಲು ಒಂದು ಕುಂಟೆಯನ್ನು ನಿರ್ಮಾಣ ಮಾಡಲಾಗಿದೆ. ಕುಂಟೆ ತುಂಬಿದ ಕಲುಷಿತ ನೀರು ರಾಜಕಾಲುವೆಯ ಮೂಲಕ ಕೊನಘಟ್ಟ ಕೆರೆ ಸೇರುತ್ತಿದೆ ಎಂದು ಆರೋಪಿಸಿದರು.

ಕಲುಷಿತ ಘನ ತ್ಯಾಜ್ಯ ನೀರನ್ನು ತಾತ್ಕಾಲಿಕವಾಗಿ ಶೇಖರಣೆ ಮಾಡಲು ನಿರ್ಮಿಸಿದ್ದ ಕುಂಟೆ ತುಂಬಿ ಹೋಗಿದ್ದು ಈಗ ಕಟ್ಟೆಯನ್ನು ಹೊಡೆದು ರಾಜಕಾಲುವೆಗೆ ಹರಿಯ ಬಿಡಲಾಗಿದೆ ಎಂಬ ಸುದ್ದಿ ತಿಳಿದ ಗ್ರಾಮಸ್ಥರು ಕಂಪನಿಯ ಬಳಿ ಜಮಾಯಿಸಿ ಕಾರ್ಖಾನೆಯ ಕಲುಷಿತ ನೀರು ನೇರವಾಗಿ ನಮ್ಮ ಗ್ರಾಮದ ಕೆರೆಗೆ ಹರಿದು ಬರುತ್ತಿದೆ. ಈ ಕೂಡಲೇ ಕೆರೆಗೆ ಹರಿಯುತ್ತಿರುವ ಕಲುಷಿತ ನೀರನ್ನು ತಕ್ಷಣ ಬಂದ್ ಮಾಡುವಂತೆ ಸ್ಥಳೀಯರು ಆಗ್ರಹಿಸಿದರು.

ಸದ್ಯ ಕುಂಟೆಯ ಕಟ್ಟೆ ಒಡೆದಿರುವುದನ್ನು ಮುಚ್ಚುವಂತೆ ಪಟ್ಟು ಹಿಡಿದಿದ್ದರು. ಇಲ್ಲಿನ ತ್ಯಾಜ್ಯ ನೀರು ರಾಜಕಾಲುವೆ ಸೇರಿದಂತೆ ಯಾವುದೇ ಮೂಲಗಳಿಂದ ಹೊರಬಾರದಂತೆ ಸಿಮೆಂಟ್ ವಾಲ್ ನಿರ್ಮಿಸುವಂತೆ ಒತ್ತಾಯಿಸಿದರು.

ವಿಷಯ ತಿಳಿದು ಬೆಳಗ್ಗೆ 10 ಗಂಟೆಯಿಂದಲೇ ಶಾಸಕ ಧೀರಜ್ ಮುನಿರಾಜು ಜೊತೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದರು. ಕಾರ್ಖಾನೆಯ ಕಲುಷಿತ ನೀರು ಕೆರೆಗೆ ಬಿಟ್ಟಿರುವ ಬಗ್ಗೆ ವಿವರಣೆ ಕೇಳಲು ಕಾರ್ಖಾನೆಯ ಸಿಬ್ಬಂದಿಯನ್ನು ಕರೆದರು. ಆದರೆ, ಫಾಕ್ಸ್ ಕಾನ್ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ಬರುವುದಕ್ಕೆ ಮೀನಮೇಷ ಎಣಿಸುತ್ತಾ ಒಬ್ಬರ ಮೇಲೆ ಮತ್ತೊಬ್ಬರು ಹೇಳಿಕೊಂಡು ಕಾಲಹರಣ ಮಾಡುತ್ತಿದ್ದರು. ಶಾಸಕರು, ಅಧಿಕಾರಿಗಳು ಹಾಗೂ ಗ್ರಾಮಸ್ಥರ ಆಗ್ರಹಕ್ಕೆ ಸಿಬ್ಬಂದಿ ಗಮನಹರಿಸದಿರುವುದು ಸ್ಥಳೀಯರು ಹಾಗೂ ಶಾಸಕರಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು.

ಕಂಪನಿಯಿಂದ ಕೆರೆಗೆ ಹರಿಯುತ್ತಿರುವ ಕಲುಷಿತ ನೀರು ನಿಲ್ಲುವವರೆಗೂ ಸ್ಥಳದಿಂದ ಹೊರಡುವುದಿಲ್ಲ ಎಂದು ಶಾಸಕ ಧೀರಜ್ ಮುನಿರಾಜ್ ಅವರು ಪಟ್ಟುಹಿಡಿದರು. ನಂತರ ಸ್ಥಳಕ್ಕೆ ಬಂದ ಕಾರ್ಖಾನೆಯ ಸಿಬ್ಬಂದಿ ಹೊಡೆದಿರುವ ಕುಂಟೆಯ ಕಟ್ಟೆಯನ್ನು ಮುಚ್ಚಿದರು.

ಈ ವೇಳೆ ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್, ತಾಪಂ ಇಒ ಮುನಿರಾಜು, ಗ್ರಾಪಂ ಅಧ್ಯಕ್ಷೆ ಜ್ಯೋತಿ, ಪಿಡಿಒ ರಶ್ಮಿ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

ಕೋಟ್‌...........

ಕೆರೆಗಳು ಹಳ್ಳಿಗಳ ಜೀವಾಳ. ಅಂತಹ ಕೆರೆಗಳಿಗೆ ಕಾರ್ಖಾನೆಗಳ ತ್ಯಾಜ್ಯ ನೀರು ಹರಿಸಿ, ಕಲುಷಿತಗೊಳಿಸಿ ಗ್ರಾಮಸ್ಥರಿಗೆ ರೋಗಗಳು ತಂದಿಟ್ಟರೆ ಸುಮ್ಮನಿರುವುದಿಲ್ಲ. ಕ್ಷೇತ್ರದ ಯಾವುದೇ ಕೆರೆಯನ್ನು ಕಲುಷಿತಗೊಳಿಸಲು ಬಿಡುವುದಿಲ್ಲ. ಕೆರೆಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಗ್ರಾಮಸ್ಥರು ಸಹಕರಿಸಬೇಕು.

-ಧೀರಜ್‌ ಮುನಿರಾಜ್‌, ಶಾಸಕರು

2ಕೆಡಿಬಿಪಿ6-

ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಕೆರೆಗೆ ಫಾಕ್ಸ್‌ಕಾನ್‌ ಕಂಪನಿಯಿಂದ ತ್ಯಾಜ್ಯ ನೀರು ಹರಿಯುತ್ತಿರುವ ಕುರಿತು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಶಾಸಕ ಧೀರಜ್‌ ಮುನಿರಾಜ್‌ ಭೇಟಿ ನೀಡಿ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!