ಸ್ಕೈ ಶೋ ನೋಡಿ, ಈಗಲೇ ಗಗನ್‌ಯಾನ್‌ ಕಣ್ತುಂಬಿಕೊಳ್ಳಿ!

KannadaprabhaNewsNetwork |  
Published : Apr 07, 2024, 01:46 AM IST
nehru planetarium 1 | Kannada Prabha

ಸಾರಾಂಶ

ನೆಹರು ತಾರಾಲಯದಲ್ಲಿ ಗಗನ ಯಾತ್ರೆಯ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಭಾನುವಾರದಿಂದ ಜನರಿಗೂ ವೀಕ್ಷಣಾ ಸೌಲಭ್ಯ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಬಾಹ್ಯಾಕಾಶ ನೋಡುತ್ತ ಮುಂದಿನ ಗಗನ್‌ಯಾನ್ ಯಾತ್ರೆಯನ್ನು ಈಗಲೇ ಕಣ್ತುಂಬಿಕೊಳ್ಳಬೇಕೆ? ಇಸ್ರೋದ ಇತಿಹಾಸದಿಂದ ಭಾರತದ ಖಗೋಳ ಸಾಧನೆಯನ್ನು ಅಚ್ಚರಿಯಿಂದ ಅರಿಯಬೇಕೆ, ಹಾಗಿದ್ದರೆ ನಗರದ ಜವಾಹರ್‌ಲಾಲ್ ನೆಹರು ತಾರಾಲಯಕ್ಕೆ ಬನ್ನಿ!

‘ಭಾರತೀಯ ಅಂತರಿಕ್ಷ ಯಾತ್ರೆ’ ಶೀರ್ಷಿಕೆಯಲ್ಲಿ ತಾರಾಲಯವು ಚಕಿತಗೊಳಿಸುವ ‘ಸ್ಕೈ ಶೋ’ ಸಾಕ್ಷ್ಯಚಿತ್ರ ಪ್ರದರ್ಶನ ರೂಪಿಸಿದೆ. ಹೆಸರಿಗೆ ತಕ್ಕಂತೆ ಬೃಹತ್‌ 360 ಡಿಗ್ರಿಯ ನೀಲಾಗಾಸದಂತ ಪರದೆಯಲ್ಲಿ ಪ್ರಸಾರವಾಗುವ ಈ ಚಿತ್ರ ಅಕ್ಷರಶಃ ಖಗೋಳ ಲೋಕಕ್ಕೆ ಕರೆದೊಯ್ಯುತ್ತದೆ.

ಶನಿವಾರ ಇದರ ಮೊದಲ ಪ್ರದರ್ಶನಕ್ಕೆ ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹಾಗೂ ಇಸ್ರೋ ಗಗನಯಾನ್‌ ಯೋಜನಾ ನಿರ್ದೇಶಕ ಆರ್. ಹಟನ್ ಅವರು ಚಾಲನೆ ನೀಡಿದರು.

ಭಾರತೀಯ ವಿಜ್ಞಾನಿಗಳ ಅಂತರಿಕ್ಷದ ಆರಂಭಿಕ ಹೆಜ್ಜೆ, ಮೈಲುಗಲ್ಲಾದ ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿಗಳ ಉಡಾವಣೆಗಳನ್ನು ಆ್ಯನಿಮೇಷನ್‌, ಅತ್ಯಾಧುನಿಕ ವಿಡಿಯೋಗ್ರಫಿ ತಂತ್ರಜ್ಞಾನದ ಮೂಲಕ ಈ ‘ಸ್ಕೈ ಶೋ’ ಮೂಡಿಬಂದಿದೆ.

ಈ ವೇಳೆ ಮಾತನಾಡಿದ ಎ.ಎಸ್. ಕಿರಣ್ ಕುಮಾರ್, 1960ರಲ್ಲಿನ ಸೌಂಡಿಂಗ್ ರಾಕೆಟ್‌ನಿಂದ ಇಂದಿನ ಗಗನಯಾನದವರೆಗೆ ವಿವಿಧ ಹಂತಗಳನ್ನು ಮಕ್ಕಳಿಗೂ ಅರ್ಥವಾಗುವಂತೆ ಸರಳವಾಗಿ ರೂಪಿಸಲಾಗಿದೆ. ಚಂದ್ರಯಾನ 3ರ ಬಳಿಕ ವಿಶ್ವದಾದ್ಯಂತ ಹೆಚ್ಚಿನ ಯುವಕರಲ್ಲಿ ವಿಜ್ಞಾನ, ಬಾಹ್ಯಾಕಾಶ ಆಸಕ್ತಿ ಮೂಡಿದೆ. ಅದಕ್ಕೆ ಇಂತ ಶೋಗಳು ಹೆಚ್ಚು ನೀರೆರೆಯಲಿವೆ ಎಂದರು.

ಇಸ್ರೋ ಗಗನಯಾನ್‌ ಯೋಜನಾ ನಿರ್ದೇಶಕ ಆರ್. ಹಟನ್, ಬಹುಸಂಖ್ಯೆಯಲ್ಲಿ ಯುವಜನತೆ ಮತ್ತು ವಿದ್ಯಾಾರ್ಥಿಗಳು ವಿಜ್ಞಾನ ಅದರಲ್ಲೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಆಸಕ್ತಿ ತೋರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.ಇಂದಿನಿಂದ ವೀಕ್ಷಣೆಗೆ ಲಭ್ಯ

ಭಾನುವಾರದಿಂದ ಸಾರ್ವಜನಿಕರಿಗೆ ಈ 30 ನಿಮಿಷದ ‘ಸ್ಕೈ ಶೋ’ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಸೋಮವಾರ, ಎರಡನೇ ಮಂಗಳವಾರ ಹೊರತುಪಡಿಸಿ, ಪ್ರತಿದಿನ ಬೆಳಗ್ಗೆ 10.30ರಿಂದ ಆಂಗ್ಲ ಭಾಷೆಯಲ್ಲಿ ಮತ್ತು 11.30ರಿಂದ ಕನ್ನಡ ಭಾಷೆಯಲ್ಲಿ ಪ್ರದರ್ಶಿಸಲಾಗುತ್ತದೆ. ಪ್ರದರ್ಶನವು 2 ತಿಂಗಳವರೆಗೆ ನಡೆಯಲಿದ್ದು, ವೀಕ್ಷಕರ ಆಸಕ್ತಿ ಮೇರೆಗೆ ಪ್ರದರ್ಶನ ಮುಂದುವರೆಸಲಾಗುತ್ತದೆ ಎಂದು ತಾರಾಲಯದ ನಿರ್ದೇಶಕ ಡಾ. ಬಿ.ಆರ್. ಗುರುಪ್ರಸಾದ್ ತಿಳಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ