ನೀರಿನ ಹಾಹಾಕಾರ, ಜಿಲ್ಲಾ ಪಂಜಾಯಿತಿ ಆವರಣದಲ್ಲಿ ಹೀಗೊಂದು ಕಾಳಜಿ. ಬೇಸಗೆ ಸಂಕಷ್ಟ ನಿವಾರಣೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸರ್ಕಾರಿ ಕಚೇರಿಗಳೆಂದರೆ ಕಡತಗಳು, ಅನುದಾನ ವ್ಯಯ, ಎಷ್ಟು ಬಂತು, ಎಷ್ಟು ಹೋಯ್ತು ಎಂಬ ಲೆಕ್ಕಾಚಾರಗಳೇ ಜಾಸ್ತಿ. ಮಾನವೀಯ ಅಂತಃಕರಣಗಳು ಗೋಚರಿಸುವುದು ತುಸು ಕಷ್ಟ ಸಾಧ್ಯ. ಇಂತಹ ಬಿರು ಬೇಸಗೆ ನಡುವೆಯೇ ಪಕ್ಷಿಗಳಿಗೆ ನೀರು ಆಹಾರ ವ್ಯವಸ್ಥೆ ಮಾಡುವುದರ ಮೂಲಕ ಜಿಲ್ಲಾ ಪಂಚಾಯಿತಿ ಕಚೇರಿ ಗಮನ ಸೆಳೆದಿದೆ.ಬಿಸಿಲ ಧಗೆಗೆ ಪ್ರಾಣಿ-ಪಕ್ಷಿಗಳು ಬಾಯಾರಿ ಬಳಲುತ್ತಿರುತ್ತವೆ. ಮಡಿಕೆ-ಕುಡಿಕೆಯಲ್ಲಿ ನೀರನ್ನಿಡಿ. ಪ್ರಾಣಿ, ಪಕ್ಷಿಗಳ ದಾಹ ನೀಗಿಸಿ ಎಂಬ ಸಂದೇಶಗಳು ಬೇಸಿಗೆ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಿಗೆ ಬೀಳುತ್ತವೆ. ಆದರೆ ಇದನ್ನು ಅಕ್ಷರಶಃ ಕಾರ್ಯಗತಗೊಳಿಸುವ ಮೂಲಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಪಕ್ಷಿ ಪ್ರೇಮ ಮೆರೆದಿದ್ದಾರೆ.
ಚಿತ್ರದುರ್ಗದಲ್ಲಿ ಈ ಬಾರಿ ಬಿಸಿಲಿನ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಿನಲ್ಲಿ ಕಂಡುಬರುತ್ತಿದ್ದ ಬಿರು ಬೇಸಿಗೆ, ಈ ಬಾರಿ ಮಾರ್ಚ್ ತಿಂಗಳಿನಲ್ಲಿಯೇ ತನ್ನ ಪ್ರತಾಪ ತೋರಲು ಆರಂಭಿಸಿದೆ. ಈ ಹಿನ್ನಲೆಯಲ್ಲಿ ಪಕ್ಷಿಗಳ ಹಸಿವು ನೀಗಿಸುವ ಹಾಗೂ ದಾಹ ತಣಿಸುವ ಪ್ರಯತ್ನವೊಂದು ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದಿದೆ.ಬೇಸಿಗೆಯಲ್ಲಿ ಸಾಮಾನ್ಯವಾಗಿ ಜನರೊಂದಿಗೆ ಪ್ರಾಣಿ, ಪಕ್ಷಿಗಳು ಸಹ ಬಿಸಿಲಿನ ತಾಪಕ್ಕೆ ಸಿಲುಕಿ ಕಂಗಲಾಗುವುದು ಸಹಜ. ಹೀಗಾಗಿ ಪ್ರಾಣಿ-ಪಕ್ಷಿಗಳು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುವುದು ಅಸಾಮಾನ್ಯವೇನಲ್ಲ. ಮನುಷ್ಯರಿಗೆ ನೀರಡಿಕೆಯಾದರೆ ಎಲ್ಲಿಂದಾದರೂ ನೀರು ಪಡೆದು ಕುಡಿಯುತ್ತೇವೆ. ಆದರೆ ಮೂಕ ಪ್ರಾಣಿ-ಪಕ್ಷಿಗಳಿಗೆ ಎಲ್ಲಿ ನೀರು ಸಿಗುತ್ತದೆಯೋ ಎಂದು ಹುಡುಕಿಕೊಂಡು ಅಲೆದಾಡಬೇಕು.
ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಗಿಡ-ಮರಗಳಿಗೆ ಮತ್ತು ಕಾರ್ಯಾಲಯದ ಮಹಡಿ ಮೇಲೆ ಸಿಇಓ ಸೋಮಶೇಖರ್ ತಮ್ಮ ಸ್ವಂತ ಹಣದಲ್ಲಿ ಪ್ಲಾಸ್ಟಿಕ್ ಬೌಲ್‍ಗಳನ್ನು ನೇತು ಹಾಕಿ, ಒಂದರಲ್ಲಿ ನೀರು, ಇನ್ನೊಂದರಲ್ಲಿ ವಿವಿಧ ಬಗೆಯ ಧಾನ್ಯ, ಕಾಳುಗಳನ್ನು ಹಾಕಿದ್ದಾರೆ. ಇದರಿಂದಾಗಿ ಪಕ್ಷಿಗಳು ಬಂದು ಆಹಾರ ತಿಂದು, ನೀರನ್ನು ಕುಡಿದು, ಹಸಿವು ಹಾಗೂ ದಣಿವು ನೀಗಿಸಿಕೊಳ್ಳುತ್ತಿದ್ದು, ಇದರಿಂದಾಗಿ ಜಿಲ್ಲಾ ಪಂಚಾಯಿತಿ ಆವರಣ ಪಕ್ಷಿಗಳ ಚಿಲಿಪಿಲಿ, ಕಲರವದಿಂದ ಕೂಡಿದೆ.ಜನರ ದುರಾಸೆಗೆ ಅನೇಕ ಪ್ರಾಣಿ ಪಕ್ಷಿ ಸಂಕುಲಗಳು ನಾಶವಾಗುತ್ತಿವೆ. ಇಂತಹ ಸಮಯದಲ್ಲಿ ಪ್ರಾಣಿ, ಪಕ್ಷಿಗಳ ಸಂಕುಲವನ್ನು ಉಳಿಸಿ, ಬೆಳೆಸಬೇಕಾದ್ದು ಮಾನವೀಯ ಧರ್ಮವಾಗಿದೆ. ಹೀಗಾಗಿಯೇ ಜಿಪಂ ಆವರಣದಲ್ಲಿ ಪಕ್ಷಿಗಳ ಹಸಿವು ಹಾಗೂ ನೀರಿನ ದಾಹ ನೀಗಿಸಲು ಗಿಡಮರಗಳಲ್ಲಿ ಪ್ಲಾಸ್ಟಿಕ್ ಬೌಲ್‍ಗಳನ್ನು ನೇತುಹಾಕಿಸಿದ್ದೇನೆ. ಪಕ್ಷಿಗಳು ಇದರಿಂದ ತಮ್ಮ ದಾಹ ನೀಗಿಸುವುದನ್ನು ಕಂಡಾಗ ಖುಷಿಯಾಗುತ್ತದೆ. ಇದೇ ರೀತಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯತಿಗಳ ವ್ಯಾಪ್ತಿಯಲ್ಲಿ ಇಓ ಗಳು ಮತ್ತು ಪಿಡಿಒ ಗಳು ತಮ್ಮ ವೈಯಕ್ತಿಕ ಹಣದಲ್ಲಿ ಪಕ್ಷಿಗಳ ನೀರಿನ ದಾಹ ನೀಗಿಸಲು ಮುಂದಾಗಬೇಕು. ತಮ್ಮ ಪಂಚಾಯತಿ ವ್ಯಾಪ್ತಿ ಸುತ್ತಮುತ್ತಲಿರುವ ಗಿಡ ಮರ, ಮಹಡಿಗಳ ಮೇಲೆ ಪಕ್ಷಿಗಳಿಗೆ ಒಂದಿಷ್ಟು ನೀರು ಮತ್ತು ಆಹಾರವಿನ್ನಿಡುವ ಕಾರ್ಯ ಮಾಡುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿರುವುದಾಗಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಹೇಳಿದರು.