ಜ.5ರಿಂದಲೇ ಬೇಸಿಗೆ ಬೆಳೆಗೆ ಭದ್ರಾ ನೀರು ಹರಿಸಿ

KannadaprabhaNewsNetwork |  
Published : Jan 02, 2025, 12:33 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಬೇಸಿಗೆ ಬೆಳೆಗೆ ಭದ್ರಾ ಅಣೆಕಟ್ಟೆಯಿಂದ ಭದ್ರಾ ನಾಲೆಗಳಿಗೆ ಜ.5ರಂದಲೇ ನೀರು ಹರಿಸುವಂತೆ ಜಿಲ್ಲಾ ರೈತರ ಒಕ್ಕೂಟದಿಂದ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತ ಮೂಲಕ ಮನವಿ ಅರ್ಪಿಸಲಾಯಿತು. ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಜಿಲ್ಲಾಧಿಕಾರಿ ಅವರನ್ನು ಭೇಟಿಯಾದ ನಿಯೋಗದ ಪದಾಧಿಕಾರಿಗಳು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

-ಭದ್ರಾ ಡ್ಯಾಂನಲ್ಲಿ 183 ಅಡಿ ನೀರು ಲಭ್ಯವಿದ್ದು, ತಡವಾದಲ್ಲಿ ರೈತರಿಗೆ ಭಾರಿ ಅನಾನುಕೂಲ: ರೈತರ ಒಕ್ಕೂಟ ನಿಯೋಗ ಮನವಿ ಕನ್ನಡಪ್ರಭ ವಾರ್ತೆ ದಾವಣಗೆರೆ

ಬೇಸಿಗೆ ಬೆಳೆಗೆ ಭದ್ರಾ ಅಣೆಕಟ್ಟೆಯಿಂದ ಭದ್ರಾ ನಾಲೆಗಳಿಗೆ ಜ.5ರಂದಲೇ ನೀರು ಹರಿಸುವಂತೆ ಜಿಲ್ಲಾ ರೈತರ ಒಕ್ಕೂಟದಿಂದ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತ ಮೂಲಕ ಮನವಿ ಅರ್ಪಿಸಲಾಯಿತು.

ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಜಿಲ್ಲಾಧಿಕಾರಿ ಅವರನ್ನು ಭೇಟಿಯಾದ ನಿಯೋಗದ ಪದಾಧಿಕಾರಿಗಳು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಒಕ್ಕೂಟದ ಮುಖಂಡ ಮಾತನಾಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ, ಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆಯಿಂದಾಗಿ ದಾವಣಗೆರೆ ಜಿಲ್ಲೆಯಲ್ಲಿ 1.60 ಲಕ್ಷ ಎಕರೆ ಪ್ರದೇಶದಲ್ಲಿ ಬತ್ತ ಬೆಳೆಯಲಾಗುತ್ತದೆ. ಭದ್ರಾ ಅಣೆಕಟ್ಟೆಯು ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಪ್ರಸ್ತುತ ಬೇಸಿಗೆ ಹಂಗಾಮಿನಲ್ಲಿ ಬತ್ತ ಬೆಳೆಯುವ ಸಲುವಾಗ ಕೊಳವೆಬಾವಿ ಮತ್ತಿತರೆ ನೀರಿನ ಸೌಲಭ್ಯವಿರುವ ರೈತರು ಈಗಾಗಲೇ ಸಸಿ ಮಡಿ ತಯಾರಿಸಿ, ಬೀಜ ಚೆಲ್ಲಿದ್ದಾರೆ ಎಂದರು.

ಉಳಿದ ರೈತರು ಸಸಿ ಮಡಿಗೆ ಬೀಜ ಚೆಲ್ಲಲು ಕಾಲುವೆಗಳಲ್ಲಿ ನೀರು ಹರಿಸುವುದನ್ನೇ ಕಾಯುತ್ತಿದ್ದಾರೆ. ಮತ್ತಷ್ಟು ರೈತರು ಬೀಜ ಉಗ್ಗುವ ಮೂಲಕ ನೇರ ಬಿತ್ತನೆ ಮಾಡುವ ಚೆಲ್ಲುವ ಪದ್ಧತಿ ಅನುಸರಿಸಿಕೊಂಡು ಬಂದವರೂ ಭದ್ರಾ ನಾಲೆ ನೀರಿಗಾಗಿ ಇದಿರು ನೋಡುತ್ತಿದ್ದಾರೆ. ಈ ಹಿನ್ನೆಲೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೇಸಿಗೆ ಬೆಳೆ ಬೆಳೆಯಲು ಅನುಕೂಲವಾಗುವಂತೆ ಜ.5ರಿಂದಲೇ ನಾಲೆಗಳಿಗೆ ನೀರು ಹರಿಸಲು ರಾಜ್ಯ ಸರ್ಕಾರ ಆದೇಶ ಮಾಡಬೇಕು ಎಂದು ಆಗ್ರಹಿಸಿದರು.

ಭದ್ರಾ ಡ್ಯಾಂನಲ್ಲಿ 183 ಅಡಿ ನೀರು ಸಂಗ್ರಹವಾಗಿ, ಅಣೆಕಟ್ಟೆ ಸಂಪೂರ್ಣ ತುಂಬಿದೆ. ನಾಲೆಗಳಿಗೆ ನೀರು ಹರಿಸುವುದು ತಡವಾದರೆ ಬೇಸಿಗೆ ಹಂಗಾಮಿನಲ್ಲಿ ಬತ್ತದ ಬೆಳೆ ಬೆಳೆಯಲು ಅನಾನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆದು, ನಾಲೆಗಳಿಗೆ ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಬೇಕು. ಅಣೆಕಟ್ಟೆಯಲ್ಲಿ ಸಮೃದ್ಧವಾಗಿ ನೀರು ಸಂಗ್ರಹವಿದೆ. ಅಚ್ಚುಕಟ್ಟಿಗೆ ನೀರುಹರಿಸಲು ಐಸಿಸಿ ಸಭೆ ಸೇರಿ, ತಕ್ಷಣದಿಂದಲೇ ಕ್ರಮ ಕೈಗೊಳ್ಳಬೇಕು ಎಂದರು.

ರೈತರ ಒಕ್ಕೂಟದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಆದಷ್ಟು ಬೇಗನೆ ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆದು, ನಾಲೆಗೆ ನೀರು ಬಿಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.

ಒಕ್ಕೂಟದ ಮುಖಂಡರಾದ ಮಾಜಿ ಮೇಯರ್ ಎಚ್.ಎನ್‌. ಗುರುನಾಥ, ಅಣಬೇರು ಕುಮಾರಸ್ವಾಮಿ, ಕುರ್ಕಿ ರೇವಣಸಿದ್ದಪ್ಪ, ಕುಂದುವಾಡ ಜಿಮ್ಮಿ ಹನುಮಂತಪ್ಪ ಇತರರು ಇದ್ದರು.

----

ಬಾಕ್ಸ್‌

* ಒತ್ತಾಯಗಳೇನೇನು?

- ಭದ್ರಾ ಡ್ಯಾಂನಲ್ಲಿ 183 ಅಡಿ ನೀರು ಸಂಗ್ರಹವಾಗಿದ್ದು ಶೀಘ್ರ ನಾಲೆಗಳಿಗೆ ನೀರು ಹರಿಸಬೇಕು

- ಇಡೀ ಭದ್ರಾ ಕಾಲುವೆಯುದ್ದಕ್ಕೂ ಬೆಳೆದು ನಿಂತಿರುವ ಗಿಡಗಳನ್ನು ತೆರವು ಮಾಡಬೇಕು

- ನಾಲೆಯಲ್ಲಿ ತುಂಬಿರುವ ಹೂಳು ತೆಗೆಸಿ, ಅಚ್ಚುಕಟ್ಟು ಕೊನೆಯ ಭಾಗಕ್ಕೂ ನೀರು ಸಮರ್ಪಕವಾಗಿ ತಲುಪುವಂತೆ ಮಾಡಬೇಕು

-ಭದ್ರಾ ಅಣೆಕಟ್ಟೆ ಸುರಕ್ಷತೆ ಬಗ್ಗೆ ಸಮೀಕ್ಷೆ ಕೈಗೊಂಡು, ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು

- ಡ್ಯಾಂ ನಿರ್ವಹಣೆಯ ಕ್ರೇನ್‌ಗಳನ್ನು ರೀಕಂಡೀಷನ್ ಮಾಡಿಸಬೇಕು

- ಡ್ಯಾಂ ತಳಭಾಗದ ಬಫರ್ ಝೋನ್‌ ಪ್ರದೇಶದಲ್ಲಿ ಯಾವುದೇ ರೀತಿಯ ಅವೈಜ್ಞಾನಿಕ ಕಾಮಗಾರಿ ಮಾಡಬಾರದು

---

ಪೋಟೋ ಕ್ಯಾಪ್ಶನ್‌: 1ಕೆಡಿವಿಜಿ1, 2:

ಬೇಸಿಗೆ ಬೆಳೆಗಾಗಿ ಭದ್ರಾ ಅಣೆಕಟ್ಚೆಯಿಂದ ನಾಲೆಗಳಿಗೆ ನೀರು ಹರಿಸುವಂತೆ ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಜಿಲ್ಲಾ ರೈತರ ಒಕ್ಕೂಟದ ನಿಯೋಗ ಮನವಿ ಅರ್ಪಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಅಪಘಾತ ಸೈಕಲ್‌ ಸವಾರ ಸಾವು
ವಿದ್ಯುತ್‌ ತೊಂದರೆ ಸರಿಪಡಿಸದಿದ್ದರೇ ಅಹೋರಾತ್ರಿ ಧರಣಿ