ಆಲೂರಿನಲ್ಲಿ ಕೋಳಿ ಅಂಗಡಿಗಳಿಗೆ ನೀರಿನ ಸಂಪರ್ಕ ಕಟ್‌

KannadaprabhaNewsNetwork | Published : Sep 12, 2024 2:00 AM

ಸಾರಾಂಶ

ಕೋಳಿ ಅಂಗಡಿಗಳಿರುವ ನಿವೇಶನ ಕುರಿತ ವಿವಾದ ನ್ಯಾಯಾಲಯದಲ್ಲಿರುವುದರಿಂದ, ಮಾಲಿಕರು ಆಲೂರು ಪಟ್ಟಣ ಪಂಚಾಯಿತಿಗೆ ಯಾವುದೆ ಕಂದಾಯ ಪಾವತಿ ಮಾಡುತ್ತಿಲ್ಲ. ಇದರಿಂದ ಪಂಚಾಯಿತಿಗೆ ಲಕ್ಷಾಂತರ ರುಪಾಯಿ ನಷ್ಟವಾಗುತ್ತಿದೆ. ತಕ್ಷಣ ನೀರು ಸರಬರಾಜು ನಿಲ್ಲಿಸಬೇಕು, ವಿದ್ಯುತ್ ಸರಬರಾಜು ನಿಲ್ಲಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯುವಂತೆ ಆಗ್ರಹಿಸಿದರು. ಸಭೆ ಮುಗಿದ ನಂತರ ಕೋಳಿ ಅಂಗಡಿಗಳಿಗೆ ನೀಡಿದ್ದ ನೀರಿನ ಸರಬರಾಜನ್ನು ನಿಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಆಲೂರು

ಪಟ್ಟಣದಲ್ಲಿರುವ ಕೋಳಿ ಅಂಗಡಿಗಳಿಗೆ ನೀಡಿರುವ ಮೂಲಭೂತ ಸೌಕರ್ಯಗಳನ್ನು ತಕ್ಷಣ ನಿಲ್ಲಿಸುವಂತೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಆಗ್ರಹಿಸಿತು.

ಒಂದೂವರೆ ವರ್ಷದ ನಂತರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು, ಕೋಳಿ ಅಂಗಡಿಗಳಿರುವ ನಿವೇಶನ ಕುರಿತ ವಿವಾದ ನ್ಯಾಯಾಲಯದಲ್ಲಿರುವುದರಿಂದ, ಮಾಲಿಕರು ಪಟ್ಟಣ ಪಂಚಾಯಿತಿಗೆ ಯಾವುದೆ ಕಂದಾಯ ಪಾವತಿ ಮಾಡುತ್ತಿಲ್ಲ. ಇದರಿಂದ ಪಂಚಾಯಿತಿಗೆ ಲಕ್ಷಾಂತರ ರುಪಾಯಿ ನಷ್ಟವಾಗುತ್ತಿದೆ. ತಕ್ಷಣ ನೀರು ಸರಬರಾಜು ನಿಲ್ಲಿಸಬೇಕು, ವಿದ್ಯುತ್ ಸರಬರಾಜು ನಿಲ್ಲಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯುವಂತೆ ಆಗ್ರಹಿಸಿದರು.

ಪಟ್ಟಣದಲ್ಲಿ ಪ್ರತಿದಿನ ಬಸ್ಸುಗಳು, ಸರಕು ಸಾಗಣೆ ವಾಹನಗಳು, ಖಾಸಗಿ ವಾಹನಗಳು ಸೇರಿದಂತೆ ಸಾವಿರಾರು ವಾಹನಗಳು ಓಡಾಡುತ್ತಿವೆ. ತಾಲೂಕು ಕೇಂದ್ರವಾದರೂ ವಾಹನಗಳ ನಿಲುಗಡೆಗೆ ಸೂಕ್ತ ಜಾಗವನ್ನು ಗುರುತು ಮಾಡಿಲ್ಲ. ಮುಖ್ಯ ರಸ್ತೆಯಂಚಿನಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಸೂಕ್ತ ಜಾಗವನ್ನು ಗುರುತಿಸಿ ಸಂಚಾರ ನಿಯಮಗಳನ್ನು ಪಾಲಿಸಲು ಸಾರ್ವಜನಿಕರಿಗೆ ತಿಳಿಸಬೇಕು. ಪಾದಚಾರಿ ರಸ್ತೆಯಲ್ಲಿರುವ ಅಂಗಡಿಗಳನ್ನು ಕೂಡಲೆ ತೆರವುಗೊಳಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ತಾಹಿರಾಬೇಗಂ ಮಾತನಾಡಿ, ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಬೇಕು. ರಸ್ತೆಯಂಚಿನಲ್ಲಿರುವ ಗಿಡಗಳನ್ನು ತೆರವುಗೊಳಿಸಬೇಕು. ಚರಂಡಿಗಳನ್ನು ಸ್ವಚ್ಛಗೊಳಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ಜಾಗ್ರತೆ ವಹಿಸಲು ಸಿಬ್ಬಂದಿಗೆ ಸೂಚಿಸಿದರು. ಸಭೆ ಮುಗಿದ ನಂತರ ಕೋಳಿ ಅಂಗಡಿಗಳಿಗೆ ನೀಡಿದ್ದ ನೀರಿನ ಸರಬರಾಜನ್ನು ನಿಲ್ಲಿಸಲಾಯಿತು.

ಅಧ್ಯಕ್ಷರು, ಸದಸ್ಯರು ಮತ್ತು ಪ. ಪಂ. ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ, ಪಾದಚಾರಿ ರಸ್ತೆಯಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಲು ಸೂಚನೆ ನೀಡಿದರು. ಸರ್ಕಾರಿ ಆಸ್ಪತ್ರೆಗೆ ತಿರುಗಾಡಲು ತೊಂದರೆಯಾಗದಂತೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸೂಕ್ತ ಜಾಗವನ್ನು ಗುರುತಿಸಲಾಯಿತು.

Share this article