ಕಡಕೋಳ ವಸತಿ ಕೇಂದ್ರದಲ್ಲಿ ನೀರಿಗೆ ಹಾಹಾಕಾರ

KannadaprabhaNewsNetwork | Published : Mar 27, 2025 1:03 AM

ಸಾರಾಂಶ

ಕಡಕೋಳ ರಸ್ತೆ ಬದಿಯಲ್ಲಿ ನಿರ್ಮಿಸಲಾಗಿರುವ ಕಡಕೋಳ ಪುನರ್ವಸತಿ ಕೇಂದ್ರದಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕೇಶವ ಕುಲಕರ್ಣಿ

ಕನ್ನಡಪ್ರಭ ವಾರ್ತೆ ಜಮಖಂಡಿ

ನಗರದ ಹೊರವಲಯ ಕಡಕೋಳ ರಸ್ತೆ ಬದಿಯಲ್ಲಿ ನಿರ್ಮಿಸಲಾಗಿರುವ ಕಡಕೋಳ ಪುನರ್ವಸತಿ ಕೇಂದ್ರದಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬೇಸಿಗೆಯಲ್ಲಂತೂ ಹನಿ ನೀರಿಗೂ ಜನತೆ ಪರದಾಡಬೇಕಾಗಿದೆ.

ಕಡಕೋಳ ಗ್ರಾಮವು ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳುಗಡೆಯಾಗುತ್ತದೆ ಎಂದು ಪುನರ್ವಸತಿ ಕೇಂದ್ರ ನಿರ್ಮಿಸಲಾಗಿದೆ. 80 ಕುಟುಂಬಗಳಿರುವ ಸುಮಾರು 500 ರಿಂದ 600 ಜನ ವಾಸಿಸುವ ಈ ಕೇಂದ್ರದಲ್ಲಿ ಬಹುತೇಕರು ಬಡವರು, ಜಮೀನು ಇಲ್ಲದವರು, ದಲಿತ ವರ್ಗದವರೇ ಹೆಚ್ಚಾಗಿದ್ದಾರೆ. ಜಮೀನುಗಳುಳ್ಳವರು ತಮ್ಮ ಜಮೀನುಗಳಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ಆದರೆ ಪುನರ್ವಸತಿ ಕೆಂದ್ರದ ಸುತ್ತ ಜಾಲಿಗಿಡಗಳು ಬೆಳೆದಿದ್ದು, ಕೆಲ ರಸ್ತೆಗಳನ್ನು ಮಾತ್ರ ಪಕ್ಕಾ ರಸ್ತೆಗಳನ್ನಾಗಿ ನಿರ್ಮಿಸಲಾಗಿದೆ. ಉಳಿದೆಲ್ಲವೂ ಕಚ್ಚಾ ರಸ್ತೆಗಳಾಗಿವೆ.

ಬಾವಿಗಳಿವೆ, ಜಲ ಸಂಗ್ರಹಗಳಿವೆ ಆದ್ರೆ ನೀರಿಲ್ಲ:

ರಾಷ್ಟ್ರೀಯ ಜಲ ಜೀವನ ಮಿಷನ್‌ (ಜೆಜೆಎಂ) ಹಾಗೂ ಜಿಪಂನಿಂದ ನಿರ್ಮಿಸಲಾದ ಜಲ ಸಂಗ್ರಹಾಗಾರಗಳು, ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆಯಿಂದ ನಿರ್ಮಿಸಲಾದ ದೇವರಾಜ ಅರಸು ಶುದ್ಧ ನೀರಿನ ಘಟಕಗಳು ಬಂದ್‌ ಆಗಿವೆ. ಸುಮಾರು 20ಕ್ಕೂ ಹೆಚ್ಚು ಕೊಳವೆಬಾವಿಗಳನ್ನು ತೋಡಿಸಲಾಗಿದೆ. ಕೆಲವು ಮಾತ್ರ ಚಾಲ್ತಿಯಲ್ಲಿದ್ದು ಉಳಿದ ಕೊಳವೆ ಬಾವಿಗಳು, ಪಂಪ್‌ ಮೋಟಾರಗಳ ದುರಸ್ತಿ, ಸ್ಟಾರ್ಟರ್‌ಗಳ ದುರಸ್ತಿ ನೆಪ ಹೇಳಿ ಬಂದ್‌ ಮಾಡಲಾಗಿದೆ. ಇಲ್ಲಿಯ ನಿವಾಸಿಗಳು ಹಲವು ಬಾರಿ ಜಿಲ್ಲಾಧಿಕಾರಿ ಹಾಗೂ ನಗರಸಭೆ ಅಧಿಕಾರಿಗಳನ್ನು, ಕಡಕೋಳದ ಗ್ರಾಪಂ ಅಧಿಕಾರಿಗಳನ್ನು ಸಂಪರ್ಕಿಸಿ ನೀರಿನ ತೊಂದರೆ ಸರಿಪಡಿಸುವಂತೆ ಮನವಿ ಸಲ್ಲಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.ನೀರಿಗಾಗಿ ಪರದಾಟ:

ಪುನರ್ವಸತಿ ಕೇಂದ್ರದಲ್ಲಿ ವಾಸವಿರುವ ನಿವಾಸಿಗಳಲ್ಲಿ ಹೆಚ್ಚಿನವರು ಕಾರ್ಮಿಕರು. ಕೆಲವರು ಕೃಷಿ ಕೆಲಸವನ್ನು ಇನ್ನೂ ಕೆಲವರು ವಿವಿಧ ರೀತಿಯ ಕೆಲಸಕ್ಕೆ ತೆರಳುತ್ತಾರೆ. ಬೆಳಗಿನಿಂದ ಸಂಜೆವರೆಗೆ ಕೆಲಸಕ್ಕೆ ತೆರಳಿ ಮರಳಿ ಬಂದು ಬೋರ್‌ವೆಲ್‌ಗಳಿರುವ ಪಕ್ಕದ ಓಣಿಗಳಲ್ಲಿ ಅಥವಾ ಮನೆಗಳ ಮಾಲೀಕರಲ್ಲಿ ಕೇಳಿ ನೀರು ತರಬೇಕಾದ ಸ್ಥಿತಿ ಎದುರಾಗಿದೆ. ಅಧಿಕಾರಿಗಳಿಂದ ಉಡಾಫೆ ಉತ್ತರ:

ಕುಡಿಯುವ ನೀರಿಗಾಗಿ ಜಲಜೀವನ ಮಿಷನ್‌ ಅಧಿಕಾರಿಗಳನ್ನು ಸಂಪರ್ಕಿಸಿದಾಗ ನದಿಯಲ್ಲಿ ನೀರಿಲ್ಲ. ನದಿಗೆ ನೀರು ಬಂದ ಮೇಲೆ ನೀರು ಬಿಡುವುದಾಗಿ ಹಾರಿಕೆ ಉತ್ತರಗಳನ್ನು ನೀಡುತ್ತಾರೆ. ಪಂಚಾಯಿತಿಯವರು ಪುನರ್ವಸತಿ ಕೇಂದ್ರ ಜಮಖಂಡಿ ನಗರಸಭೆಯ ವ್ಯಾಪ್ತಿಗೆ ಬರುತ್ತದೆ ಅಲ್ಲಿಯೇ ವಿಚಾರಿಸಿ ಎಂದು ಹೇಳಿ ಕೈ ತೊಳೆದು ಕೊಳ್ಳುತ್ತಿದ್ದಾರೆ. ನಾವು ಎಲ್ಲಿಗೆ ಹೋಗಬೇಕು, ಯಾರನ್ನು ಕೇಳಬೇಕು ಎಂದು ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ. ಮಕ್ಕಳು ಇರುವರ ಮನೆಗಳಲ್ಲಿ ಕಿ.ಮೀ. ದೂರಕ್ಕೆ ಹೋಗಿ ನೀರು ತರುತ್ತಾರೆ. ವಯೋವೃದ್ಧರು ಮಾತ್ರವಿರುವ ಕುಟುಂಬಗಳು ಸಮಸ್ಯೆಯಂತೂ ಹೇಳತೀರದಾಗಿದೆ.ನಿವಾಸಿಗಳ ಆಕ್ರೋಶ:

ರಸ್ತೆಗಳು ಕೆಟ್ಟು ಹೋಗಿವೆ. ಸ್ವಲ್ಪ ಮಳೆಯಾದರೂ ಸಂಚಾರಕ್ಕೆ ತೊಂದರೆಯಾಗುತ್ತದೆ. ನೋಡಿದಲ್ಲೆಲ್ಲಾ ಜಾಲಿಮುಳ್ಳು ಬೆಳೆದಿದೆ. ಹಲವು ಸರ್ಕಾರಿ ಕಟ್ಟಡಗಳು ಪಾಳು ಬಿದ್ದಿವೆ. ಪುನರ್ವಸತಿ ಕೇಂದ್ರದ ಸ್ಥಿತಿ ಹದಗೆಟ್ಟು ಹೋಗಿದ್ದು. ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ನಿವಾಸಿಗಳಾದ ಸತ್ಯವ್ವ ಗಸ್ತಿ, ಸುಶಿಲವ್ವ ಗಸ್ತಿ, ಶ್ರೀಪತಿ ಕೆಳಗಡೆ, ನಿಜಗುಣಿ ಕೆಳಗಡೆ, ಸತ್ಯವ್ವ ಯಂಕಂಚಿ ಮುಂತಾದವರು ಒತ್ತಾಯಿಸಿದ್ದಾರೆ.

ನಮ್ಮ ಇಲಾಖೆಗೆ ನೀರು ಸರಬರಾಜು ಉಸ್ತುವಾರಿ ಮಾತ್ರವಿರುತ್ತದೆ. ನಗರಸಭೆಯವರು ಒದಗಿಸುವ ನೀರನ್ನು ಸರಿಯಾಗಿ ಸರಬರಾಜು ಮಾಡಲಾಗುತ್ತದೆ. ನಗರಸಭೆಯವರು ಹೆಚ್ಚಿಗೆ ನೀರು ಪೂರೈಸಿದರೆ ನಮಗೆ ಅನುಕೂಲವಾಗುತ್ತದೆ. ಕೆಲ ಕೊಳವೆ ಬಾವಿಗಳನ್ನು ಬಳಸಿಕೊಂಡು ನೀರು ಪೂರೈಸಲಾಗುತ್ತಿದೆ.

ಸುರೇಶ.ಎಸ್‌. ಪಾಂಚಾಳ, ಎಇಇ ಗ್ರಾಮೀಣ ಕುಡಿವ ನೀರು ಹಾಗೂ ನೈರ್ಮಲ್ಯ ಇಲಾಖೆ ಉಪ ವಿಭಾಗ ಜಮಖಂಡಿ

ನಗರಸಭೆಯ ವತಿಯಿಂದ ಕೊಳವೆ ಬಾವಿಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ನೀರಿನ ತೊಂದರೆಯಾಗದಂತೆ ಕ್ರಮ ಜರುಗಿಸಲು ಪೌರಾಯುಕ್ತರಾದ ಜೋತಿಗಿರೀಶ ಆದೇಶ ನೀಡಿದ್ದು ಜನವಸತಿ ಹತ್ತಿರವಿರುವ ಕೊಳವೆಬಾವಿಗಳ ದುರಸ್ತಿ ಕಾರ್ಯ ನಡೆದಿದೆ. ಪುನರ್ವಸತಿ ಕೇಂದ್ರದಲ್ಲಿರುವ ಬಾವಿಯೊಂದನ್ನು ಸ್ವಚ್ಛಗೊಳಿಸಲು ನಿವಾಸಿಗಳು ಮನವಿ ಸಲ್ಲಿಸಿದ್ದು ಒಂದೆರೆಡು ದಿನದಲ್ಲಿ ಬಾವಿಯ ಸ್ವಚ್ಛತಾ ಕಾರ್ಯವು ನಡೆಯಲಿದ್ದು ಕೇಂದ್ರದ ನಿವಾಸಿಗಳಿಗೆ ನೀರಿನ ತೊಂದರೆಯಾಗದಂತೆ ಕ್ರಮ ಜರುಗಿಸಲಾಗುವುದು.

ಯಲ್ಲಪ್ಪ ಬಿದರಿ, ಮ್ಯಾನೇಜರ್‌ ನಗರಸಭೆ ಜಮಖಂಡಿ

Share this article