ಜಲಮೂಲಗಳ ಸ್ಥಿತಿ ಅಧ್ಯಯನಕ್ಕೆ ಜಲ ಇಲಾಖೆ ಯೋಜನೆ

KannadaprabhaNewsNetwork | Published : Oct 18, 2024 12:12 AM

ಸಾರಾಂಶ

ರಾಜ್ಯದ ಜಲ ಮೂಲಗಳ ಮೇಲಾಗುತ್ತಿರುವ ಪರಿಣಾಮಗಳು ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ರಾಜ್ಯ ಜಲಸಂಪನ್ಮೂಲ ಇಲಾಖೆ, ಅದಕ್ಕಾಗಿ ರಾಜ್ಯದ ಜಲಸಂಪನ್ಮೂಲಗಳ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿ ಕ್ರಿಯಾ ಯೋಜನೆ ರೂಪಿಸಲು ಮುಂದಾಗಿದೆ.

ಗಿರೀಶ್‌ ಗರಗ

ಕನ್ನಡಪ್ರಭ ವಾರ್ತೆ ಬೆಂಗಳೂರುಬರ, ಪ್ರವಾಹ ಸೇರಿದಂತೆ ಹವಾಮಾನ ಬದಲಾವಣೆಯಿಂದ ರಾಜ್ಯದ ಜಲ ಮೂಲಗಳ ಮೇಲಾಗುತ್ತಿರುವ ಪರಿಣಾಮಗಳು ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ರಾಜ್ಯ ಜಲಸಂಪನ್ಮೂಲ ಇಲಾಖೆ, ಅದಕ್ಕಾಗಿ ರಾಜ್ಯದ ಜಲಸಂಪನ್ಮೂಲಗಳ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿ ಕ್ರಿಯಾ ಯೋಜನೆ ರೂಪಿಸಲು ಮುಂದಾಗಿದೆ.

ದೇಶದ ಎಲ್ಲ ರಾಜ್ಯಗಳು ಹವಾಮಾನ ಬದಲಾವಣೆಯಿಂದ ಜಲಸಂಪನ್ಮೂಲಗಳ ಮೇಲಾಗುತ್ತಿರುವ ಪರಿಣಾಮಗಳ ಅಧ್ಯಯನ ನಡೆಸಿ, ಕ್ರಿಯಾ ಯೋಜನೆ ರೂಪಿಸುವಂತೆ ರಾಷ್ಟ್ರೀಯ ಜಲ ಮಿಷನ್‌ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಳೆದ ಕೆಲ ವರ್ಷಗಳಿಂದೀಚೆಗಿನ ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಜಲ ಮೂಲಗಳ ಮೇಲಾಗಿರುವ ಪರಿಣಾಮಗಳ ಅಧ್ಯಯನ ನಡೆಸಿ, ಕ್ರಿಯಾ ಯೋಜನೆ ರೂಪಿಸಲು ಜಲಸಂಪನ್ಮೂಲ ಇಲಾಖೆ ಮುಂದಾಗಿದೆ. ಈ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಲು ಖಾಸಗಿ ಸಂಸ್ಥೆಯನ್ನು ನೇಮಿಸಲು ಇಲಾಖೆ ಟೆಂಡರ್‌ ಪ್ರಕ್ರಿಯೆ ನಡೆಸಿದೆ.

ಜಲ ಸಂರಕ್ಷಣೆ, ಸುಸ್ಥಿರ ಬಳಕೆಗೆ ಒತ್ತು: ಈ ಕ್ರಿಯಾ ಯೋಜನೆಯಲ್ಲಿ ಪ್ರಮುಖವಾಗಿ ಜಲ ಮೂಲಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಅಂಶಗಳನ್ನು ಅಳವಡಿಸಲಾಗುತ್ತದೆ. ಜತೆಗೆ ನಶಿಸುತ್ತಿರುವ ಹಾಗೂ ಮಲಿನಗೊಳ್ಳುತ್ತಿರುವ ಜಲ ಮೂಲಗಳ ವಿವರ ಹಾಗೂ ಅವುಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸ್ವಚ್ಛಗೊಳಿಸುವ ವಿಧಾನ. ರಾಜ್ಯದಲ್ಲಿ ನೀರಿನ ಬಳಕೆ ಸಾಮರ್ಥ್ಯವನ್ನು ಶೇ. 20ರಷ್ಟು ಹೆಚ್ಚಿಸುವುದು ಮತ್ತು ಜಲಾನಯನದ ಸಮಗ್ರ ಜಲಸಂಪನ್ಮೂಲ ನಿರ್ವಹಣೆಯನ್ನು ಉತ್ತೇಜಿಸುವ ಕುರಿತ ಅಂಶಗಳನ್ನು ಉಲ್ಲೇಖಿಸಲಾಗುತ್ತದೆ.

ಜಲ ವಿವಾದಗಳ ಬಗ್ಗೆಯೂ ಉಲ್ಲೇಖ: ಅಧ್ಯಯನ ನಡೆಸುವ ಸಂದರ್ಭದಲ್ಲಿ ರಾಜ್ಯದ ಜಲ ಮೂಲಗಳು, ಬೇರೆ ರಾಜ್ಯಗಳ ನಡುವೆ ಇರುವ ಜಲ ವಿವಾದಗಳ ಬಗ್ಗೆಯೂ ಪರಿಶೀಲಿಸಿ ಕ್ರಿಯಾ ಯೋಜನೆಯ ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ. ಬರ ಪೀಡಿತ, ಪ್ರವಾಹ ಪೀಡಿತ, ಕರಾವಳಿ ಪ್ರದೇಶ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿನ ಜಲ ಮೂಲಗಳು ಹಾಗೂ ಅವುಗಳಲ್ಲಿನ ಸಮಸ್ಯೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಲಾಗುತ್ತದೆ. ಅಧ್ಯಯನ ಸಂದರ್ಭದಲ್ಲಿ ಪಡೆಯಲಾಗುವ ಮಾಹಿತಿ ಮತ್ತು ದಾಖಲೆಗಳನ್ನು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಇಲಾಖೆ ಅಥವಾ ಸಂಸ್ಥೆಗಳಿಂದಲೇ ಪಡೆದು ವರದಿಯನ್ನು ಸಿದ್ಧಪಡಿಸಲಾಗುತ್ತದೆ.

ನೀರಿನ ಮರು ಬಳಕೆಗೆ ಒತ್ತು: ಜಲಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಹಾಗೂ ಸಂರಕ್ಷಿಸಲು ನೀರಿನ ಮರುಬಳಕೆಗೆ ಒತ್ತು ನೀಡುವುದು. ಪ್ರಮುಖವಾಗಿ ರಾಜ್ಯದಲ್ಲಿ ಪ್ರಸ್ತುತ ಗೃಹ, ನೀರಾವರಿ, ಕೈಗಾರಿಕೆಗಳಲ್ಲಿ ನೀರಿನ ಬಳಕೆ ಮತ್ತು ಮರು ಬಳಕೆ ಮಾಡುವ ವಿಧಾನದ ಜತೆಗೆ ಅಧ್ಯಯನ ವರದಿ ಹಾಗೂ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಆಯೋಜಿಸಿ, ಅಲ್ಲಿ ಚರ್ಚಿಸುವ ಅಂಶಗಳನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸಲಾಗುತ್ತದೆ.

ಮುಂದಿನ 30 ವರ್ಷಕ್ಕೆ ಕ್ರಿಯಾ ಯೋಜನೆ: ಹವಾಮಾನ ಬದಲಾವಣೆಯ ಪ್ರಭಾವದ ಮೌಲ್ಯಮಾಪನವನ್ನು 2015ರಿಂದ ಈಚೆಗಿನ ಅಂಶಗಳನ್ನು ಗಮನಿಸಿ ಮಾಡಲಾಗುತ್ತದೆ. ಮುಂದಿನ 30 ವರ್ಷದವರೆಗೆ ರಾಜ್ಯದ ಜಲಸಂಪನ್ಮೂಲ ವಲಯದ ಮೇಲೆ ಆಗುವ ಪ್ರಭಾವ ಆಧರಿಸಿ ಮೌಲ್ಯ ಮಾಪನ ಮಾಡಲಾಗುತ್ತದೆ. ಭವಿಷ್ಯದಲ್ಲಿ ಜಲಸಂಪನ್ಮೂಲಗಳ ಮೇಲಾಗುವ ಪರಿಣಾಮವನ್ನೂ ಅಂದಾಜಿಸಲಾಗುತ್ತದೆ.

ರಾಷ್ಟ್ರೀಯ ಕ್ರಿಯಾ ಯೋಜನೆ: ಕರ್ನಾಟಕ ಮಾತ್ರವಲ್ಲದೆ ಎಲ್ಲ ರಾಜ್ಯಗಳಿಗೂ ಕ್ರಿಯಾ ಯೋಜನೆ ರೂಪಿಸುವಂತೆ ರಾಷ್ಟ್ರೀಯ ಜಲ ಮಿಷನ್‌ ಸೂಚಿಸಿದೆ. ರಾಜ್ಯಗಳು ನೀಡುವ ಕ್ರಿಯಾ ಯೋಜನೆ ಮತ್ತು ಅಧ್ಯಯನ ವರದಿ ಆಧರಿಸಿ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ರೂಪಿಸಲಾಗುತ್ತದೆ.

Share this article