15 ಮನೆಗಳಿಗೆ ನುಗ್ಗಿದ ನೀರು, ಕಾಳಜಿ ಕೇಂದ್ರ ಆರಂಭ

KannadaprabhaNewsNetwork | Published : Aug 2, 2024 12:52 AM

ಸಾರಾಂಶ

ಕೇಣಿ ಹಳ್ಳ ಉಕ್ಕಿ ಹರಿದ ಪರಿಣಾಮ ಹೊಂದಿಕೊಂಡಿರುವ ಗಾಂವಕರವಾಡಾ ಸಂಪೂರ್ಣ ಜಲಾವೃತವಾಗಿದೆ.

ಅಂಕೋಲಾ: ಭಾರಿ ಮಳೆಯಿಂದಾಗಿ ಪಟ್ಟಣದ ಕೇಣಿ ಗಾಂವಕರವಾಡಾಕ್ಕೆ ನುಗ್ಗಿದ ನೀರಿನಿಂದಾಗಿ ಭಾರಿ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಮನೆಗಳು ಜಲಾವೃತವಾಗಿ ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುವಂತಾಗಿದೆ.

ಕೇಣಿಯ ಗಾಂವಕರವಾಡಾ ಪುಟ್ಟ ಮಜರೆಯಾಗಿದ್ದು, ಇಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೇಣಿ ಹಳ್ಳ ತುಂಬಿ ಹರಿಯುತ್ತಿದ್ದು, ಅಲ್ಲಲ್ಲಿ ಅಪಾಯವನ್ನು ಸೃಷ್ಟಿಸಿದೆ.ಕೇಣಿ ಹಳ್ಳ ಉಕ್ಕಿ ಹರಿದ ಪರಿಣಾಮ ಹೊಂದಿಕೊಂಡಿರುವ ಗಾಂವಕರವಾಡಾ ಸಂಪೂರ್ಣ ಜಲಾವೃತವಾಗಿದೆ. 15ಕ್ಕೂ ಹೆಚ್ಚು ಮನೆಗಳಲ್ಲಿ ನೀರು ನುಗ್ಗಿದ್ದು, ದಿನಬಳಕೆಯ ವಸ್ತುಗಳು ನೀರಿನಲ್ಲಿ ಮುಳುಗಿದೆ. ಹಲವೆಡೆ ಮರ- ಗಿಡಗಳು ಉರುಳಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.

ಮಧ್ಯರಾತ್ರಿ ನಡೆದ ಅವಘಡದ ಮಾಹಿತಿಯನ್ನು ಪಡೆದುಕೊಂಡ ಆಶಾ ಕಾರ್ಯಕರ್ತೆ ಪ್ರೀತಿ ಬಂಟ್‌ ಸಕಾಲದಲ್ಲಿ ಎಚ್ಚರಿಕೆ ವಹಿಸುವಂತೆ ನೋಡಿಕೊಂಡಿದ್ದಾರೆ. ತಹಸೀಲ್ದಾರ್ ಅನಂತ ಶಂಕರ ಸೇರಿದಂತೆ ಸಿಬ್ಬಂದಿ ಪರಿಶೀಲನೆ ನಡೆಸಿ ಕೇಣಿಯ ಸ.ಹಿ.ಪ್ರಾ. ಶಾಲೆಯಲ್ಲಿ ಕಾಳಜಿ ಕೇಂದ್ರದ ವ್ಯವಸ್ಥೆಗೊಳಿಸಿದ್ದಾರೆ.

ಪುರಸಭೆ ಸದಸ್ಯೆ ಶೀಲಾ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ, ಆರೋಗ್ಯ ಇಲಾಖೆಯ ಸಮೀಕ್ಷಾ ನಾಯ್ಕ, ವೈಶಾಲಿ ಎಂ. ಸೈಲ್ ಹಾಗೂ ಆರ್‌ಬಿಎಸ್‌ಕೆ ತಂಡ ಕಾಳಜಿ ಕೇಂದ್ರದಲ್ಲಿರುವ 46 ಸಂತ್ರಸ್ತರಿಗೆ ಆರೋಗ್ಯದ ನೆರವನ್ನು ನೀಡಿದ್ದಾರೆ.ಸೂರಿಮನೆಯಲ್ಲಿ ಮನೆ ಕುಸಿತ

ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾಪಂ ವ್ಯಾಪ್ತಿಯ ತುಡುಗುಣಿ ಸೂರಿಮನೆಯ ಶಂಕರ ಗಂಗು ಮರಾಠಿ ಎಂಬವರ ವಾಸದಮನೆ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಜು. ೩೦ರಂದು ಇದ್ದಕ್ಕಿದ್ದಂತೆ ಮನೆಯ ಒಂದೊಂದೇ ಗೋಡೆಗಳು ಕುಸಿದಿವೆ.ಅದೇ ರೀತಿ ಉಮ್ಮಚಗಿ ಗ್ರಾಪಂ ವ್ಯಾಪ್ತಿಯ ಕೋಟೆಮನೆಯ ಮುತ್ತು ಅಣ್ಣಪ್ಪ ಶೆಟ್ಟಿ ಎಂಬವರ ಮನೆಯ ಹಿಂಬದಿಯಲ್ಲಿದ್ದ ಅಡುಗೆಮನೆಯ ಗೋಡೆ ಕುಸಿದು ಹಾನಿಯಾಗಿದೆ.ಸ್ಥಳಕ್ಕೆ ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ಕಾರ್ಯದರ್ಶಿ ಮೋಹನ, ಗ್ರಾಮ ಲೆಕ್ಕಿಗೆ ಸವಿತಾ ಭಜಂತ್ರಿ, ಗ್ರಾಪಂ ಸದಸ್ಯರಾದ ಖೈತಾನ್ ಡಿಸೋಜಾ, ಅಶೋಕ ಪೂಜಾರಿ, ಸರಸ್ವತಿ ಪಟಗಾರ, ಗ.ರಾ. ಭಟ್ಟ, ಶಿವರಾಯ ಪೂಜಾರಿ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Share this article