ಕನ್ನಡಪ್ರಭ ವಾರ್ತೆ ಹೊಸದುರ್ಗ
ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ಮನೆಯೊಳಗೆ ನೀರು ನುಗ್ಗಿ ಹಾವು ಚೇಳು ಸೇರಿದಂತೆ ಹುಳುಗಳು ಬರುತ್ತಿವೆ, ಬೇರೆ ಮನೆಯಿಲ್ಲ ಜಮೀನು ನೀರು ಪಾಲಾಗಿದೆ ಪ್ರತಿವರ್ಷ ಈಗೆ ಆದರೆ ನಾವು ಬದುಕುವುದು ಹೇಗೆ? ನಾವು ಎಲ್ಲಿಗೆ ಹೋಗಬೇಕು? ಎಂದು ವಿವಿ ಸಾಗರ ಜಲಾಶಯದ ಹಿನ್ನಿರಿನ ಜನರು ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಅವರಲ್ಲಿ ತಮ್ಮ ಆಳಲು ತೋಡಿಕೊಂಡರು.ತಾಲೂಕಿನ ವಿವಿ ಸಾಗರದ ಹಿನ್ನೀರಿನ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹಾಗೂ ಶಾಸಕ ಬಿ.ಜಿ.ಗೋವಿಂದಪ್ಪ ಭಾನುವಾರ ಭೇಟಿ ನೀಡಿದ ವೇಳೆ ಜಲಾಶಯದಲ್ಲಿ 130 ಅಡಿಗೆ ನೀರು ಇದ್ದಾಗ ಸಮಸ್ಯೆಯಿರಲಿಲ್ಲ. 130 ಅಡಿಗಿಂತ ಹೆಚ್ಚು ನೀರು ಬಂದ ಮೇಲೆ ಗ್ರಾಮ ಹಾಗೂ ಜಮೀನುಗಳಿಗೆ ನೀರು ಬರುತ್ತಿದೆ. ಕೋಡಿಯನ್ನು ತಗ್ಗಿಸಿ ನೀರು 130 ಅಡಿಗಿಂತ ಹೆಚ್ಚಾಗದಂತೆ ಮಾಡಿ. ಕಳೆದ ಒಂದು ವಾರದಿಂದ ರಸ್ತೆ, ಸಂಪರ್ಕ ಸೇತುವೆಗಳೆಲ್ಲಾ ಮುಳುಗಿವೆ. ಸಂಚಾರ ಸ್ಥಗಿತಗೊಂಡಿದೆ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಇದಕ್ಕೆ ಶಾಶ್ವತ ಪರಿಹಾರ ಒದಗಿಸಿಕೋಡಿ ಎಂದು ಗ್ರಾಮಸ್ಥರು ಸಚಿವರಲ್ಲಿ ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಿ.ಸುಧಾಕರ್, ಈ ಬಗ್ಗೆ ಒಂದು ಸಭೆ ಕರೆದು ಚರ್ಚಿಸಲಾಗುವುದು. ಸಮಗ್ರ ಸಮೀಕ್ಷೆ ಸಹ ನಡೆಸಲಾಗುವುದು. ಈಗಾಗಲೇ ತೂಬ್ ಹಾಗೂ ಮುಖ್ಯ ಗೇಟ್ ಮೂಲಕ ನೀರು ಹೊರಹಾಕಲಾಗುತ್ತಿದೆ. ಸದ್ಯ 9000 ಕ್ಯೂಸೆಕ್ ನೀರು ಹೊರ ಹಾಕಲಾಗಿದೆ. ಹಿನ್ನೀರಿನ ಪ್ರದೇಶಗಳಿಗೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಹಿನ್ನೀರಿನಿಂದ ಮುಳುಗಡೆಯಾಗಿರುವ ರಸ್ತೆ, ಸೇತುವೆಗಳ ಪುನರ್ ನಿರ್ಮಾಣಕ್ಕಾಗಿ 124 ಕೋಟಿ ರು. ಅಂದಾಜು ಪಟ್ಟಿಯನ್ನು ಶಾಸಕ ಬಿ.ಜಿ.ಗೋವಿಂದಪ್ಪ ಸಲ್ಲಿಸಿದ್ದಾರೆ. ಪರಿಹಾರಕ್ಕಾಗಿ 225 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.ಶಾಸಕ ಬಿ.ಜಿ ಗೋವಿಂದಪ್ಪ ಮಾತನಾಡಿ, ಹಿನ್ನೀರಿನ ಜನರ ಸಂಕಷ್ಟ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಇಲ್ಲಿನ ರೈತರ ಸಂಕಷ್ಟಕ್ಕೆ ನೆರವಾಗಬೇಕು. ಹಿನ್ನೀರು ಪ್ರದೇಶದಲ್ಲಿ ಮುಳುಗಡೆ ಆಗಿರುವಂತಹ ರೈತರ ಜಮೀನುಗಳಿಗೆ ಪರಿಹಾರ ಒದಗಿಸಿಕೊಡಬೇಕು. ಕೊರತೆಯಾಗಿರುವಂತಹ ಮೂಲ ಸೌಕರ್ಯಗಳನ್ನು ಸರಿಪಡಿಸಬೇಕು. ಇಂತಹ ಎಲ್ಲ ಸಮಸ್ಯೆಗಳನ್ನೂ ಪೂರ್ಣವಾಗಿ ಸಚಿವರ ಗಮನಕ್ಕೆ ತಂದಿದ್ದೇನೆ. ನ.6ರಂದು ನಡೆಯಲಿರುವ ಮುಖ್ಯಮಂತ್ರಿಯವರ ಸಭೆಯಲ್ಲಿ ಹಿನ್ನೀರಿನ ಜನರ ಸಮಸ್ಯೆ ಕುರಿತು ಮನವರಿಕೆ ಮಾಡಿ ಪರಿಹಾರ ಕೊಡಿಸುವ ಕುರಿತು ಸಚಿವರು ಭರವಸೆಯ ಮಾತುಗಳನ್ನು ಆಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಸಚಿವರು ತಾಲೂಕಿನ ಕಾರೇಹಳ್ಳಿ, ಲಿಂಗದಹಳ್ಳಿ, ಅತ್ತಿಮಗ್ಗೆ, ಮಲ್ಲಾಪುರ ಸೇರಿದಂತೆ ಹಲವು ಕಡೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಕೆಪಿಸಿಸಿ ಸದಸ್ಯ ಅಲ್ತಾಫ್ ಪಾಷಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲೋಕೇಶಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರುಗಳು ಹಾಗೂ ಸ್ಥಳೀಯರು ಹಾಜರಿದ್ದರು.