ವಾರಾಬಂಧಿ ಪದ್ಧತಿಯಡಿ ಹಿಂಗಾರು ಹಂಗಾಮಿಗೆ ನೀರು

KannadaprabhaNewsNetwork | Published : Nov 18, 2024 1:16 AM

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮಟ್ಟಿ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ಡಿ.9ರಿಂದ 2025ರ ಮಾ.23ರವರೆಗೆ ನೀರು ಹರಿಸಲಾಗುವುದು ಎಂದು ನೀರಾವರಿ ಸಲಹಾ ಸಮಿತಿಯ ಸಭೆಯ ಅಧ್ಯಕ್ಷ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು. ಶನಿವಾರ ಆಲಮಟ್ಟಿಯ ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಐಸಿಸಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ಡಿ.9ರಿಂದ 2025ರ ಮಾ.23ರವರೆಗೆ ನೀರು ಹರಿಸಲಾಗುವುದು ಎಂದು ನೀರಾವರಿ ಸಲಹಾ ಸಮಿತಿಯ ಸಭೆಯ ಅಧ್ಯಕ್ಷ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು. ಶನಿವಾರ ಆಲಮಟ್ಟಿಯ ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಐಸಿಸಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಕಳೆದ ವರ್ಷ ಹಿಂಗಾರು ಹಂಗಾಮಿಗೆ ನೀರು ಹರಿಸಿರಲಿಲ್ಲ. ಆದರೆ, ಈ ಬಾರಿ ನೀರಿನ ಲಭ್ಯತೆಯ ಕಾರಣ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಹಿಂಗಾರಿಗೆ ನೀರನ್ನು ವಾರಾಬಂಧಿ ಪದ್ಧತಿಗೆ ಅನುಗುಣವಾಗಿ ನೀರು ಹರಿಸಲಾಗುತ್ತಿದೆ. ಆಲಮಟ್ಟಿ ಜಲಾಶಯದಲ್ಲಿ 104 ಹಾಗೂ ನಾರಾಯಣಪುರದಲ್ಲಿ 11 ಸೇರಿ 115 ಟಿಎಂಸಿ ನೀರಿದೆ. ಇದರಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 42.25 ಟಿಎಂಸಿ ನೀರು ಹೆಚ್ಚಿಗೆ ಲಭ್ಯವಿದೆ. ಆಲಮಟ್ಟಿ ಜಲಾಶಯದ ಆಧೀನದ ಹಂತ-1 ಹಂತ-2 ಕಾಲುವೆಗಳಿಗೆ ಹಾಗೂ ನಾರಾಯಣಪುರ ಎಡದಂಡೆ ಕಾಲುವೆಗೆ ನ.17 ರಿಂದ ನ.20 ರವರೆಗೆ ನಿರಂತರ ನೀರು ಹರಿಸಲಾಗುತ್ತದೆ. ನ.21 ರಿಂದ ಡಿ.8 ರವರೆಗೆ ನೀರು ಹರಿಸುವುದನ್ನು ಈ ಕಾಲುವೆಗೆ ನಿಲ್ಲಿಸಲಾಗುತ್ತದೆ. ಆದರೆ ನಾರಾಯಣಪುರ ಬಲದಂಡೆ ಕಾಲುವೆಗೆ ಮಾತ್ರ ಅಲ್ಲಿನ ಬೆಳೆಗೆ ಅನುಕೂಲವಾಗಲು ನ.17ರಿಂದ ನ.24 ರವರೆಗೆ ಕಾಲುವೆ ಬಂದ್ ಮಾಡಿ. ನ.25 ರಿಂದ ನ.30 ರವರೆಗೆ ನಿರಂತರ ನೀರು ಹರಿಸಲಾಗುತ್ತದೆ. ಮತ್ತೆ ಈ ಕಾಲುವೆಗೆ ಡಿ.1 ರಿಂದ ಡಿ.8 ರವರೆಗೆ ನೀರು ಹರಿಸುವುದನ್ನು ನಿಲ್ಲಸಲಾಗುತ್ತದೆ ಎಂದು ಸಚಿವರು ತಿಳಿಸಿದರು. ಡಿ.1ರಿಂದ 2025 ರ ಜೂನ್ 30 ರವರೆಗೆ ಕುಡಿಯುವ ನೀರು, ಕೆರೆಗಳ ಭರ್ತಿ, ಕಾಲುವೆಗಳ ಮೂಲಕ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಪೂರೈಸುವುದು, ಭಾಷ್ಕೀಪಕರಣ, ಉಷ್ಣ ವಿದ್ಯುತ್ ಸ್ಥಾವರಗಳಿಗೆ, ಕೈಗಾರಿಕೆಗಳಿಗೆ, ಬ್ಯಾರೇಜ್‌ಗಳಲ್ಲಿ ನೀರು ಸಂಗ್ರಹಣೆ, ರೈತರ ಹಿನ್ನೀರಿನ ಬಳಕೆ ಸೇರಿದಂತೆ ಅಂದಾಜು 44 ಟಿಎಂಸಿ ಅಡಿ ನೀರು ಕಾಯ್ದಿರಿಸಲಾಗುತ್ತದೆ. ಕಾಲುವೆಗಳ ಜಾಲದಿಂದ ಪಂಪ್‌ಸೆಟ್ ಮೂಲಕ ಅಕ್ರಮವಾಗಿ ನೀರು ಎತ್ತಿ ರೈತರು ಜಮೀನಿಗೆ ಒಯ್ಯುತ್ತಿದ್ದು ಗಮನಕ್ಕೆ ಬಂದಿದೆ. ಆದರೆ, ರೈತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬರುವುದಿಲ್ಲ. ಕಾಲುವೆಗಳ ಜಾಲದ ಹೂಳು ತೆಗೆಯುವ ಕ್ಲೋಜರ್ ಕಾಮಗಾರಿಗೆ ₹ 135 ಕೋಟಿ ಅನುದಾನ ನೀಡಲಾಗಿದೆ ಎಂದರು. ಸಚಿವರಾದ ಶಿವಾನಂದ ಪಾಟೀಲ, ಶರಣಬಸಪ್ಪಗೌಡ ದರ್ಶನಾಪುರ, ಶಾಸಕರಾದ ಎಚ್.ವೈ.ಮೇಟಿ, ಸಿ.ಎಸ್.ನಾಡಗೌಡ, ವಿಠ್ಠಲ ಕಟಕದೋಂಡ, ಚನ್ನಾರೆಡ್ಡಿ ಪಾಟೀಲ ತುನ್ನೂರ, ಜೆ.ಟಿ.ಪಾಟೀಲ, ಅಶೋಕ ಮನಗೂಳಿ, ರಾಜಾ ವೇಣುಗೋಪಾಲ ನಾಯಕ, ಕರೆಮ್ಮ ನಾಯಕ, ಸಂಸದ ರಮೇಶ ಜಿಗಜಿಣಗಿ, ಕೆಬಿಜೆಎನ್‌ಎಲ್ ಎಂಡಿ ಕೆ.ಪಿ.ಮೋಹನರಾಜ್, ಮುಖ್ಯ ಎಂಜಿನಿಯರ್ ಎಚ್.ಎನ್.ಶ್ರೀನಿವಾಸ, ಐಸಿಸಿ ಸದಸ್ಯ ಕಾರ್ಯದರ್ಶಿ ಪ್ರೇಮಸಿಂಗ್, ಆರ್.ಮಂಜುನಾಥ ಮತ್ತೀತರರು ಇದ್ದರು.

ಕೋಟ್‌ಆಲಮಟ್ಟಿ ಹಾಗೂ ನಾರಾಯಣಪುರ ಅಚ್ಚುಕಟ್ಟು ಪ್ರದೇಶದಲ್ಲಿ ಬೇಕಾಬಿಟ್ಟಿ ನೀರು ಬಳಕೆ ಹಾಗೂ ಕಬ್ಬು ಬೆಳೆ ಹೆಚ್ಚು ಬೆಳೆದಿದ್ದರಿಂದ ಸವುಳು-ಜವಳಿನ ಪ್ರಮಾಣ ಹೆಚ್ಚಾಗಿದೆ. ಅದರ ನಿಯಂತ್ರಣಕ್ಕಾಗಿ ಕೃಷ್ಣಾ ಕಾಡಾಗೆ ಹೆಚ್ಚಿನ ಅನುದಾನ ನೀಡಲಾಗುವುದು. ಕೃಷ್ಣಾ ಮೇಲ್ದಂಡೆ ಯೋಜನೆಯ ಸ್ಕಿಂ ಎ ಅಡಿ ನಾನಾ ಜಿಲ್ಲೆಗಳಿಗೆ ಹಂಚಿಕೆಯಾಗಿರುವ ಕೃಷ್ಣಾ ನದಿಯ ನೀರನ್ನು ಮರು ಹಂಚಿಕೆ ಮಾಡಬೇಕು ಎಂಬ ರೈತರ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸಲಾಗುವುದು.ಆರ್‌.ಬಿ.ತಿಮ್ಮಾಪುರ, ಅಬಕಾರಿ ಸಚಿವ

Share this article