ಮಾರುತಿ ಶಿಡ್ಲಾಪೂರ
ಕನ್ನಡಪ್ರಭ ವಾರ್ತೆ ಹಾನಗಲ್ಲದಶಕಗಳ ಹೋರಾಟದ ಫಲವಾಗಿ ಹಾನಗಲ್ಲ ತಾಲೂಕಿನ ಕೆರೆಗಳಿಗೆ ಬಾಳಂಬೀಡ ಏತ ನೀರಾವರಿ ಯೋಜನೆಯಿಂದ ನೀರು ಬಂದಿದೆ. ವರದೆ ಈಗ ವರವಾದಳು. ಬಹುದಿನದ ಬೇಡಿಕೆ ಈಡೇರುವ ಮೂಲಕ ಬರದ ಬಿಸಿ ಉಂಡ ಉತ್ತರ ಭಾಗದ ರೈತರು ಈಗ ನಿರಾಳರಾಗಿದ್ದಾರೆ.
೨೦೧೯ರಲ್ಲಿ ದಿ. ಸಿ.ಎಂ. ಉದಾಸಿ ಅಧಿಕಾರಾವಧಿಯಲ್ಲಿ ₹೩೮೬ ಕೋಟಿ ವಚ್ಚದಲ್ಲಿ ಕಾಮಗಾರಿ ಆರಂಭವಾಗಿ ೫ ವರ್ಷಗಳ ಕಾಲ ರೈತರು ನೀರಿಗಾಗಿ ಕಾಯುತ್ತಿರುವ ಬಾಳಂಬೀಡ ಏತ ನೀರಾವರಿ ಯೋಜನೆ ಯಾವುದೇ ತಾಂತ್ರಿಕ ತೊಂದರೆಗಳಿಲ್ಲದೆ ನೀರು ಹರಿಸಲು ಆರಂಭವಾಗಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ.ಕಳೆದ ಎರಡು ದಿನಗಳಿಂದ ಈ ಯೋಜನೆಯಿಂದ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಅಂದಾಜು ಈಗಾಗಲೇ ೯೬ ಕೆರೆಗಳಿಗೆ ನೀರು ಹರಿಯುತ್ತಿದೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿಯೇ ಪ್ರಾಯೋಗಿಕವಾಗಿ ೪೫ ಕೆರೆಗಳಿಗೆ ನೀರು ಹರಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ವರದಾ ನದಿಯಲ್ಲಿ ನೀರಿನ ಕೊರತೆ ಇರುವುದರಿಂದ ನೀರು ಹರಿಸುವಿಕೆ ಸ್ಥಗಿತಗೊಳಿಸಲಾಗಿತ್ತು. ಈ ವರ್ಷದ ಮಳೆಗೆ ತಾಲೂಕಿನ ಒಂದೂ ಕೆರೆಗಳಿಗೆ ಈವರೆಗೂ ನೀರು ಬಂದಿಲ್ಲ. ಬೆಳೆಗಳಿಗೆ ಹದ ಮಳೆ. ಆದರೆ ಆತಂಕದಲ್ಲಿರುವ ರೈತರಿಗೆ ಬಾಳಂಬೀಡ ಯೋಜನೆ ನೀರು ಹರಿಯುತ್ತಿರುವುದು ವರದಾನವಾಗಿದೆ.
ಈ ಯೋಜನೆ ಆರಂಭವಾದಾಗ ೧೬೨ ಕರೆಗಳಿಗೆ ನೀರು ಹರಿಸುವ ಯೋಜನೆ ಇದಾಗಿತ್ತು. ಅದು ಮುಂದುವರೆದು ವಿಸ್ತಾರಗೊಂಡು ಈಗ ೧೯೩ ಕೆರೆಗಳಿಗೆ ನೀರು ಹರಿಸಲು ವಿಸ್ತರಿಸಲಾಗಿದೆ. ಈ ಎಲ್ಲ ಕೆರೆಗಳಿಗೆ ೯೦ ದಿನಗಳ ಕಾಲ ೧.೩೫ ಟಿಎಂಸಿ ನೀರು ಹರಿಸುವ ಯೋಜನೆ ಇದಾಗಿದೆ. ಇದು ಕೇವಲ ಕೆರೆ ತುಂಬಿಸುವ ಯೋಜನೆಯಾದರೂ ಕೂಡ, ಇದರಿಂದ ಕೊಳವೆ ಬಾವಿಗಳಿಗೆ ಅಂತರ್ಜಲ ಮರುಪೂರಣ ಆಗುವುದರಿಂದ ಕೊಳವೆ ಬಾವಿಗಳ ಮೂಲಕ ನೀರಾವರಿಗೆ ಅತ್ಯಂತ ಅನುಕೂಲವಾಗಿದೆ.ಇದೇ ನೀರಿನ ನಿರೀಕ್ಷೆಯಲ್ಲಿ ನೂರಾರು ರೈತರು ಸಾವಿರಾರು ಎಕರೆ ಅಡಕೆ ಬೆಳೆಗೆ ಮುಂದಾಗಿದ್ದಾರೆ. ಕಳೆದ ವರ್ಷವೇ ಈ
ಕುಡಿಯುವ ನೀರು: ಹಾನಗಲ್ಲ ಪಟ್ಟಣದ ಪಕ್ಕದಲ್ಲಿರುವ ನೂರಾರು ಎಕರೆ ತೋಟ ಕೃಷಿ ಭೂಮಿಗೆ ನೀರೊದಗಿಸುವ ಹಾಗೂ ಹಾನಗಲ್ಲ ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಜಲಾಗಾರ ಆನಿ ಕೆರೆಗೂ ಕೂಡ ಬಾಳಂಬೀಡ ಏತ ನೀರಾವರಿ ಯೋಜನೆಯ ನೀರು ಹರಿಸಲಾಗುತ್ತಿದೆ. ಇದರಿಂದ ಸ್ವಲ್ಪ ಮಟ್ಟಿಗೆ ಹಾನಗಲ್ಲ ಕುಡಿಯುವ ನೀರಿನ ಸಮಸ್ಯೆಗೂ ಒಂದಷ್ಟು ಅನುಕೂಲವಾದಂತಾಗಿದೆ. ಈ ಆನಿಕೆರೆಗೆ ಬೇಸಿಗೆಯಲ್ಲಿ ನೀರಿಗಾಗಿ ಧರ್ಮಾ ಜಲಾಶಯದ ನೀರನ್ನೇ ಅವಲಂಬಿಸಬೇಕಾಗಿತ್ತು.ಶಾಸಕ ಶ್ರೀನಿವಾಸ ಮಾನೆ ಉದ್ಘಾಟನೆಗಾಗಿ ಕಾಯದೇ ರೈತರ ಹಿತಕ್ಕಾಗಿ ಮೊದಲು ಕೆರೆ ತುಂಬಿಸಬೇಕು ಎಂಬ ಕಳಕಳಿಯಿಂದ ಈಗಾಗಲೇ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಆರಂಭವಾಗಿದೆ.ಕಳೆದ ವರ್ಷವೇ ಕೆರೆಗಳಿಗೆ ನೀರು ಹರಿಸುವ ಯೋಜನೆ ಇತ್ತು. ತಾಂತ್ರಿಕ ಕಾರಣಗಳಿಂದ ಸ್ವಲ್ಪ ವಿಳಂಬವಾಯಿತು. ಈಗ ಎಲ್ಲವೂ ಸರಿಯಾಗಿದೆ. ಈ ಯೋಜನೆ ರೈತರ ಸಂಜೀವಿನಿ ಎನ್ನಬಹುದಾಗಿದೆ ಬ್ಯಾಡಗಿಯಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರುದ್ರಪ್ಪ ಹೇಳುತ್ತಾರೆ.
ಬಾಳಂಬೀಡ ಏತ ನೀರಾವರಿ ಯೋಜನೆಗಾಗಿ ೩ ದಶಕಗಳ ಹೋರಾಟವಿತ್ತು. ದಿ.ಸಿ.ಎಂ.ಉದಾಸಿ ಅವರ ಇಚ್ಛಾಶಕ್ತಿಯ ಪ್ರಯತ್ನ ಫಲಿಸಿದೆ. ರೈತರಿಗೆ ಒಂದಷ್ಟು ಸಮಾಧಾನವಾಗಿದೆ ಸಾಂವಸಗಿ ರೈತ ಚನ್ನಪ್ಪ ಬೆಣ್ಣಿ ಹೇಳುತ್ತಾರೆ.