3 ಗೇಟುಗಳ ಮೂಲಕ ನದಿಗೆ 5 ಸಾವಿರ ಕ್ಯುಸೆಕ್ ನೀರು । ಕಾಲುವೆ ಮೂಲಕ 3750 ಕ್ಯುಸೆಕ್ ನೀರು ನದಿಗೆ
ಕನ್ನಡಪ್ರಭ ವಾರ್ತೆ ಮುನಿರಾಬಾದತುಂಗಭದ್ರಾ ಜಲಾಶಯದ 3 ಗೇಟುಗಳಿಂದ ತಲಾ 1 ಅಡಿ ಎತ್ತರಕ್ಕೆ ಏರಿಸಿ ಸೋಮವಾರ ಸಂಜೆ ನದಿಗೆ 5 ಸಾವಿರ ಕ್ಯುಸೆಕ್ ನೀರು ಹರಿಸಲಾಯಿತು. ಜೊತೆಗೆ ಬಲ ಹಾಗೂ ಎಡದಂಡೆ ಕಾಲುವೆ ಮೂಲಕವೂ ಸುಮಾರು 3750 ಕ್ಯುಸೆಕ್ ನೀರು ಹರಿಸಲಾಗಿದೆ. ಒಟ್ಟು 8750 ಕ್ಯುಸೆಕ್ ನೀರು ನದಿಗೆ ಹರಿಬಿಡಲಾಗಿದೆ.
ಭಾನುವಾರ ಸಂಜೆ ಕಾಲುವೆ ಗೇಟ್‌ಗಳ ಮೂಲಕ 1400 ಕ್ಯುಸೆಕ್ ನೀರನ್ನು ಬಿಡಲಾಗಿದ್ದು, ನದಿಗೆ ಬಿಡುತ್ತಿರುವ ನೀರಿನ ಪ್ರಮಾಣವನ್ನು ಹಂತ ಹಂತವಾಗಿ 50,000 ಕ್ಯುಸೆಕ್ ಗೆ ಏರಿಸಲಾಗುವುದು ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.ಮಲೆನಾಡು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಬಿಡುತ್ತಿರುವ ಹಿನ್ನೆಲೆ ತುಂಗಭದ್ರಾ ಜಲಾಶಯಕ್ಕೆ ಸೋಮವಾರ 1,04,600 ಲಕ್ಷ ಕ್ಯುಸೆಕ್ ನೀರು ಹರಿದು ಬಂದಿದೆ. ಜಲಾಶಯದ ನೀರಿನ ಮಟ್ಟವು 1627 ಅಡಿಗೆ ತಲುಪಿತ್ತು ಹಾಗೂ ಜಲಾಶಯದಲ್ಲಿ 86 ಟಿಎಂಸಿ ನೀರು ಶೇಖರಣೆಯಾಗಿದೆ.
ಕಳೆದ ವರ್ಷ ಇದೇ ದಿನದಂದು ಜಲಾಶಯದ ನೀರಿನ ಮಟ್ಟವು 1595 ಅಡಿಗಳಿತ್ತು. ಜಲಾಶಯದಲ್ಲಿ 16 ಟಿಎಂಸಿ ನೀರು ಶೇಖರಣೆಯಾಗಿತ್ತು. ಒಳಹರಿವು 34,071 ಕ್ಯುಸೆಕ್ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಲ್ಲಿ ನೀರಿನ ಸ್ಥಿತಿ ಉತ್ತಮವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಜಲಾಶಯದಲ್ಲಿ 70 ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗಿದೆ.ಭರ್ತಿಗೆ ಕ್ಷಣಗಣನೆ:
ಜೂನ್ ತಿಂಗಳಲ್ಲಿ ಜಲಾಶಯಕ್ಕೆ ಶೂನ್ಯ ಒಳಹರಿವು ಇತ್ತು. ಜಲಾಶಯಕ್ಕೆ ಒಂದು ಹನಿ ನೀರು ಬಂದಿರಲಿಲ್ಲ. ಇದರಿಂದ ಅಧಿಕಾರಿಗಳು ಹಾಗೂ ರೈತರು ಆತಂಕಗೊಂಡಿದ್ದರು. ಆದರೆ ಜುಲೈ ತಿಂಗಳು ಜಲಾಶಯದ ಒಳಹರಿವು ಸುಧಾರಿಸತೊಡಗಿದೆ. ಜು. 1ರಿಂದ ಜಲಾಶಯಕ್ಕೆ ಪ್ರತಿ ನಿತ್ಯ 10 ಸಾವಿರ ಕ್ಯುಸೆಕ್ ನೀರು ಹರಿದು ಬರಲು ಪ್ರಾರಂಭವಾಯಿತು. ಕಳೆದ 6 ದಿನಗಳಲ್ಲಿ ತುಂಗಭದ್ರಾ ಜಲಾಶಯಕ್ಕೆ 6.20 ಲಕ್ಷ ಕ್ಯುಸೆಕ್ ನೀರು ಹರಿದುಬಂದಿದೆ.ಜು.17ರಂದು 63,320 ಕ್ಯುಸೆಕ್ ನೀರು, 18ರಂದು 1,04,060 ಕ್ಯುಸೆಕ್ ನೀರು, 19 ರಂದು 1,08,790 ಕ್ಯುಸೆಕ್ ನೀರು, 20 ರಂದು 1,16,040 ಕ್ಯುಸೆಕ್ ನೀರು, 21ರಂದು 1,25,911 ಕ್ಯುಸೆಕ್ ನೀರು, 22ರಂದು 1,04,600 ಕ್ಯುಸೆಕ್ ನೀರು ಹರಿದು ಬಂದಿದೆ.