ಕನ್ನಡಪ್ರಭ ವಾರ್ತೆ ಹಾಸನ
ಜಲಾಶಯಗಳಲ್ಲಿ ಶೇಖರಣೆಯಾಗಿರುವ ನೀರನ್ನು ಕುಡಿಯುವ ನೀರಿಗೆ ತೊಂದರೆ ಉಂಟಾದ ಸಂದರ್ಭದಲ್ಲಿ ಬಳಸಿಕೊಳ್ಳಲು ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಅನಗತ್ಯ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ದಿನಾಂಕ: ೦೫-೦೩-೨೦೧೪ ಮತ್ತು ೨೭-೦೩-೨೦೧೪ರ ಸರ್ಕಾರದ ಆದೇಶಗಳಲ್ಲಿ ಜಲಸಂಪನ್ಮೂಲ ಇಲಾಖೆಯಡಿ ಜಲಾಶಯಗಳಲ್ಲಿ ಸಂಗ್ರಹಿಸಿರುವ ನೀರನ್ನು ಬೇಸಿಗೆಯಲ್ಲಿ ಅಥವಾ ನೀರಿನ ಅಭಾವವಿರುವ ಪರಿಸ್ಥಿತಿಯಲ್ಲಿ ವ್ಯವಸ್ಥಿತವಾಗಿ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲು ನಿರ್ಧರಿಸಲು ಆಯಾ ಪ್ರಾದೇಶಿಕ ಆಯುಕ್ತರುಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿರುತ್ತದೆ. ಸದರಿ ಆದೇಶದನ್ವಯ ಪ್ರಸಕ್ತ ಸಾಲಿನಲ್ಲಿ ಕ್ರಮವಹಿಸುವಂತೆ ದಿನಾಂಕ:೨೬-೦೨-೨೦೨೬ ಮತ್ತು ದಿನಾಂಕ:೦೫-೦೬-೨೦೨೬ರ ಸರ್ಕಾರದ ಪತ್ರಗಳಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಜಲ ನೀತಿ ಅನ್ವಯ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕಿರುವ ಕಾರಣ ಜಲಾಶಯದಲ್ಲಿ ಪ್ರಸ್ತುತ ಲಭ್ಯವಿರುವ ನೀರನ್ನು ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಕಾಯ್ದಿರಿಸಿಕೊಂಡು ಬಳಸಲು ಈಗಾಗಲೇ ಸೂಚನೆ ನೀಡಲಾಗಿರುತ್ತದೆ.
ಮುಂದುವರಿದು, ರಾಜ್ಯಾದ್ಯಂತ ಬಹುತೇಕ ಜಲಾಶಯಗಳ ಒಳಹರಿವು ಶೂನ್ಯಕ್ಕೆ ಇಳಿದಿದ್ದು ಹಾಗೂ ‘ಎಲ್‌ನಿನೊ’ ಪರಿಣಾಮದಿಂದ ಉಂಟಾಗಲಿರುವ ಬರದ ಪರಿಸ್ಥಿತಿ ಹಾಗೂ ಪರಿಣಾಮಗಳ ಬಗ್ಗೆ ದಿನಾಂಕ:೦೨-೦೭-೨೦೨೬ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಧೀರ್ಘ ಚರ್ಚೆಯ ನಂತರ ‘ಜಲಾಶಯ ನಂಬಿಕೊಂಡು ಯಾವ ರೈತರು ಬೆಳೆ ಹಾಕಬೇಡಿ’ ಎಂದು ಸನ್ಮಾನ್ಯ ಮುಖ್ಯಮಂತ್ರಿಗಳು ಪತ್ರಿಕಾ ಸುದ್ದಿಗೋಷ್ಠಿಯಲ್ಲಿ ತಿಳಿಸಿರುತ್ತಾರೆ. ಮುಖ್ಯಮಂತ್ರಿಗಳ ನಿರ್ದೇಶನದಂತೆ, ಪ್ರಸ್ತುತ ಜಲಾಶಯಗಳಲ್ಲಿನ ನೀರನ್ನು ಕಡ್ಡಾಯವಾಗಿ ಕುಡಿಯುವ ನೀರಿಗೆ ಮಾತ್ರ ಕಾಯ್ದಿರಿಸಬೇಕಾಗಿರುವ ಪರಿಸ್ಥಿತಿ ಉದ್ಭವವಾಗಿರುವ ಕಾರಣ ಎಲ್ಲಾ ಜಲಾಶಯಗಳ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಸಕ್ತ ಸಾಲಿನಲ್ಲಿ ಜಲಾಶಯಗಳನ್ನು ನಂಬಿಕೊಂಡು ಬೆಳೆಯನ್ನು ಬೆಳೆಯದಂತೆ ರೈತರಿಗೆ ಮನವರಿಕೆ ಮಾಡಲು ಪತ್ರಿಕಾ ವರದಿಯನ್ನು ನೀಡಲು ಹಾಗೂ ಆಯಾ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಹಕರಿಸಲು ಮೇಲಿನ ಸರ್ಕಾರದ ಸುತ್ತೋಲೆಯಲ್ಲಿ ಸೂಚಿಸಲಾಗಿರುತ್ತದೆ.ಹಾಲಿ ಪರಿಸ್ಥಿತಿಯನ್ನು ಅವಲೋಕಿಸಲಾಗಿ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಯಾವುದೇ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಲು ಸಾಧ್ಯವಿಲ್ಲದೇ ಇದ್ದು, ಈ ಸಾಲಿನಲ್ಲಿ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಸದ್ಬಳಕೆ ಮಾಡಬೇಕಾಗಿರುತ್ತದೆ, ಈ ನಿಟ್ಟಿನಲ್ಲಿ ಹೇಮಾವತಿ ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟುದಾರರು, ರೈತರು ಹೇಮಾವತಿ ಜಲಾಶಯದ ನೀರನ್ನು ಅವಲಂಭಿತರಾಗಿ ಯಾವುದೇ ಬೆಳೆಗಳನ್ನು ಬೆಳೆಯದಂತೆ ಅಚ್ಚುಕಟ್ಟುದಾರರಲ್ಲಿ ಈ ಮೂಲಕ ಮನವಿ ಮಾಡಲಾಗಿದೆ. ಮೇಲೆ ವಿವರಿಸಿರುವಂತೆ ಹಾಗೂ ಉಲ್ಲೇಖ ಪತ್ರದ ಆದೇಶದನ್ವಯ ಪ್ರಸ್ತುತ ಹೇಮಾವತಿ ಜಲಾಶಯದಲ್ಲಿರುವ ನೀರನ್ನು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾಯ್ದಿರಿಸಬೇಕಾಗಿರುವ ಪರಿಸ್ಥಿತಿ ಉದ್ಭವಿಸಿದ್ದು, ಈ ನಿಟ್ಟಿನಲ್ಲಿ ಅಚ್ಚುಕಟ್ಟುದಾರರು/ರೈತ ಬಾಂಧವರು ಸಹಕರಿಸಲು ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ.