ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣರಾಜಸಾಗರ ಜಲಾಶಯದ ಕೊನೇ ಭಾಗ ಮಳವಳ್ಳಿ ತಾಲೂಕಿನ ನಾಲೆಗಳಿಗೆ ರಾಜಕೀಯ ಉದ್ದೇಶದಿಂದಾಗಿ ನೀರು ಹರಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ರೈತರು ಲಕ್ಷಾಂತರ ರು. ಬೆಳೆ ಒಣಗುವ ಆತಂಕದಲ್ಲಿದ್ದಾರೆ ಎಂದರು.
ನೀರು ಹರಿಸದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೇ ಕಿರಿಯ ಅಧಿಕಾರಗಳ ಮೇಲೆ ಹಿರಿಯ ಅಧಿಕಾರಿಗಳು ದೂರುತ್ತಾರೆ. ಹಿರಿಯ ಅಧಿಕಾರಿಗಳು ಇಲ್ಲಿನ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎನ್ನುತ್ತಾರೆ. ಜಿಲ್ಲಾಡಳಿತ ಕೂಡಲೇ ಗಮನಹರಿಸಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿದರು.ತಾಲೂಕಿನಲ್ಲಿ ಮರಳು, ಮಣ್ಣು, ಕಲ್ಲು ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದೆ. ನಾನು ಶಾಸಕನಾಗಿದ್ದಾಗ ಒಂದೇ ಒಂದು ಹಿಡಿ ಮಣ್ಣು, ಮರಳು ತೆಗೆಯಲು ಬಿಟ್ಟಿರಲಿಲ್ಲ. ಈಗ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ತಾಲೂಕಿನ ಅಧಿಕಾರಿಗಳು ಹಾಗೂ ಪೊಲೀಸರು ಶಾಸಕರ ಪುತ್ರನ ಹುಟ್ಟುಹಬ್ಬಕ್ಕೆ ಅವರ ಮನೆಗೆ ಹೋಗಿ ಶುಭಾಶಯ ಕೋರುತ್ತಾರೆ. ಇಡೀ ಆಡಳಿತವನ್ನು ಪೂರಿಗಾಲಿಯಲ್ಲಿಯೇ ನಡೆಸಲಾಗುತ್ತಿದೆ. ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು.
ನಾನು ಶಾಸಕನಾಗಿದ್ದಾಗ ತಂದಿದ್ದ ಕಾಮಗಾರಿಗಳನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಹಾಲಿ ಶಾಸಕರಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿಲ್ಲ ಎಂದು ಆರೋಪಿಸಿದರು.