ಬೆಳೆಗಳ ಉಳಿಸಲು, ಕುಡಿಯುವುದಕ್ಕೆ ಮಾತ್ರ ನೀರು

KannadaprabhaNewsNetwork |  
Published : Oct 16, 2026, 01:30 AM IST
15ಕೆಪಿಆರ್‌ಸಿಆರ್ 02 :  | Kannada Prabha

ಸಾರಾಂಶ

ತೀವ್ರ ಮಳೆಯ ಕೊರತೆ, ಭೀಕರ ಬರಗಾಲ, ಸಾಲಸೂಲ ಮಾಡಿ ಬಿತ್ತಿದ ಬೆಳೆಗಳು ನೀರಿಲ್ಲದೆಯೇ ಒಣಗುತ್ತಿರುವ ಸಮಯದಲ್ಲಿ ಹಿಂಗಾರು ತಯಾರಿ ಜೊತೆಗೆ ಮುಂದಿನ ಬೇಸಿಗೆಗೆ ಕುಡಿಯುವ ನೀರನ್ನು ಒದಗಿಸುವ ಸವಾಲುಗಳ ನಡುವೆ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಹಲವಾರು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದ್ದು, ಅವುಗಳಲ್ಲಿ ರೈತರ ಸಂಕಷ್ಟಕ್ಕೆ ತಾತ್ಕಾಲಿಕ ಪರಿಹಾರ, ಕುಡಿಯುವ ನೀರಿಗೆ ಆದ್ಯತೆ ಒದಗಿಸಲಾಗಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ತೀವ್ರ ಮಳೆಯ ಕೊರತೆ, ಭೀಕರ ಬರಗಾಲ, ಸಾಲಸೂಲ ಮಾಡಿ ಬಿತ್ತಿದ ಬೆಳೆಗಳು ನೀರಿಲ್ಲದೆಯೇ ಒಣಗುತ್ತಿರುವ ಸಮಯದಲ್ಲಿ ಹಿಂಗಾರು ತಯಾರಿ ಜೊತೆಗೆ ಮುಂದಿನ ಬೇಸಿಗೆಗೆ ಕುಡಿಯುವ ನೀರನ್ನು ಒದಗಿಸುವ ಸವಾಲುಗಳ ನಡುವೆ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಹಲವಾರು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದ್ದು, ಅವುಗಳಲ್ಲಿ ರೈತರ ಸಂಕಷ್ಟಕ್ಕೆ ತಾತ್ಕಾಲಿಕ ಪರಿಹಾರ, ಕುಡಿಯುವ ನೀರಿಗೆ ಆದ್ಯತೆ ಒದಗಿಸಲಾಗಿದೆ.

ಬೆಂಗಳೂರಿನ ವಿಕಾಸಸೌಧದಲ್ಲಿ ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವ ವಿಜಯಾನಂದ ಕಾಶಪ್ಪನವರ ಅವರ ಅಧ್ಯಕ್ಷತೆಯಲ್ಲಿ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಉಳಿದ ಅವಧಿ ಹಾಗೂ ಹಿಂಗಾರು ಹಂಗಾಮಿನಲ್ಲಿ ನೀರು ನಿರ್ವಹಣೆ, ಕೃಷಿ ಚಟುವಟಿಕೆಗಳಿಗೆ ನೀರಿನ ಸಮರ್ಪಕ ಬಳಕೆ ಹಾಗೂ ಸಂಬಂಧಿತ ಪ್ರಮುಖ ವಿಷಯಗಳನ್ನು ಚರ್ಚಿಸಿ ತೆಗೆದುಕೊಂಡ ನಿರ್ಣಯಗಳು ಯೋಜನೆ ವ್ಯಾಪ್ತಿಯ ನಾರಾಯಣಪುರ ಬಲದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದಲ್ಲಿನ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸುವುದಕ್ಕಾಗಿ ಉಳಿದಿರುವ ಅವಧಿಗೆ ನೀರು ಒದಗಿಸುವುದರ ಬಗ್ಗೆ ತೀರ್ಮಾನಕ್ಕೆ ಬರಲಾಯಿತು.

ಸದ್ಯಕ್ಕೆ ಎನ್‌ಆರ್‌ಬಿಸಿ ವ್ಯಾಪ್ತಿಗೆ ಬರುವ ರಾಯಚೂರು ಜಿಲ್ಲೆಯ ಲಿಂಗಸುಗೂರು ಮತ್ತು ದೇವದುರ್ಗ ತಾಲೂಕುಗಳಲ್ಲಿ ಲಕ್ಷಾಂತರ ಎಕರೆಯಲ್ಲಿ ಭತ್ತ, ಹತ್ತಿ, ಜೋಳ, ತೋಟಗಾರಿಕೆ, ಕಾಯಿಪಲ್ಲೆ ಬೆಳೆಗಳನ್ನು ಹಾಕಲಾಗಿದ್ದು, ವಾರಂಬಂಧಿ ಪದ್ಧತಿಯಡಿ ನೀರನ್ನು ಬಿಡಲಾಗುತ್ತಿದೆ. ಈ ಅವಧಿಯನ್ನು ಹತ್ತು ದಿನಗಳ ಕಾಲ ಹೆಚ್ಚಿಸಿ ಅ.25ರವರೆಗೆ ನೀರು ಹರಿಸಲಾಗುತ್ತಿದ್ದು, ನಂತರ ನ.1 ರಿಂದ 12 ವರೆಗೆ ಎರಡು ದಿನಗಳು ಹೆಚ್ಚಿಸಿ ನಿರಂತರವಾಗಿ ನೀರನ್ನು ಹರಿಸಲು ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ. ಇನ್ನುಳಿದಂತೆ ಹಿಂಗಾರು ಹಂಗಾಮಿಗೆ ನೀರನ್ನು ಬಿಡುವುದು ಕಷ್ಟಕರವಾಗಿದ್ದು, ಜಲಾಶಯದಲ್ಲಿ ನೀರಿನ ಮಟ್ಟವನ್ನು ನೋಡಿಕೊಂಡು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲು ಸಭೆ ಮುಂದಾಗಿದೆ.

ವಾರಂಬಂಧಿ ಪದ್ಧತಿ ಕೈಬಿಡಿ: ಐಸಿಸಿ ಸಭೆಯಲ್ಲಿ ಹಾಜರಿದ್ದ ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ, ಲಿಂಗಸುಗೂರು ಶಾಸಕ ಮಾನಪ್ಪ ಡಿ.ವಜ್ಜಲ್‌, ಎಂಎಲ್ಸಿ ಶರಣಗೌಡ ಪಾಟೀಲ್‌ ಬಯ್ಯಾಪುರ ಅವರು ಎನ್‌ಆರ್‌ಬಿಸಿ ವಾರಂಬಂಧಿ ಪದ್ಧತಿಯನ್ನು ಕೈಬಿಡುವಂತೆ ಸಭೆಗೆ ಮನವಿ ಮಾಡಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ವಾರಾಬಂಧಿ ಪದ್ಧತಿಯನ್ನು ಕೈಬಿಟ್ಟು, ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸ್ಥಳೀಯ ರೈತರು ಎದುರಿಸುತ್ತಿರುವ ನೀರಾವರಿ ಸಮಸ್ಯೆಗಳನ್ನು ಸಭೆಯ ಅಧ್ಯಕ್ಷರ ಗಮನಕ್ಕೆ ತಂದ ಶಾಸಕರು, ರೈತರ ಹಿತಾಸಕ್ತಿಯನ್ನು ಕಾಪಾಡುವುದು ಹಾಗೂ ಕೃಷಿ ಚಟುವಟಿಕೆಗಳಿಗೆ ಸಮರ್ಪಕವಾಗಿ ನೀರು ಒದಗಿಸುವುದು ಅತ್ಯಂತ ಅಗತ್ಯವೆಂದು ತಿಳಿಸಿದರು. ಈ ನಿಟ್ಟಿನಲ್ಲಿ ನೀರಿನ ಸಮರ್ಪಕ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಿ, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕರೊಂದಿಗೆ ಒಗ್ಗಟ್ಟಿನಿಂದ ವಾರಾಬಂಧಿ ಪದ್ಧತಿಯನ್ನು ಕೈಬಿಟ್ಟು ನಿರಂತರ ನೀರು ಪೂರೈಸುವಂತೆ ಸಭೆಗೆ ಕೋರಿದ್ದರಿಂದ ರೈತರ ಹಿತಾಸಕ್ತಿ ಮತ್ತು ಕೃಷಿ ಚಟುವಟಿಕೆಗಳಿಗೆ ಸಮರ್ಪಕ ನೀರಿನ ಲಭ್ಯತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಹತ್ತು ದಿನಗಳ ಕಾಲ ವಾರಂಬಂಧಿ ಪದ್ಧತಿಯನ್ನು ಅನುಸರಿಸಿ ನಂತರ ನಿರಂತರವಾಗಿ ನೀರು ಹರಿಸುವುದಾಗಿ ಸಭೆಯ ಭರವಸೆ ನೀಡಿದೆ.

ಸಭೆಯಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್‌ ಧರ್ಮಸಿಂಗ್, ಸಚಿವರಾದ ಎಂ.ಬಿ. ಪಾಟೀಲ್, ಡಾ. ಶರಣಪ್ರಕಾಶ್ ಪಾಟೀಲ್, ಮಾಜಿ ಸಚಿವ ಶರಣ ಬಸಪ್ಪ ದರ್ಶನಾಪುರ, ಶಾಸಕರಾದ ಶ್ರೀ ಉಮೇಶ್ ಮೇಟಿ, ಜೆ.ಟಿ. ಪಾಟೀಲ್, ಜಗದೀಶ್ ಗುಡಗುಂಟಿ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ನಿಗಮದ ಹಿರಿಯ-ಕಿರಿಯ ಅಧಿಕಾರಿಗಳು ಇದ್ದರು.

ಯುಕೆಪಿ ಐಸಿಸಿ ಸಭೆಯಲ್ಲಿ ಬೆಳೆದು ನಿಂತಿರುವ ಭತ್ತ ಸೇರಿ ಇನ್ನಿತರ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಹತ್ತು ದಿನಗಳ ವಾರಂಬಂಧಿ ಪದ್ಧತಿಯಲ್ಲಿ ನೀರನ್ನು ಹರಿಸಲಿದ್ದು, ನ.12ವರೆಗೆ ನಿರಂತರವಾಗಿ ನೀರು ಕೊಡಲಾಗುತ್ತದೆ. ಮುಂದಿನ ಬೇಸಿಗೆಗೂ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗಿರುವುದರಿಂದ ಹಿಂಗಾರು ಹಂಗಾಮಿಗೆ ನೀರು ಒದಗಿಸುವುದು ಕಷ್ಟಕರವಾಗಿದೆ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್‌ ಧರ್ಮಸಿಂಗ್ ಹೇಳಿದರು.

ಎನ್‌ಆರ್‌ಬಿಸಿ ಅಚ್ಚುಕಟ್ಟು ಪ್ರದೇಶದ ರೈತರು ಬೆಳೆದಿರುವ ಬೆಳೆಗಳನ್ನು ಉಳಿಸಲು ಹಾಗೂ ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ಹರಿಸುವಂತೆ, ಯುಕೆಪಿ ಅಧಿಕಾರಿಗಳು ನಾಲೆಗೆ ಭೇಟಿ ನೀಡಿ ಪರಿಶೀಲಿಸುವುದು ಸೇರಿ ಹಲವು ಸಮಸ್ಯೆಗಳ ಕುರಿತು ಮನವಿ ಮಾಡಿದ್ದು, ಬೆಳೆಗಳಿಗೆ ನೀರು ಬಿಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಭವದಿಂದ ಜರುಗಿದ ಶ್ರೀರಂಗಪಟ್ಟಣ ದಸರಾ
೧೦೦ ಅಡಿಗೆ ಕುಸಿದ ಕೆಆರ್‌ಎಸ್ ನೀರಿನ ಮಟ್ಟ