- ನೀರಿನ ರಭಸಕ್ಕೆ ಚಿಮ್ಮಿದ ಕಲ್ಲುಗಳು, ಮಣ್ಣಿನ ರಾಡಿ । ತಪ್ಪಿದ ಅನಾಹುತ
- ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯಡಿ ಅಳವಡಿಸಿದ್ದ ಪೈಪ್ ಲೈನ್- ಕುಳಗಟ್ಟೆ ಶಾಲೆ ಬಳಿ ಬೆಳಗಿನ ಜಾವ ಸುಮಾರು 4.30ರ ವೇಳೆಗೆ ಘಟನೆ
- ಕಂಪ್ಯೂಟರ್, ಟಿವಿ, ಬಟ್ಟೆಗಳು, ಎಲೆಕ್ಟ್ರಾನಿಕ್ ವಸ್ತುಗಳು, ಆಹಾರ ಧಾನ್ಯ ಹಾನಿ- - -
ಕನ್ನಡಪ್ರಭ ವಾರ್ತೆ ದಾವಣಗೆರೆಏತ ನೀರಾವರಿ ಯೋಜನೆ ಪೈಪ್ ಲೈನ್ ಒಡೆದ ಪರಿಣಾಮ ಗಂಟೆಗಟ್ಟಲೆ ಭಾರಿ ಪ್ರಮಾಣದಲ್ಲಿ ನೀರು ರಭಸವಾಗಿ ಹರಿದು, ಸುತ್ತಮುತ್ತಲಿದ್ದ ಮನೆಗಳು, ವಾಹನಗಳಿಗೆ ಹಾನಿಯಾದ ಘಟನೆ ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ ಶನಿವಾರ ನಡೆದಿದೆ.
ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಹೋಬಳಿಯ ಕುಳಗಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಶನಿವಾರ ಬೆಳಗಿನ ಜಾವ ಸುಮಾರು 4.30ರ ವೇಳೆಗೆ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯಡಿ ಅಳವಡಿಸಿದ್ದ ನೀರಿನ ಪೈಪ್ ಲೈನ್ ಆಕಸ್ಮಿಕವಾಗಿ ಒಡೆದಿದೆ. ಪೈಪ್ ಲೈನ್‌ನಲ್ಲಿ ಅತ್ಯಂತ ರಭಸವಾಗಿ ಹರಿಯುತ್ತಿದ್ದ ನೀರು ಒಮ್ಮೆಗೆ ಚಿಮ್ಮಿದೆ. ನೀರು ರಭಸವಾಗಿ ಚಿಮ್ಮಿದ ಜಾಗದಲ್ಲಿ ಹತ್ತಾರು ಅಡಿಗಳಷ್ಟು ಅಗಲ, ಅನೇಕ ಅಡಿಗಳಷ್ಟು ಆಳ ಕೊರೆತ ಉಂಟಾಗಿದೆ.ಏನೇನು ಹಾನಿ?:
ರಭಸವಾಗಿ ಹರಿಯುತ್ತಿದ್ದ ನೀರಿನ ವೇಗಕ್ಕೆ ಪೈಪ್ ಲೈನ್ ಹಾದುಹೋಗಿದ್ದ ಜಾಗದಲ್ಲಿ ಗುಂಡಿಯಾಗಿ, ಕೆಸರು ಮಣ್ಣು, ಸಣ್ಣ ಮತ್ತು ದೊಡ್ಡ ಕಲ್ಲುಗಳು ಸಹ ಹಾರಿಹೋಗಿ, ಅಕ್ಕಪಕ್ಕದಲ್ಲಿದ್ದ ವಾಹನಗಳು, ದಾರಿಹೋಕರು, ಮನೆ, ಕಟ್ಟಡಗಳು, ಕಿಟಕಿಗಳಿಗೆ ಬಿದ್ದಿವೆ. ಕಲ್ಲಿನ ಹೊಡೆತಕ್ಕೆ ಅನೇಕ ಮನೆಗಳ ಹೆಂಚು ಮುರಿದರೆ, ಸಮೀಪದಲ್ಲೇ ಇದ್ದ ಸ್ಫೂರ್ತಿ ಸಿಎಸ್‌ಸಿ ಕಂಪ್ಯೂಟರ್ ಸೆಂಟರ್‌ನಲ್ಲಿ ಕಂಪ್ಯೂಟರ್, ಟಿವಿ, ಬಟ್ಟೆಗಳು, ಗೃಹ ಬಳಕೆ ವಸ್ತು, ಎಲೆಕ್ಟ್ರಾನಿಕ್ ವಸ್ತುಗಳು, ಆಹಾರ ಧಾನ್ಯ ಹಾನಿಗೀಡಾಗಿವೆ.ತುಂಗಭದ್ರಾ ನದಿಯಿಂದ ಪೈಪ್ ಲೈನ್ ಮೂಲಕ ಸಾಸ್ವೇಹಳ್ಳಿ ಏತ ನೀರಾವರಿ ಜಾಕ್‌ವೆಲ್ ಪಂಪ್ ಹೌಸ್‌ನಿಂದ ತ್ಯಾಗದಕಟ್ಟೆ ಸಮೀಪದ ಚೇಂಬರ್‌ಗೆ ನೀರನ್ನು ಲಿಫ್ಟ್ ಮಾಡುವ ಸುಮಾರು 6 ಅಡಿ ವ್ಯಾಸದ ಪೈಪ್ ಲೈನ್ ಕುಳಗಟ್ಟೆ ಗ್ರಾಮವನ್ನು ಹಾದುಹೋಗಿದೆ. ಈ ದೊಡ್ಡ ಪೈಪ್‌ಲೈನ್ ಒಡೆದಿದ್ದೇ ಸಮಸ್ಯೆಗೆ ಕಾರಣವಾಗಿದೆ.
ನಸುಕಿನಲ್ಲಿ ಘಟನೆ ಸಂಭವಿಸಿದ್ದರಿಂದ ಹೆಚ್ಚಿನ ಅನಾಹುತವಾಗಿದೆ. ನೀರು ಚಿಮ್ಮುತ್ತಿದ್ದ ಸ್ಥಳದ ಸಮೀಪದಲ್ಲೇ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ತಂತಿಗಳು ಸಹ ಹಾದುಹೋಗಿವೆ. ಪೈಪ್ ಒಡೆದ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಕ್ಷಣ ಮೊಬೈಲ್ ಮೂಲಕ ಕರೆ ಮಾಡಿ, ತಿಳಿಸಲಾಯಿತು. ಕೆಲ ಹೊತ್ತಿನಲ್ಲೇ ಜಾಕ್ ವೆಲ್‌ನ ಪಂಪ್ ಹೌಸ್ ಬಳಿ ಮೋಟಾರುಗಳನ್ನು ಬಂದ್ ಮಾಡಿದ್ದರಿಂದ ಹೆಚ್ಚಿನ ಹಾನಿ, ಅನಾಹುತ ತಪ್ಪಿದಂತಾಗಿದೆ. ಸದ್ಯಕ್ಕೆ ಪೈಪ್ ಲೈನ್ ದುರಸ್ತಿ ಕಾರ್ಯಕ್ಕೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಗೊತ್ತಾಗಿದೆ.- - -
-26ಕೆಡಿವಿಜಿ3.ಜೆಪಿಜಿ: ಹೊನ್ನಾಳಿ ತಾಲೂಕಿನ ಕುಳಗಟ್ಟೆಯಲ್ಲಿ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಪೈಪ್ ಲೈನ್ ಒಡೆದು ಗುಂಡಿ ಸೃಷ್ಟಿಯಾಗಿ, ಕಲ್ಲು, ಮಣ್ಣಿನ ರಾಡಿ ಸಿಡಿದಿರುವುದು. -26ಕೆಡಿವಿಜಿ4, 6.ಜೆಪಿಜಿ: ಹೊನ್ನಾಳಿ ತಾಲೂಕಿನ ಕುಳಗಟ್ಟೆಯಲ್ಲಿ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಪೈಪ್ ಲೈನ್ ಒಡೆದು ಕಲ್ಲುಮಿಶ್ರಿ ಮಣ್ಣಿನ ರಾಡಿ ಕಾರಂಜಿಯಂತೆ ಚಿಮ್ಮುತ್ತಿರುವುದು.