ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ 80 ಗ್ರಾಮಗಳಲ್ಲಿ ಜಲಕ್ಷಾಮ

KannadaprabhaNewsNetwork | Published : Mar 25, 2025 12:49 AM

ಸಾರಾಂಶ

ಹಳಿಯಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಲಕ್ಷಾಮವಿದೆ

ಹಳಿಯಾಳ: ಇಲ್ಲಿನ ಹಳಿಯಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಲಕ್ಷಾಮವಿದೆ ಎಂದು ಅಧಿಕಾರಿಗಳು ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಪರಿಶೀಲನಾ ಸಭೆಗೆ ಮಾಹಿತಿ ನೀಡಿದರು.

ಹಳಿಯಾಳ ತಾಲೂಕಿನ 15 ಗ್ರಾಮಗಳು, ಜೋಯಿಡಾ ಮತ್ತು ದಾಂಡೇಲಿ ತಾಲೂಕುಗಳು ಸೇರಿದಂತೆ ಒಟ್ಟು 80ಕ್ಕೂ ಅಧಿಕ ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ವೇಳೆ ಮಾತನಾಡಿದ ಶಾಸಕ ಆರ್‌.ವಿ. ದೇಶಪಾಂಡೆ, ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ತಾಲೂಕು ಪಂಚಾಯತ್‌ ಅಧಿಕಾರಿಗಳು, ತಹಸೀಲ್ದಾರರು ಹಾಗೂ ಪಿಡಿಒಗಳು ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಎಂದರು.

ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಬೇಸಿಗೆಯ ಸಮಯದಲ್ಲಿ ಆದಷ್ಟು ತಮ್ಮ ವ್ಯಾಪ್ತಿಗೊಳಪಡುವ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ, ಕುಡಿಯುವ ನೀರಿನ ಸಮಸ್ಯೆಗಳಿದ್ದಲ್ಲಿ ಪರಿಶೀಲಿಸಿ ಮೇಲಧಿಕಾರಿಗಳ ಗಮನಕ್ಕೆ ತರಬೇಕು.

ಅಧಿಕಾರಿಗಳಿಂದ ಸಮಸ್ಯೆ ಬಗೆಹರಿಯದಿದ್ದಲ್ಲಿ ಅವುಗಳನ್ನು ನನ್ನ ಗಮನಕ್ಕೆ ತರಬೇಕು. ಜನರ ಸಮಸ್ಯೆಗಳ ಪರಿಹರಿಸಲು ಆದಷ್ಟು ಶಾಶ್ವತ ಯೋಜನೆಗಳನ್ನು ರೂಪಿಸಲು ಮುಂದಾಗಬೇಕು ಎಂದರು.

ಬಹುಗ್ರಾಮ ಯೋಜನೆ:

ಬಹುಗ್ರಾಮ ನೀರಿನ ಯೋಜನೆಯು ಮುಕ್ತಾಯದ ಹಂತಕ್ಕೆ ತಲುಪಿದ್ದು, ಏಪ್ರಿಲ್ 15ರೊಳಗಾಗಿ 71 ಗ್ರಾಮಗಳಿಗೆ ಪ್ರಾಯೋಗಿಕವಾಗಿ ನೀರು ಪೂರೈಕೆಯನ್ನು ಆರಂಭಿಸಲಿದ್ದೇವೆ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಭಾರಿ ವಿಳಂಬವಾಗಿರುವ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ದೇಶಪಾಂಡೆ, ಜನಜೀವನ ಮಿಷನ್ ಕಾಮಗಾರಿಯು ಸರಿಯಾಗಿ ನಡೆಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಹಳಿಯಾಳ-ದಾಂಡೇಲಿಗೆ ಸಮಸ್ಯೆಯಿಲ್ಲ: ಕಾಳಿನದಿಯ ವರದಾನದಿಂದ ಹಳಿಯಾಳ ಪಟ್ಟಣಕ್ಕೆ ಮತ್ತು ದಾಂಡೇಲಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ ಎಂದು ಸಮಾಧಾನ ವ್ಯಕ್ತಪಡಿಸಿದ ದೇಶಪಾಂಡೆ, ಗ್ರಾಮಾಂತರ ಭಾಗಗಳಲ್ಲಿ ಸಾತ್ನಳ್ಳಿ, ಕೆಸರೊಳ್ಳಿ, ಬೆಳವಟಗಿ ಗ್ರಾಮದಲ್ಲಿ ಆರಂಭಗೊಳ್ಳಲಿರುವ ಗ್ರಾಮದೇವಿಯ ಜಾತ್ರೆಗೆ ಬೇಕಾದ ಸಕಲ ಸೌಲಭ್ಯಗಳನ್ನು ಒದಗಿಸಲು ತಾಪಂ ಮತ್ತು ತಾಲೂಕಾಡಳಿತ ಕ್ರಮ ಕೈಗೊಳ್ಳಬೇಕು. ನೀರಿನ ಸಮಸ್ಯೆ ಎದುರಾಗದಂತೆ ಜಾಗೃತಿ ವಹಿಸಬೇಕೆಂದರು.

ಅಂತರ್ಜಜಲ ಕುಸಿತ:

ಹಳಿಯಾಳ ತಾಪಂ ಪ್ರಭಾರ ಇಒ ಸತೀಶ ಆರ್. ತಾಲೂಕಿನ ನೀರಿನ ಸಮಸ್ಯೆಯನ್ನು ಪ್ರಸ್ತಾಪಿಸುತ್ತಾ, ತಾಲೂಕಿನಲ್ಲಿ ಅಂತರಜಲ ಮಟ್ಟ ತೀರಾ ಕುಸಿದಿದೆ. ಸಾವಿರ ಮೀಟರ್ ಕೊರೆದರೂ ನೀರು ಸಿಗುವ ಸಾಧ್ಯತೆ ಕ್ಷೀಣಿಸಿದೆ ಎಂದರು. ತಾಲೂಕಿನಲ್ಲಿ 524 ಸರ್ಕಾರಿ ಕೊಳವೆಬಾವಿಗಳಿವೆ. ಅದರಲ್ಲಿ 190 ಕಾರ್ಯ ನಿರ್ವಹಿಸುತ್ತಿಲ್ಲ. ಸುಮಾರು 56 ಕೊಳವೆಬಾವಿಗಳನ್ನು ರೀಚಾರ್ಜ್‌ ಮಾಡಲಾಗಿದೆ ಎಂದರು.

ಮಾಹಿತಿ ನಾಲಿಗೆಯ ತುದಿಯಲ್ಲಿರಲಿ:

ತಾಲೂಕಿನ ವ್ಯಾಪ್ತಿಯಲ್ಲಿ ಎಷ್ಟು ಜಲಮೂಲ, ಬೋರ್‌ವೆಲ್‌ ಇವೆ? ಅದರಲ್ಲಿ ಎಷ್ಟು ಕಾರ್ಯ ನಿರ್ವಹಿಸುತ್ತಿವೆ? ಕಳೆದ ವರ್ಷ ನೀರಿನ ಸಮಸ್ಯೆ ಎದುರಾದಾಗ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿಯು ನಿಮ್ಮ ನಾಲಿಗೆಯ ತುದಿಯಲ್ಲಿ ಇರಬೇಕೇ ಹೊರತು, ಫೈಲು, ಡೈರಿ ತಡಕಾಡಿ ಹೇಳಬಾರದು ಎಂದರು.

ಸಭೆಯಲ್ಲಿ ಹಳಿಯಾಳ ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ, ದಾಂಡೇಲಿ ತಹಸೀಲ್ದಾರ ಶೈಲೇಶ್ ಪರಮಾನಂದ, ಜೋಯಿಡಾ ತಹಸೀಲ್ದಾರ ಮಂಜುನಾತ ಮುನವಳ್ಳಿ ಹಾಗೂ ಇತರ ಅಧಿಕಾರಿಗಳು ಮತ್ತು ಪಿಡಿಒಗಳು ಇದ್ದರು.

Share this article