ನೀರಿನ ಕೊರತೆ: ಶಿವನಸಮುದ್ರ, ಶಿಂಷಾ ಕೇಂದ್ರಗಳಲ್ಲಿ ವಿದ್ಯುತ್‌ ಉತ್ಪಾದನೆ ಸ್ಥಗಿತ

KannadaprabhaNewsNetwork |  
Published : Jul 27, 2026, 02:00 AM IST
Shivanasamudra

ಸಾರಾಂಶ

ಕಾವೇರಿ ಕಣಿವೆಯಲ್ಲಿ ಮಳೆ ಕೊರತೆಯಿಂದಾಗಿ ಏಷ್ಯಾದ ಮೊದಲ ಜಲವಿದ್ಯುತ್‌ ಸ್ಥಾವರ ಶಿವನಸಮುದ್ರ ಮತ್ತು ಶಿಂಷಾ ಕೇಂದ್ರಗಳಲ್ಲಿ ಒಂದೂವರೆ ತಿಂಗಳಿಂದ ಜಲವಿದ್ಯುತ್‌ ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡಿದೆ.

ಮಳವಳ್ಳಿ:  ಕಾವೇರಿ ಕಣಿವೆಯಲ್ಲಿ ಮಳೆ ಕೊರತೆಯಿಂದಾಗಿ ಏಷ್ಯಾದ ಮೊದಲ ಜಲವಿದ್ಯುತ್‌ ಸ್ಥಾವರ ಶಿವನಸಮುದ್ರ ಮತ್ತು ಶಿಂಷಾ ಕೇಂದ್ರಗಳಲ್ಲಿ ಒಂದೂವರೆ ತಿಂಗಳಿಂದ ಜಲವಿದ್ಯುತ್‌ ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡಿದೆ.

ಈ ಬಾರಿ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟ ತಾಲೂಕಿನ ಶಿವನಸಮುದ್ರ ಸಮೀಪದ ಕಾವೇರಿ ನದಿ ಬತ್ತಿ ಹೋಗಿದ್ದು, ಜಲವಿದ್ಯುತ್‌ ಉತ್ಪಾದನಾ ಘಟಕಗಳಿಗೆ ನೀರಿನ ಅಭಾವ ತಲೆದೋರಿದೆ. ಜೂನ್‌ ಮತ್ತು ಜುಲೈ ತಿಂಗಳಲ್ಲಿ ವಾಡಿಕೆಯಷ್ಟು ಮಳೆಯಾಗದ ಕಾರಣ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿ ಕಾವೇರಿ ನದಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಳೆದ ಜೂನ್‌ 6ರಿಂದಲೇ ಜಲವಿದ್ಯುತ್‌ ಉತ್ಪಾದನಾ ಘಟಕಗಳು ಸಂಪೂರ್ಣ ಸ್ಥಗಿತಗೊಂಡಿವೆ.

ಶಿವನಸಮುದ್ರ ಯೋಜನೆಯಲ್ಲಿ ವಿದ್ಯುತ್‌ ಉತ್ಪಾದಿಸುವ 10 ಘಟಕ

ಶಿವನಸಮುದ್ರ ಯೋಜನೆಯಲ್ಲಿ ವಿದ್ಯುತ್‌ ಉತ್ಪಾದಿಸುವ 10 ಘಟಕಗಳಿದ್ದು, ವಾರ್ಷಿಕ 367.92 ಮಿಲಿಯನ್‌ ಯುನಿಟ್‌ ಉತ್ಪಾದನಾ ಸಾಮರ್ಥ್ಯ ಹೊಂದಿವೆ. ಶಿಂಷಾ ಯೋಜನೆಯಲ್ಲಿ ಎರಡು ಘಟಕಗಳಿವೆ. ವಾರ್ಷಿಕ 150.67 ಮಿಲಿಯನ್‌ ಟನ್‌ ಉತ್ಪಾದನಾ ಸಾಮರ್ಥ್ಯ ಹೊಂದಿವೆ. ಪ್ರತಿ ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಗೆ 35 ಕ್ಯುಸೆಕ್‌ ನೀರು ಬೇಕಿದೆ. 42 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲು ನಿತ್ಯ ಸುಮಾರು 1,400 ಕ್ಯುಸೆಕ್‌ ನೀರು ಅಗತ್ಯವಾಗಿದೆ.

ಶಿವನಸಮುದ್ರದ ಏಳು ಘಟಕಗಳ ದುರಸ್ತಿ ಈಗ ಬಹುತೇಕ ಪೂರ್ಣ

ಶಿವನಸಮುದ್ರ ಮತ್ತು ಶಿಂಷಾದ ಕೆಲವು ಘಟಕಗಳಲ್ಲಿ ದುರಸ್ತಿ ಕಾರ್ಯ ಬಾಕಿ ಇದ್ದ ಕಾರಣ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿಗದಿತ ಸಾಮರ್ಥ್ಯದಷ್ಟು ವಿದ್ಯುತ್‌ ಉತ್ಪಾದನೆ ಮಾಡಲು ಸಾಧ್ಯವಾಗಿರಲಿಲ್ಲ. ಶಿವನಸಮುದ್ರದ ಏಳು ಘಟಕಗಳ ದುರಸ್ತಿ ಈಗ ಬಹುತೇಕ ಪೂರ್ಣಗೊಂಡಿದೆ. ಮೂರು ಘಟಕಗಳ ದುರಸ್ತಿ ಮಾತ್ರ ಬಾಕಿಯಿದೆ. ಉಳಿದ ಘಟಕಗಳ ದುರಸ್ತಿ ಕಾರ್ಯ ನಡೆದರೆ ಮಾತ್ರ ಪೂರ್ಣ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಘಟದ ಎಂಜಿನಿಯರ್‌ಗಳು.

ಕಾವೇರಿ ನದಿ ನೀರನ್ನು ಸುರಂಗ ಮತ್ತು ದೊಡ್ಡ ಕೊಳವೆಗಳ ಮೂಲಕ ವೇಗವಾಗಿ ಹರಿಸಿ ಕೆಳಭಾಗದ ಟರ್ಬೈನ್‌ಗಳ ಮೇಲೆ ರಭಸವಾಗಿ ಬೀಳುವಂತೆ ಮಾಡಲಾಗುತ್ತದೆ. ನೀರಿನ ರಭಸಕ್ಕೆ ಟರ್ಬೈನ್‌ಗಳು ಅತ್ಯಂತ ವೇಗವಾಗಿ ತಿರುಗುತ್ತವೆ.

ಈ ಟರ್ಬೈನ್‌ಗಳು ಜನರೇಟರ್‌ಗೆ ಸಂಪರ್ಕ ಹೊಂದಿದ್ದು, ತಿರುಗಿದಾಗ ಕಾಂತೀಯ ಕ್ಷೇತ್ರದಿಂದ ಯಾಂತ್ರಿಕ ಶಕ್ತಿಯು ವಿದ್ಯುತ್ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಆದರೆ, ನೀರಿನ ಕೊರತೆಯಿಂದಾಗಿ ವಿದ್ಯುತ್‌ ಉತ್ಪಾದನೆ ಸ್ಥಗಿತವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮೃಗಾಲಯಗಳು ಮನರಂಜನೆಗೂ ಸೈ, ಕಲಿಕೆಗೂ ಸೈ
ದಸರಾ: ಮೈಸೂರು ಅರಮನೆಗೆ ಸುಣ್ಣ - ಬಣ್ಣ