ಜಲ ಜೀವನ್‌ ಮಿಷನ್‌ ಮೂಲಕ ನೀರು ಪೂರೈಕೆ, ಸಿಬ್ಬಂದಿ ಪಾತ್ರ ಮಹತ್ವದ್ದು

KannadaprabhaNewsNetwork | Published : May 8, 2025 12:33 AM

ಸಾರಾಂಶ

ಆಯ್ಕೆಯಾದವರ ಕುಟುಂಬಕ್ಕೆ ಆದಾಯ ಸೃಜನೆ ಮಾಡುವ ನಿಟ್ಟಿನಲ್ಲಿ ಅವಕಾಶ ಕಲ್ಪಿಸಿರುವುದು ತುಂಬಾ ಉತ್ತಮವಾದ ಬೆಳವಣಿಗೆ

ಗದಗ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಜಲ್ ಜೀವನ್ ಮಿಷನ್ ಮತ್ತು ನಲ್ ಜಲ್ ಮಿತ್ರ ಯೋಜನೆಯಡಿ ಆಯ್ಕೆಯಾದ ಗ್ರಾಪಂ ಸಿಬ್ಬಂದಿಗಳು ತರಬೇತಿ ಸದುಪಯೋಗ ಪಡೆದು,ಪಂಚಾಯಿತಿಗಳಲ್ಲಿ ಟ್ಯಾಂಕ್ ಹಾಗೂ ನಲ್ಲಿ ಮೂಲಕ ನೀರು ಸರಬರಾಜು ಮಾಡುವ ಕಾರ್ಯ ಕೈಗೊಳ್ಳುವಲ್ಲಿ ಮಹತ್ವದ ಪಾತ್ರ ನಿಭಾಯಿಸಬೇಕು ಎಂದು ಜಿಪ ಸಿಇಓ ಭರತ್ ಎಸ್ ಹೇಳಿದರು.

ಅವರು ಕೆ.ಎಚ್. ಪಾಟೀಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈಮಲ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಲ್ ಜೀವನ್ ಮಿಷನ್ ಮತ್ತು ನಲ್ ಜಲ್ ಮಿತ್ರ ಯೋಜನೆಯಡಿ ಗ್ರಾಪಂ ಮೂಲಕ ಆಯ್ಕೆಯಾಗಿರುವ ಮಹಿಳಾ ಅಭ್ಯರ್ಥಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಯ್ಕೆಯಾದವರ ಕುಟುಂಬಕ್ಕೆ ಆದಾಯ ಸೃಜನೆ ಮಾಡುವ ನಿಟ್ಟಿನಲ್ಲಿ ಅವಕಾಶ ಕಲ್ಪಿಸಿರುವುದು ತುಂಬಾ ಉತ್ತಮವಾದ ಬೆಳವಣಿಗೆಯಾಗಿದ್ದು, ಈ ತರಬೇತಿಯ ಅವಧಿಯಲ್ಲಿ ಸಾಪ್ಟ್ ಸ್ಕಿಲ್ ಮತ್ತು ಎಂಪ್ಲಾಯಬಿಲಿಟಿ ಕೌಶಲ್ಯ ಸೇರಿದಂತೆ ಒಟ್ಟು 290 ಗಂಟೆಗಳು ಥಿಯರಿ ಮತ್ತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ ಹಾಗೂ ಆನ್ ಜಾಬ್ ತರಬೇತಿಯು 23 ದಿನಗಳು ಇರುತ್ತದೆ ಎಂದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಹಾಗೂ ಸರ್ಕಾರಿ ತರಬೇತಿ ಸಂಸ್ಥೆಯ ಪ್ರಾಚಾರ್ಯ ಡಾ. ಮಲ್ಲೂರ ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಪಂ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ದೊಡ್ಡಮನಿ, ಗದಗ ತಾಪಂ ಇಓ ಮಲ್ಲಯ್ಯ ಕೊರವನವರ, ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕಿ ಉಮಾ ಪಾಳೆಗಾರ, ಸಂಸ್ಥೆಯ ತರಬೇತಿ ಅಧಿಕಾರಿ ಎಲ್.ವೈ. ತಳವಾರ, ಭಾರತಿ ಸುಂಕದ, ವಾಣಿಶ್ರೀ ಕುಲಕರ್ಣಿ, ಸುನಿತಾ ಸಾಕೇನವರ, ಸರ್ಕಾರಿ ಐಟಿಐ ಕಾಲೇಜ್ ಸೂಡಿಯ ತರಬೇತಿದಾರ ಗಂಗಾಧರ ತಳವಾರ, ರಾಜೇಂದ್ರ ಕಂಗೂರಿ ಸೇರಿದಂತೆ ಗದಗ, ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ ಗ್ರಾಪಂ ಮಹಿಳಾ ಅಭ್ಯರ್ಥಿಗಳು ತರಬೇತಿಗೆ ಹಾಜರಾಗಿದ್ದರು.

ಸಂಸ್ಥೆಯ ಕಚೇರಿ ಅಧೀಕ್ಷಕ ಮಹಮ್ಮದಲಿ ನದಾಫ ನಿರೂಪಿಸಿದರು. ಕಿರಿಯ ತರಬೇತಿ ಅಧಿಕಾರಿ ಎಂ.ವೈ. ಕುರಿ ಸ್ವಾಗತಿಸಿದರು, ಬಡೇಸಾಬ್‌ ತೋಟದ ವಂದಿಸಿದರು.

Share this article