ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯಲ್ಲಿ ಜಾತ್ರೆ ಸೇರಿದಂತೆ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳಿಗೆ ಮುನ್ನ ಆ ಪ್ರದೇಶದಲ್ಲಿ ಸರಬರಾಜಾಗುವ ನೀರಿನ ಗುಣಮಟ್ಟವನ್ನು ಕಡ್ಡಾಯವಾಗಿ ಪರೀಕ್ಷೆಗೊಳಪಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅರ್ಧ ವಾರ್ಷಿಕ ಸಭೆಯ ಅಧ್ಯಕ್ಷತೆವಹಿಸಿ ಅವರು, ಬೇಸಿಗೆ ಬಿಸಿಲು ಆರಂಭವಾಗಿದ್ದು, ಈ ದಿನಗಳಲ್ಲಿ ಜಿಲ್ಲೆಯಾದ್ಯಂತ ವಿವಿಧೆಡೆ ಹಬ್ಬ, ಜಾತ್ರೆಗಳು ಸಹಜವಾಗಿ ನಡೆಯುತ್ತಿವೆ. ಈಗಾಗಲೇ ಯಾವುದೇ ಜಾತ್ರೆ, ಹಬ್ಬಗಳನ್ನು ಆಯೋಜಿಸುವ ಮುನ್ನ ಸ್ಥಳೀಯ ಆಡಳಿತದ ಪೂರ್ವಾನುಮತಿ ಇರಬೇಕೆಂದು ಸೂಚಿಸಲಾಗಿದೆ. ಅಂತೆಯೇ, ಆ ಪ್ರದೇಶದಲ್ಲಿ ಸರಬರಾಜಾಗುವ ಕುಡಿಯುವ ನೀರಿನ ಗುಣಮಟ್ಟವನ್ನು ಕಡ್ಡಾಯವಾಗಿ ಪರೀಕ್ಷಿಸಬೇಕು ಎಂದು ಅವರು ಸೂಚಿಸಿದರು. ಶಿರಾ, ಪಾವಗಡ, ಮಧುಗಿರಿ, ಭಾಗಶಃ ಕೊರಟಗೆರೆ ಸೇರಿದಂತೆ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಕಲುಷಿತ ನೀರಿನ ಸರಬರಾಜು, ಕುಡಿಯುವ ನೀರಿಗೆ ಆಹಾಕಾರ ಇತ್ಯಾದಿ ದೂರುಗಳು ಜಿಲ್ಲಾಡಳಿತಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಈಗಾಗಲೇ ಸಮಸ್ಯಾತ್ಮಕ ಎಂದು ಗುರುತಿಸಿರುವ ಪ್ರದೇಶಗಳಲ್ಲಿ ಸರಬರಾಜಾಗುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಬೇಕು. ಅಲ್ಲದೆ, ನೀರು ಸಂಗ್ರಹಿಸುವ ಟ್ಯಾಂಕರ್‌ಗಳ ಶುದ್ಧೀಕರಣ ಹಾಗೂ ಇತ್ಯಾದಿ ಕೆಲಸಗಳನ್ನು ತ್ವರಿತವಾಗಿ ನಿರ್ವಹಿಸಬೇಕು ಎಂದರು. ಪ್ರಸಕ್ತ ಬೇಸಿಗೆ ತೀವ್ರತರವಾಗಿರುತ್ತದೆ ಎಂದು ವರದಿ ಬಂದಿರುವುದರಿಂದ ಕುಡಿಯುವ ನೀರಿನ ಮೂಲ, ಖಾಸಗಿ ಬೋರ್‌ವೆಲ್‌ಗಳಿಂದ ಈ ಹಿಂದೆ ಅಗತ್ಯಬಿದ್ದಲ್ಲಿ ಕುಡಿಯುವ ನೀರು ಸರಬರಾಜು ಮಾಡಿಕೊಂಡಿದ್ದಲ್ಲಿ ಅಂತಹ ಬೋರ್‌ವೆಲ್‌ಗಳನ್ನು ಗುರುತಿಸಿಕೊಳ್ಳಬೇಕು. ಅಲ್ಲದೆ, ಟ್ಯಾಂಕರ್‌ಗಳಿಂದ ನೀರಿನ ಸರಬರಾಜು ಅಗತ್ಯಬಿದ್ದಲ್ಲಿ ಆದ್ಯತೆ ಮೇಲೆ ಕ್ರಮವಹಿಸಲು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು. ಪಂಚಾಯತಿ ವ್ಯಾಪ್ತಿಯ ಪ್ರದೇಶಗಳಲ್ಲದೆ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಕೂಡ ನೀರಿನ ಅಭಾವ ತಲೆದೋರುವ ಸಾಧ್ಯತೆಯಿರುವುದರಿಂದ ಯುದ್ಧೋಪಾದಿಯಲ್ಲಿ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮವಹಿಸಬೇಕು. ಬಿಸಿಹವೆ ಮಾಪನ ಮಾಡುವ ಸಂಬಂಧ ಈಗಾಗಲೇ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಬಿಸಿಹವೆ ಮಾಪನ ಕಡ್ಡಾಯವಾಗಿ ಮಾಡಬೇಕು ಎಂದ ಅವರು, ಬೇಸಿಗೆ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿರುವುದರಿಂದ ಈ ಬಗ್ಗೆ ಅತ್ಯಂತ ಕಟ್ಟೆಚ್ಚರವಹಿಸುವಂತೆ ಅವರು ತಿಳಿಸಿದರು.