ಕನ್ನಡಪ್ರಭ ವಾರ್ತೆ ಶಿವಮೊಗ್ಗ ಭದ್ರಾ ಜಲಾಶಯದ ಎಡದಂಡ ನಾಲೆಗೆ ಜ.10ರಿಂದ ಮತ್ತು ಬಲದಂಡ ನಾಲೆ ಜ.20ರಿಂದ ನೀರು ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಸಾಕಷ್ಟು ಪ್ರಮಾಣದ ಮಳೆಯಾಗದ ಕಾರಣ ಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಾಗಿದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹಣಾ ಮಟ್ಟ 186 ಅಡಿ, ಪ್ರಸ್ತುತ ಶೇ.35.370 ಅಡಿ ಸಂಗ್ರಹವಿದೆ. ಪ್ರಸ್ತತ ಜಲಾಶಯದಲ್ಲಿ ನೀರಾವರಿ ಬಳಕೆಗೆ ಬರುವ 12.50 ಟಿಎಂಸಿ ಪ್ರಮಾಣದ ನೀರನ್ನು ಬಲದಂಡ ನಾಲೆಗೆ 2650 ಕ್ಯುಸೆಕ್ ಮತ್ತು ಎಡದಂಡ ನಾಲೆಗೆ 380 ಕ್ಯುಸೆಕ್ ಮತ್ತು ಗೊಂದಿ ನಾಲೆ ಸೇರಿದಂತೆ ಪ್ರತಿದಿನ 0.27 ಟಿಎಂಸಿ ನೀರು ಹರಿಸಿದಲ್ಲಿ ಒಟ್ಟು 47 ದಿನಗಳಿಗೆ ನೀರು ಹರಿಸಬಹುದು ಎಂದು ತಿಳಿಸಿದರು.
ಬತ್ತ ಬೆಳೆಯದಿದ್ದರೆ ಒಳಿತು:ಸದ್ಯ ಚಳಿ ವಾತಾವರಣದಿಂದ ತಂಪಿದೆ. ಮಾರ್ಚ್ ನಂತರ ಬೇಸಿಗೆ ಹೆಚ್ಚಲಿದ್ದು, ಕುಡಿಯುವ ನೀರು ಮತ್ತು ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ಕಷ್ಟವಾಗಬಹುದು. ಆದ್ದರಿಂದ ಕಟ್ಟಕಡೆಯ ಅಚ್ಚುಕಟ್ಟುದಾರರ ಅನುಕೂಲವನ್ನೂ ಪರಿಗಣಿಸಿ ಈಗ ಸ್ವಲ್ಪ ತಡವಾಗಿ ನೀರು ಹರಿಸುವ ಬಗ್ಗೆ ಅಧಿಕಾರಿಗಳು, ರೈತರು ತಮ್ಮ ಸಲಹೆ-ಸೂಚನೆಗಳನ್ನು ನೀಡಬೇಕು. ನೀರಿನ ಅಭಾವವಿರುವ ಕಾರಣ ಪ್ರಸ್ತುತ ರೈತರು ಬತ್ತ ಬೆಳೆಯದಿದ್ದರೆ ಒಳಿತು ಎಂದರು.
ದಾವಣಗೆರೆ ಜಿಲ್ಲಾಧಿಕಾರಿ ವೆಂಕಟೇಶ್ ಮಾತನಾಡಿ, ಪ್ರಸ್ತುತ ಜಲಾಶಯದಲ್ಲಿರುವ ನೀರನ್ನು ಕುಡಿಯುವ ನೀರು ಮತ್ತು ತೋಟಗಾರಿಕೆ ಬೆಳೆಗಳಾದ ಅಡಕೆ, ತೆಂಗು ಸಂರಕ್ಷಣೆ ಮಾಡಿಕೊಳ್ಳಬಹುದಾಗಿದ್ದು, ಜಿಲ್ಲೆಯಲ್ಲಿ ಬತ್ತ ಬೆಳೆಯದಿರುವಂತೆ ರೈತರಿಗೆ ಸೂಚನೆ ನೀಡಲಾಗಿದೆ ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿ, ಮೇ 15ರವರೆಗೆ ನೀರು ಬೇಕೇಬೇಕು. 47 ದಿನಗಳಿಗೆ ಆಗಬಹುದಾದ ನೀರನ್ನು ಸಮರ್ಪಕವಾಗಿ ನೀಡಲು ಜ.15ರಿಂದ ಆನ್ ಮತ್ತು ಆಫ್ ಮಾದರಿಯಲ್ಲಿ ಮೇ ತಿಂಗಳವರೆಗೆ ನೀಡುವುದು ಉತ್ತಮ. ತುಂಗಾ ನದಿಯಿಂದ ಅಪ್ಪರ್ ಭದ್ರಾ ಯೋಜನೆಗೆ ನೀರು ನೀಡಲು ಕ್ರಮ ಕೈಗೊಳ್ಳಬೇಕು. ಎಂಜಿನಿಯರುಗಳು ಸಭೆ ಕೈಗೊಂಡು ತುಂಗಾ ಜಲಾಶಯದಿಂದ ನೀರೆತ್ತಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
- - - ಕೋಟ್...
- ಲಿಂಗರಾಜ್, ರೈತ ಮುಖಂಡ, ದಾವಣಗೆರೆ
- ರಘು, ರೈತ ಮುಖಂಡ.
ಮತ್ತು ತುಂಗಾ ಜಲಾಶಯದಿಂದ 19.5 ನೀರನ್ನು ಲಿಫ್ಟ್ ಮಾಡಿದಲ್ಲಿ ಭದ್ರಾ ಜಲಾಶಯಕ್ಕೆ ನೀರು ಉಳಿಯುತ್ತದೆ. ಆದ್ದರಿಂದ ಸಚಿವರು, ಶಾಸಕರು ಸೇರಿ ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರ ಬಳಿ ಈ ಬಗ್ಗೆ ಮಾತನಾಡಿ, ತುಂಗಾ ನದಿಯಿಂದ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ನೀಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ತೇಜಸ್ವಿ ಪಟೇಲ್ ಮಾತನಾಡಿ, ಭದ್ರಾ ಜಲಾಶಯದಲ್ಲಿ ನೀರನ್ನು ಆನ್ ಮತ್ತು ಆಫ್ ಜೊತೆಗೆ ಡಿಸ್ಚಾರ್ಜ್ ನಿರ್ವಹಣೆ ಮಾಡಬೇಕು. ನೀರಿನ ಸಂಗ್ರಹಕ್ಕಿಂತ ಮುಖ್ಯವಾಗಿ ನಿರ್ವಹನೆ ಕಡೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.- - - -6ಎಸ್‌ಎಂಜಿಕೆಪಿ01:
ಶಿವಮೊಗ್ಗದ ಮಲವಗೊಪ್ಪದಲ್ಲಿರುವ ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ 2023-24ನೇ ಸಾಲಿನ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.