ಹೊಸಪೇಟೆ: ವಿಜಯನಗರ ಜಿಲ್ಲೆಯ ರಾಯ, ಬಸವಣ್ಣ ಕಾಲುವೆಗಳಿಗೆ ಹಂಚಿಕೆಯಾದ 0.500 ಟಿಎಂಸಿ ನೀರಿನಲ್ಲಿ ಜನವರಿ 21ರಿಂದ ಮೇ 30ರ ವರೆಗೆ 100 ಕ್ಯುಸೆಕ್‌ನಂತೆ ಆನ್ ಆ್ಯಂಡ್ ಆಫ್‌ನಂತೆ ನೀರು ಹರಿಸಬಹುದಾಗಿದೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ನಡೆದ ತುಂಗಭದ್ರಾ ಜಲಾಶಯದ 120ನೇ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ವಿಜಯನಗರ ಕಾಲದ ಕಾಲುವೆಗಳಾದ ರಾಯ, ಬಸವ ಕಾಲುವೆಗಳಿಗೆ ಆನ್ ಆ್ಯಂಡ್ ಆಫ್ ಮಾದರಿಯಲ್ಲಿ ಪ್ರತಿದಿನ ಮೇ 30ರ ವರೆಗೆ ನೀರು ಹರಿಸಲು ನಿರ್ಧಾರ ಕೈಗೊಳ್ಳಲಾಯಿತು.ಗವಿಯಪ್ಪ ಒತ್ತಾಯ: ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ರಾಯ, ಬಸವ ಕಾಲುವೆಗಳು ವಿಜಯನಗರ ಕಾಲದ ಕಾಲುವೆಗಳಾಗಿದ್ದು, 800 ವರ್ಷಗಳ ಭವ್ಯ ಇತಿಹಾಸ ಹೊಂದಿದೆ. ತುಂಗಭದ್ರಾ ಜಲಾಶಯ ನಿರ್ಮಾಣಕ್ಕೂ ಮೊದಲೇ ಈ ಕಾಲುವೆಗಳಿಂದ ರೈತರು ನೀರಾವರಿ ಮಾಡುತ್ತಿದ್ದರು. ಹಾಗಾಗಿ 12000 ಎಕರೆ ಪ್ರದೇಶದಲ್ಲಿ ಕಬ್ಬು ಮತ್ತು 5000 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದು ನಿಂತಿದೆ. ರೈತರ ಜಮೀನಿಗೆ ಪ್ರತಿದಿನ 200 ಕ್ಯುಸೆಕ್ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯಿಸಿ, ಈಗ ಜಲಾಶಯದಲ್ಲಿ ಬರೀ 10 ಟಿಎಂಸಿಯಷ್ಟು ನೀರಿದೆ. ಕುಡಿಯುವ ನೀರು ಪರಿಗಣನೆಗೆ ತೆಗೆದುಕೊಂಡು ರೈತರ ಬೆಳೆಗಳನ್ನು ಉಳಿಸಲು ಆನ್ ಆ್ಯಂಡ್ ಆಫ್ ಮಾದರಿಯನ್ನು ಪರಿಗಣಿಸಿ ಪ್ರತಿ ನಿತ್ಯ 100 ಕ್ಯುಸೆಕ್ ನೀರು ಹರಿಸಲಾಗುವುದು ಎಂದರು.ಬಳ್ಳಾರಿಗೆ ಕುಡಿಯುವ ನೀರು: ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಮೂಲಕ ಜನವರಿ 21ರಿಂದ ಜನವರಿ 31ರ ವರೆಗೆ 100 ಕ್ಯುಸೆಕ್‌ನಂತೆ ಮತ್ತು ಫೆಬ್ರವರಿ, ಮಾರ್ಚ್ ತಿಂಗಳಲ್ಲಿ 10 ದಿನಗಳಿಗೊಮ್ಮೆ 100 ಕ್ಯುಸೆಕ್‌ನಂತೆ ಕುಡಿಯುವ ನೀರಿನ ಸಲುವಾಗಿ ಬಳ್ಳಾರಿ ನಗರ ಹಾಗೂ ಜಿಲ್ಲೆಯ ಇತರೆ ಕುಡಿಯುವ ನೀರಿನ ಯೋಜನೆಗೆ ಹಾಗೂ ಕೆರೆ ಕಟ್ಟೆಗಳನ್ನು ತುಂಬಿಸಲು ನೀರು ಹರಿಸುವುದು ಎಂದು ನಿರ್ಣಯಿಸಲಾಯಿತು.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ: ಕುಡಿಯುವ ನೀರಿಗೆ ಕಾಯ್ದಿರಿಸಲಾದ 0.500 ಟಿಎಂಸಿ ಪೈಕಿ 0.300 ಟಿಎಂಸಿ ನೀರನ್ನು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜನವರಿ 22ರಿಂದ ಏಪ್ರಿಲ್ 30ರ ವರೆಗೆ 60 ಕ್ಯುಸೆಕ್ ಆನ್/ಆಫ್‌ನಂತೆ(ಕುಡಿಯುವ ನೀರು ಒಳಗೊಂಡು) ಉಳಿದಂತೆ ರಾಯಚೂರು ಜಿಲ್ಲೆಗೆ ಹಂಚಿಕೆಯಾದ 1.200 ಟಿಎಂಸಿ ನೀರನ್ನು ಫೆಬ್ರವರಿ 15ರಿಂದ ಫೆಬ್ರವರಿ 20ರ ವರೆಗೆ 0.600 ಟಿಎಂಸಿ ಮತ್ತು ಏಪ್ರಿಲ್ 10ರಿಂದ ಏಪ್ರಿಲ್ 20ರವರೆಗೆ 700 ಕ್ಯುಸೆಕ್‌ನಂತೆ 0.600 ಟಿಎಂಸಿ ನೀರನ್ನು ಕುಡಿಯುವ ನೀರಿನ ಸಲುವಾಗಿ ಹರಿಸಬಹುದು ಎಂದು ನಿರ್ಣಯಿಸಲಾಯಿತು.ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ಎನ್.ಎಸ್. ಬೋಸರಾಜು, ಶಾಸಕರಾದ ಗವಿಯಪ್ಪ, ಜನಾರ್ದನರೆಡ್ಡಿ, ರಾಘವೇಂದ್ರ ಹಿಟ್ನಾಳ್, ರೈತ ಮುಖಂಡರಾದ ಕಟಿಗಿ ಜಂಬಯ್ಯ ನಾಯಕ, ಕಿಚಿಡಿ ಶ್ರೀನಿವಾಸ್, ಗೌಡರ ರಾಮಣ್ಣ, ಕಟಿಗಿ ರಾಮಕೃಷ್ಣ, ಉತ್ತಂಗಿ ಕೊಟ್ರೇಶ್, ನಾಗರಾಜ, ಆಶಾಮ್ ಮತ್ತಿತರರಿದ್ದರು.
ನೀರು ಹರಿಸಲು ಸಚಿವ ಜಮೀರ್ ಪಟ್ಟುಹೊಸಪೇಟೆ: ವಿಜಯನಗರ ಜಿಲ್ಲೆಯ ರೈತರ ಬೆಳೆ ಹಾಗೂ ಕುಡಿಯುವ ನೀರು ಪೊರೈಕೆಗೆ ಅಗತ್ಯವಾದ ಪ್ರಮಾಣದ ನೀರು ಮೀಸಲಿಡಬೇಕು. ರೈತರಿಗೆ ನಾವು ಮಾತು ಕೊಟ್ಟಿದ್ದು, ಅದರಂತೆ ನಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಪಟ್ಟು ಹಿಡಿದರು.
ಅಧಿವೇಶನ ಸಂದರ್ಭದಲ್ಲಿ ರೈತರು ಪ್ರತಿಭಟನೆ ಧರಣಿ ನಡೆಸಿದಾಗ ಬಾಳೆ ಮತ್ತು ಕಬ್ಬು ಬೆಳೆಗೆ ಅಗತ್ಯ ನೀರು ಮತ್ತು ಕುಡಿಯಲು ನೀರು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯವರು ಹಾಗೂ ನಾನು ಕೂಡ ಭರವಸೆ ನೀಡಿದ್ದೆವು. ಅದಕ್ಕೆ ಒಪ್ಪಿ ರೈತರು ಧರಣಿ ವಾಪಸ್ ಪಡೆದಿದ್ದರು. ಇದೀಗ ಅದರಂತೆ ನೀರು ಬಿಡುಗಡೆ ಮಾಡಬೇಕು. ಬಳ್ಳಾರಿ, ಕೊಪ್ಪಳ, ರಾಯಚೂರಿಗೂ ಕುಡಿಯುವ ನೀರು ಪೂರೈಕೆಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.ಪ್ರಸ್ತುತ ಡ್ಯಾಂನಲ್ಲಿರುವ ನೀರಿನ ಪ್ರಮಾಣ, ಜಿಲ್ಲಾವಾರು ಹಂಚಿಕೆ, ಕುಡಿಯುವ ನೀರು ಪೂರೈಕೆ, ಬೆಳೆಗಳಿಗೆ ನೀರು ಎಲ್ಲವನ್ನೂ ಗಮನದಲ್ಲಿಟ್ಟು ಕೊಂಡು ಸಲಹಾ ಸಮಿತಿ ನಿರ್ಣಯದಂತೆ ನಡೆಯಬೇಕು ಎಂದರು.