ತಾಲೂಕಿನ ಡೊಣಗಾಪೂರ ಗ್ರಾಮದಲ್ಲಿ ಎರಡು ಹೊಸ ಕೊಳವೆ ಬಾವಿಗಳನ್ನು ಕೊರೆಯಿಸಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಪಂ ಸಿಇಒ ಗಿಟ್ಟೆ ಮಾಧವ ವಿಠ್ಠಲರಾವ್ ಹೇಳಿದರು.
ಕನ್ನಡಪ್ರಭ ವಾರ್ತೆ ಭಾಲ್ಕಿ
ತಾಲೂಕಿನ ಡೊಣಗಾಪೂರ ಗ್ರಾಮದಲ್ಲಿ ಎರಡು ಹೊಸ ಕೊಳವೆ ಬಾವಿಗಳನ್ನು ಕೊರೆಯಿಸಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಪಂ ಸಿಇಒ ಗಿಟ್ಟೆ ಮಾಧವ ವಿಠ್ಠಲರಾವ್ ಹೇಳಿದರು.
ಡೋಣಗಾಪೂರ ಗ್ರಾಮದಲ್ಲಿ ಶುಕ್ರವಾರ ಗ್ರಾಮ ಸಂಚಾರ ಕೈಗೊಂಡು ಕುಡಿಯುವ ನೀರು ಹಾಗೂ ನಿತ್ಯ ಗೃಹ ಬಳಕೆಗಾಗಿ ಬಳಸುವ ನೀರಿನ ಸಮಸ್ಯೆಯನ್ನು ಪರಿಶೀಲಿಸಿದರು.
ಪಂಚಾಯಿತಿ ಆವರಣದಲ್ಲಿ ತುರ್ತು ಸಭೆ: ಪಂಚಾಯತ್ ಆವರಣದಲ್ಲಿ ತುರ್ತು ಸಭೆ ಆಯೋಜಿಸಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ, ಮಾತನಾಡಿದ ಸಿಇಒ, ಡೊಣಗಾಪೂರ ಗ್ರಾಮದಲ್ಲಿ ಯಥೇಚ್ಛವಾಗಿ ನೀರುಂಟು. ಗ್ರಾಮಸ್ಥರು ಹಿತಮಿತವಾಗಿ ನೀರನ್ನು ಬಳಸಬೇಕು. ಪೋಲಾಗುವ ನೀರನ್ನು ತಡೆಗಟ್ಟಲು ಕ್ರಮ ವಹಿಸಬೇಕು. ಹೊಸ ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸುವವರೆಗೆ ಸಮಸ್ಯೆ ಇದ್ದ ಬಡಾವಣೆಗಳಲ್ಲಿ ನಿತ್ಯ ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡಬೇಕು. ಸಾರ್ವಜನಿಕರಿಗೆ ನೀರಿನ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿದ್ದ ನೀರು ಸರಬರಾಜು ಇಲಾಖೆಯ ಎಇ, ಜೆಇ ಹಾಗೂ ಗ್ರಾಪಂ ಪಿಡಿಒ ಅವರಿಗೆ ಸೂಚನೆ ನೀಡಿದರು.
ನೀರಿಗಾಗಿ ಖಾಸಗಿ ಬಾವಿ ಮಾಲೀಕರಿಗೆ ಮಾಸಿಕ 15,000 ರು.: ಸರ್ಕಾರಿ ಜಲಮೂಲಗಳಲ್ಲಿ ನೀರು ಬತ್ತಿ ಹೋದರೆ ಖಾಸಗಿಯವರು ಹೊಂದಿರುವ ಕೊಳವೆ ಬಾವಿ/ಬಾವಿಗಳಿಂದ ನೀರು ಪಡೆದು ಗ್ರಾಮಸ್ಥರಿಗೆ ಪೂರೈಸಿ. ಇದಕ್ಕಾಗಿ ಅವರಿಗೆ ಸರ್ಕಾರದಿಂದ ಪ್ರತಿ ತಿಂಗಳು 15,000ರು. ನಿರ್ಧರಿತ ಹಣ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಇದೇ ವೇಳೆ ಗ್ರಾಮದ ರಾಜಕುಮಾರ ಬಿರಾದಾರ ಹಾಗೂ ಸೂರ್ಯಕಾಂತ್ ಅಡೆಪ್ಪ ಅವರು ತಮ್ಮ ಬಾವಿಗಳಿಂದ ನೀರು ಕೊಡುವುದಾಗಿ ಹೇಳಿ ಹೆಸರು ಗ್ರಾಪಂಯಲ್ಲಿ ನೋಂದಾಯಿಸಿಕೊಂಡರು. ವಿಬಿಜಿ ರಾಮ್ ಜಿ ಯೋಜನೆಯಡಿ ಗ್ರಾಮದಲ್ಲಿನ ಐತಿಹಾಸಿಕ ಕಲ್ಯಾಣಿಯನ್ನು ಎರಡು ತಿಂಗಳೊಳಗಾಗಿ ಪುನಶ್ಚೇತನಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಪಂ ಅಧಿಕಾರಿ ಬೀರೆಂದ್ರಸಿಂಗ್ ಠಾಕೂರ್, ನೀರು ಸರಬರಾಜು ಇಲಾಖೆಯ ಅಭಿಯಂತರ ದತ್ತಾತ್ರಿ ಮೇಧಾ, ತಾಪಂ ಸಹಾಯಕ ನಿರ್ದೇಶಕ ಬಾಲಾಜಿ ಕೊಟೆ, ಎಇ ಅಶ್ವಿನಿ ಚೌದ್ರಿ, ಜೆಇ ಬಸವರಾಜ ರುಮ್ಮಾ, ಪಿಡಿಒ ಬಲಭೀಮ, ಐಇಸಿ ಸಂಯೋಜಕ ಗಣಪತಿ ಹರಕೂಡೆ, ಡಿಇಒ ರಮೇಶ ಸೂರ್ಯವಂಶಿ, ಸುರೇಖಾ ಇನ್ನಿತರರು ಇದ್ದರು.
ತೆರಿಗೆ ಹಣ ಪಾವತಿಸುವಂತೆ ಗ್ರಾಮಸ್ಥರಿಗೆ ಕರೆ: ಡೋಣಗಾಪೂರ ಗ್ರಾಪಂಗೆ ಗ್ರಾಮಸ್ಥರಿಂದ ಒಟ್ಟು 32ಲಕ್ಷ ರು. ಬಾಕಿ ತೆರಿಗೆ ಬರಬೇಕು. ಈ ಪೈಕಿ ಕೇವಲ 6 ಲಕ್ಷ ರು. ತೆರಿಗೆ ಪಾವತಿಸಿದ್ದು, ಗ್ರಾಮದ ಅಭಿವೃದ್ಧಿಗೆ ಹಿನ್ನಡೆ ಸಿಕ್ಕಂತೆ. ನೀವು ನೀಡುವ ತೆರಿಗೆ ಹಣದಿಂದಲೇ ಗ್ರಾಪಂ ಸಿಬ್ಬಂದಿಗೆ ಸಂಬಳ ಪಾವತಿ, ಗ್ರಾಮದ ಬೀದಿ ದೀಪ, ನೀರಿನ ಸೌಲಭ್ಯ, ಚರಂಡಿ ಸ್ವಚ್ಛತೆ ಇನ್ನಿತರ ಕೆಲಸಗಳನ್ನು ಮಾಡಲಾಗುತ್ತದೆ. ಹಾಗಾಗಿ ತೆರಿಗೆ ಪಾವತಿಸದೇ ಇರುವ ಗ್ರಾಮಸ್ಥರು ಆದಷ್ಟು ಬೇಗನೆ ಪಾವತಿಸಿ ಎಂದು ಸಭೆಯಲ್ಲಿ ಪಾಲ್ಗೊಂಡ ಗ್ರಾಮಸ್ಥರಿಗೆ ಸಿಇಒ ಸೂಚನೆ ನೀಡಿದರು. ಅಳಂದಿ ಗ್ರಾಮದಲ್ಲೂ ಜಿಪಂ ಸಿಇಒ ಗಿಟ್ಟೆ ಮಾಧವ ವಿಠ್ಠಲರಾವ್ ಗ್ರಾಮ ಸಂಚಾರ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿದರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.