ಕನಕಗಿರಿಯಲ್ಲಿ ಕರಡಿಗಳಿಂದ ಕಲ್ಲಂಗಡಿ ತೋಟ ನಾಶ

KannadaprabhaNewsNetwork | Published : Aug 3, 2024 12:33 AM

ಸಾರಾಂಶ

ಕನಕಗಿರಿ ತಾಲೂಕಿನ ಹಿರೇಖೇಡ ಗ್ರಾಮದ ಸುತ್ತಮುತ್ತಲಿನ ರೈತರ ಕಲ್ಲಂಗಡಿ, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಬಿತ್ತನೆ ಮಾಡಿದ ಜಮೀನುಗಳಿಗೆ ನುಗ್ಗುತ್ತಿರುವ ಕರಡಿಗಳು ಬೆಳೆ ಹಾಳು ಮಾಡುತ್ತಿವೆ.

ಕನಕಗಿರಿ: ತಾಲೂಕಿನ ಹಿರೇಖೇಡ ಗ್ರಾಮದ ಸುತ್ತಮುತ್ತಲಿನ ರೈತರ ಕಲ್ಲಂಗಡಿ, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಬಿತ್ತನೆ ಮಾಡಿದ ಜಮೀನುಗಳಿಗೆ ನುಗ್ಗುತ್ತಿರುವ ಕರಡಿಗಳು ಬೆಳೆ ಹಾಳು ಮಾಡುತ್ತಿವೆ.

ಕಳೆದ ಒಂದೂವರೆ ತಿಂಗಳಿಂದ ತಾಲೂಕಿನಲ್ಲಿ ಕರಡಿಗಳ ಹಾವಳಿ ಮೀತಿ ಮೀರಿದ್ದು, ರೈತರು ಹೊಲ, ತೋಟಗಳಲ್ಲಿ ವಾಸಿಸದಂತಾಗಿದೆ. ಬೆಳಗಿನ ಜಾವ ಹಾಗೂ ಸಂಜೆಯಾಗುತ್ತಲೇ ಕರಡಿಗಳು ಕಲ್ಲಂಗಡಿ ಹಣ್ಣು ತಿನ್ನಲು ಧಾವಿಸುತ್ತಿವೆ. ರಾತ್ರಿಯಿಡಿ ಹಣ್ಣು ತಿನ್ನುವುದಲ್ಲದೆ ಬೆಳೆಯನ್ನು ಹಾಳು ಮಾಡುತ್ತಿದ್ದರಿಂದ ರೈತರನ್ನು ಆರ್ಥಿಕ ಸಂಕಷ್ಟಕ್ಕೀಡು ಮಾಡಿದೆ.

ಈ ಹಿಂದೆ ಗುಡದೂರು ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯನ್ನು ಹಾಳು ಮಾಡಿತ್ತು. ಇದೀಗ ಹಿರೇಖೇಡ ಸುತ್ತಮುತ್ತಲೂ ಬೆಳೆದ ಫಸಲು ತಿನ್ನಲು ಮುಂದಾಗಿರುವ ಕರಡಿಗಳು ರೈತರನ್ನು ಚಿಂತಿಗೀಡು ಮಾಡಿವೆ. ಗುರುವಾರ ರಾತ್ರಿ ಎರಡು ಕರಡಿಗಳು ತೋಟಕ್ಕೆ ನುಂಗಿ ದಾಂದಲೆ ನಡೆಸಿದ್ದರಿಂದ ಸಾವಿರಾರು ರು. ನಷ್ಟವಾಗಿದೆ. ತಿಂಗಳಿಂದ ಕರಡಿ ಹಾವಳಿ ಹೆಚ್ಚಾಗಿರುವ ಕುರಿತು ಅರಣ್ಯಾಧಿಕಾರಿಗಳಿಗೆ ತಿಳಿಸಿದರೂ ಕರಡಿ ಹಿಡಿಯುವಲ್ಲಿ ವಿಫಲರಾಗಿದ್ದಾರೆ. ಕರಡಿಗಳ ಹಾವಳಿಗೆ ಈ ಭಾಗದ ರೈತರು ಲಕ್ಷಾಂತರ ರು. ನಷ್ಟವಾಗಿದ್ದು, ಮೇಲಧಿಕಾರಿಗಳು ಪರಿಶೀಲಿಸಿ ರೈತರ ಸಂಕಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ನಷ್ಟಕ್ಕೀಡಾದ ರೈತ ಬಾರಿಮರದಪ್ಪ ಜಿನೂರು ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆಯ ಹನುಮಂತಪ್ಪ ಅವರು ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಮೀನಿನಲ್ಲಿ ಹೆಜ್ಜೆ ಗುರುತು ಪತ್ತೆ ಹಚ್ಚಿದರಲ್ಲದೇ ರೈತನಿಗೆ ಹಾನಿಯಾಗಿರುವ ಕುರಿತು ದೃಢೀಕೃತ ವರದಿಯನ್ನು ಪಡೆದು, ನಷ್ಟವಾಗಿರುವ ಬಗ್ಗೆ ಆನ್‌ಲೈನ್‌ನಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು.

ರೈತರಾದ ಭೀಮನಗೌಡ ಜರ‍್ಹಾಳ, ಶಿವಕುಮಾರ ಬಡಿಗೇರ, ಬೀಮನಗೌಡ ಹೊಸಗೇರಿ, ಬಾರಮರದಪ್ಪ ನಡಲಮನಿ ಇತರರು ಇದ್ದರು. ಕೋಟ್: ಹಿರೇಖೇಡ, ಗುಡದೂರು ಸುತ್ತಮುತ್ತ ಕರಡಿಗಳು ತೋಟಗಳಿಗೆ ನುಗ್ಗಿ ಬೆಳೆ ನಾಶಪಡಿಸಿರುವ ಕುರಿತು ವರದಿ ಪಡೆಯಲಾಗಿದೆ. ಪರಿಸರದಲ್ಲಿ ಅಸಮತೋಲನ ಉಂಟಾದಾಗ ಕರಡಿಗಳು ಈ ರೀತಿ ಮಾಡುವುದು ಸಹಜ. ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಗಂಗಾವತಿ ವಲಯ ಅರಣ್ಯಾಧಿಕಾರಿ ಸುಭಾಶ್ಚಂದ್ರ ಹೇಳಿದರು.

Share this article