ಜಲಮೂಲ ಸಂರಕ್ಷಣೆ ಆದ್ಯ ಕರ್ತವ್ಯ: ನಾಗೇಂದ್ರ ಪ್ರಸಾದ್

KannadaprabhaNewsNetwork | Published : Nov 17, 2024 1:20 AM

ಸಾರಾಂಶ

ನದಿ ತಟಗಳ ಸಂರಕ್ಷಣೆಯೊಂದಿಗೆ ಸ್ವಚ್ಛತೆಗಾಗಿ ಪ್ರತಿಯೊಬ್ಬರೂ ಜಾಗೃತರಾಗಬೇಕಾಗಿದೆ ಎಂದು ಬಿ.ಆರ್‌. ನಾಗೇಂದ್ರ ಪ್ರಸಾದ್‌ ಹೇಳಿದರು. ಜಲಮೂಲಗಳ ರಕ್ಷಣೆ ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ನದಿ ತಟಗಳ ಸಂರಕ್ಷಣೆಯೊಂದಿಗೆ ಸ್ವಚ್ಛತೆಗಾಗಿ ಪ್ರತಿಯೊಬ್ಬರೂ ಜಾಗೃತರಾಗಬೇಕಾಗಿದೆ ಎಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಬಿ ಆರ್ ನಾಗೇಂದ್ರ ಪ್ರಸಾದ್ ಕರೆ ನೀಡಿದ್ದಾರೆ.

ಅವರು ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ಮಹಾ ಆರತಿ ಬಳಗ ಆಶ್ರಯದಲ್ಲಿ ಸ್ಥಳೀಯ ಮಹಿಳಾ ಭಜನಾ ಮಂಡಳಿ ಸಹಯೋಗದೊಂದಿಗೆ ನಡೆದ 166 ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಸಕ್ತ ಶುದ್ಧ ನೀರಿಗಾಗಿ ಹಣ ನೀಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಪ್ರಕೃತಿದತ್ತ ಜಲಮೂಲಗಳನ್ನು ಸಂರಕ್ಷಿಸಿ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಕಳೆದ ಹಲವು ವರ್ಷಗಳಿಂದ ನದಿ ಮೂಲಗಳ ಸಂರಕ್ಷಣೆಗಾಗಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೋರಾಟ ನಡೆಸುತ್ತಿರುವ ಬಳಗದ ಕಾರ್ಯಕ್ರಮಗಳ ಬಗ್ಗೆ ನಾಗೇಂದ್ರ ಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು ಅರ್ಚನೆ ಅಷ್ಟೋತ್ತರ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ನಡೆಸಿ ನದಿಗೆ ಸಾಮೂಹಿಕವಾಗಿ ಆರತಿ ಕಾರ್ಯಕ್ರಮ ನೆರವೇರಿಸಿದರು.

ಕಾರ್ತಿಕ ಹುಣ್ಣಿಮೆ ಅಂಗವಾಗಿ ನದಿ ತಟದಲ್ಲಿ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ ಎನ್ ಚಂದ್ರಮೋಹನ್, ನಮಾಮಿ ಕಾವೇರಿ ಬಳಗದ ಪ್ರಮುಖರಾದ ಮಂಡೆಪಂಡ ಬೋಸ್ ಮೊಣ್ಣಪ್ಪ , ಡಿ ಆರ್ ಸೋಮಶೇಖರ್, ಎ ಪಿ ಸುಬ್ಬಯ್ಯ, ಮಹಾ ಆರತಿ ಬಳಗದ ಸಂಚಾಲಕಿ ವನಿತ ಚಂದ್ರಮೋಹನ್, ಧರಣಿ ಸೋಮಯ್ಯ, ಜನಜಾಗೃತಿ ವೇದಿಕೆಯ ಪ್ರಮುಖರಾದ ಶ್ರೀ ಲಕ್ಷ್ಮಿ , ಬಿ ಎಂ ರವಿಚಂದ್ರ, ಮಹಿಳಾ ಭಜನಾ ಮಂಡಳಿ ಪ್ರಮುಖರಾದ ಪದ್ಮ ಪುರುಷೋತ್ತಮ್, ರಮಾ ವಿಜಯೇಂದ್ರ ಮತ್ತಿತರರು ಇದ್ದರು.

ಇದೇ ಸಂದರ್ಭ ಹುಣ್ಣಿಮೆ ಪ್ರಯುಕ್ತ ನಮಾಮಿ ಕಾವೇರಿ ತಂಡದ ಸದಸ್ಯರಿಂದ ಭಾಗಮಂಡಲ ಸಂಗಮ ಕುಂದಚೇರಿ, ಗೂಡುಗದ್ದೆ ಕರಡಿಗೋಡು, ಕೂಡುಮಂಗಳೂರು, ಕೊಪ್ಪ, ಕಣಿವೆ ಸೇರಿದಂತೆ ನದಿ ಉದ್ದಕ್ಕೂ ತಟಗಳಲ್ಲಿ ಮಹಾ ಆರತಿ ಕಾರ್ಯಕ್ರಮ ಜರುಗಿತು.

Share this article