ಹಳಿಯಾಳ: ಪ್ರಸಕ್ತ ವರ್ಷ ಕೇರಳದ ವಯನಾಡ್ ಹಾಗೂ ಜಿಲ್ಲೆಯ ಶಿರೂರಿನಲ್ಲಿ ನಡೆದ ಘಟನೆಗಳು ಮಾನವಕುಲಕ್ಕೆ ಎಚ್ಚರಿಕೆಯ ಸಂದೇಶಗಳಾಗಿವೆ. ಇವುಗಳ ನಿಯಂತ್ರಣವಾಗಬೇಕಾದರೆ ಅರಣ್ಯ ಸಂಪತ್ತಿನ ಸಂರಕ್ಷಣೆ ಅತ್ಯವಶ್ಯಕವಾಗಿದೆ ಎಂದು ಹಳಿಯಾಳ ಅರಣ್ಯ ವಿಭಾಗ ಉಪ ಸಂರಕ್ಷಣಾಧಿಕಾರಿ ಡಾ. ಪ್ರಶಾಂತಕುಮಾರ ಕೆ.ಸಿ. ತಿಳಿಸಿದರು.
ಬುಧವಾರ ಹಳಿಯಾಳ ಅರಣ್ಯ ವಿಭಾಗದ ಆವರಣದಲ್ಲಿ ನಡೆದ ಅರಣ್ಯ ಇಲಾಖೆ ಹುತಾತ್ಮರ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಪುಷ್ಪನಮನ ಹಾಗೂ ಹುತಾತ್ಮರ ಸೇವಾ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಗತ್ತಿನಲ್ಲಿಯೇ ಅರಣ್ಯ ಸಂರಕ್ಷಣೆಗಾಗಿ ಅತಿ ಹೆಚ್ಚು ಜೀವವನ್ನೇ ಬಲಿದಾನ ಮಾಡಿ ಹುತಾತ್ಮರಾದವರಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಆಧುನಿಕ ಯುಗದಲ್ಲಿ ಅರಣ್ಯ ಹಾಗೂ ಪರಿಸರ ಸಂರಕ್ಷಣೆಯು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಬರ ಹಾಗೂ ನೆರೆ ಹಾವಳಿ, ಭೂಕಂಪ ಇತ್ಯಾಧಿಗಳು ಸಂಭವಿಸಲು ಪ್ರಕೃತಿ ಅಸಮತೋಲನವೇ ಕಾರಣವಾಗಿದೆ ಎಂದರು.ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ನಾಗಮ್ಮ ಇಚ್ಚಂಗಿ ಮಾತನಾಡಿ, ಅರಣ್ಯವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರದ್ದಾಗಿದೆ. ಈ ಪವಿತ್ರ ಕಾಯಕದಲ್ಲಿ ಇಡೀ ಸಮಾಜ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು.
ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ದೇಶಭೂಷಣ ಕೌಜಲಗಿ ಮಾತನಾಡಿ, ಅರಣ್ಯ ಹುತಾತ್ಮರು ಅವರು ಮಾನವಕುಲದ ಸಂರಕ್ಷಕರಾಗಿದ್ದು, ಅವರ ತ್ಯಾಗ ನಮಗೆಲ್ಲ ಪ್ರೇರಣೆಯಾಗಲಿ. ಈ ಹುತಾತ್ಮರ ಪಟ್ಟಿಯು ಬೆಳೆಯದಿರಲಿ. ಅದಕ್ಕಾಗಿ ಅರಣ್ಯ ಸಂರಕ್ಷಣೆ ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯವಾಗಲಿ ಎಂದರು.ಹುತಾತ್ಮರ ಸ್ಮರಣೆ: ಸಾಂಬ್ರಾಣಿ ವಲಯ ಅರಣ್ಯಾಧಿಕಾರಿ ಸಂಗಮೇಶ ಪಾಟೀಲ ಅವರು ಅರಣ್ಯ ಹುತಾತ್ಮರ ದಿನಾಚರಣೆಯ ಇತಿಹಾಸ ಹಾಗೂ ಹಿನ್ನೆಲೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಜೋಯಿಡಾ ವಲಯ ಅರಣ್ಯಾಧಿಕಾರಿ ಪ್ರವೀಣ ಚಲವಾದಿ ಕರ್ನಾಟಕದಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ಹುತಾತ್ಮರಾದವರ ಹೆಸರನ್ನು ಓದಿದರು. ಹಳಿಯಾಳ ಅರಣ್ಯ ವಿಭಾಗದಲ್ಲಿ ಹುತಾತ್ಮರಾದ ಅಣ್ಣಪ್ಪ ಮುಗಳಕೋಡ ಹಾಗೂ ದಾಂಡೇಲಿಯಲ್ಲಿ ಎಸಿಎಫ್ ಎಂ.ಎನ್. ನಾಯ್ಕ ಹಾಗೂ ಶಿರಸಿ ಅರಣ್ಯ ವಿಭಾಗದಲ್ಲಿ ಹುತಾತ್ಮರಾದ ಅರವಿಂದ ಹೆಗಡೆ ಅವರ ತ್ಯಾಗ ಬಲಿದಾನವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ, ತಾಪಂ ಇಒ ಸತೀಶ್, ಸಹಾಯಕ ಸರ್ಕಾರಿ ಅಭಿಯೋಜಕ ರಮೇಶ ಬಂಕಾಪುರ, ದಾಂಡೇಲಿ ಉಪವಿಭಾಗದ ಎಸಿಎಫ್ ಡಾ. ಸಂತೋಷ ಚವ್ಹಾಣ, ಬೀರಪ್ಪ ಇದ್ದರು.ಹಳಿಯಾಳ ವಲಯ ಅರಣ್ಯಾಧಿಕಾರಿ ಬಸವರಾಜ್ ಎಂ. ಕಾರ್ಯಕ್ರಮ ನಿರ್ವಹಿಸಿದರು. ಹುತಾತ್ಮರಿಗೆ ಗೌರವ ನಮನ ಪರೇಡ್‌ನ ಮುಂದಾಳತ್ವವನ್ನು ಅಖೀಬ್ ಪಣಿಬಂದ ವಹಿಸಿದ್ದರು. ರಾಜೀವ್ ಕಾಕನಾಟೆ ಹಾಗೂ ತಂಡದವರು ವಾದ್ಯ ನುಡಿಸಿದರು. ಹಳಿಯಾಳ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಸಿಬ್ಬಂದಿ ಇದ್ದರು.