ನಮ್ಮೆಲ್ಲರೆದುರು ವೃತ್ತಿ ಪಾವಿತ್ರ್ಯ ಕಾಪಾಡುವ ಸವಾಲಿದೆ: ಪಿ.ತ್ಯಾಗರಾಜ್

KannadaprabhaNewsNetwork |  
Published : Aug 01, 2025, 12:00 AM IST
ಪೋಟೋ: 31ಎಸ್‌ಎಂಜಿಕೆಪಿ07ಶಿವಮೊಗ್ಗದ ಪತ್ರಿಕಾಭವನದಲ್ಲಿ ಗುರುವಾರ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಪತ್ರಿಕಾರಂಗದಲ್ಲಿ ಮಾಲೀಕರ ಮರ್ಜಿಯಲ್ಲಿ ಸಂಪಾದಕರು ಕೆಲಸ ಮಾಡುವ ಅನಿವಾರ್ಯತೆ ನಡುವೆಯೂ ಪತ್ರಕರ್ತ ವೃತ್ತಿ ಪಾವಿತ್ರ್ಯಕ್ಕೆ ಅಪಚಾರವಾಗದಂತೆ ಕೆಲಸ ಮಾಡಬೇಕಾದ ಸವಾಲು ಪತ್ರಕರ್ತರ ಮುಂದಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಉಪಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಪಿ.ತ್ಯಾಗರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪತ್ರಿಕಾರಂಗದಲ್ಲಿ ಮಾಲೀಕರ ಮರ್ಜಿಯಲ್ಲಿ ಸಂಪಾದಕರು ಕೆಲಸ ಮಾಡುವ ಅನಿವಾರ್ಯತೆ ನಡುವೆಯೂ ಪತ್ರಕರ್ತ ವೃತ್ತಿ ಪಾವಿತ್ರ್ಯಕ್ಕೆ ಅಪಚಾರವಾಗದಂತೆ ಕೆಲಸ ಮಾಡಬೇಕಾದ ಸವಾಲು ಪತ್ರಕರ್ತರ ಮುಂದಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಉಪಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಪಿ.ತ್ಯಾಗರಾಜ್ ಹೇಳಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಿಕಾ ದಿನಾಚರಣೆ ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುವ ಸಮಯ. ನಮ್ಮ ದಾರಿಯಲ್ಲಿ ನಾವು ನಡೆಯುತ್ತಿದ್ದೇವಾ ಎಂಬ ಅವಲೋಕನ‌ ಮಾಡಿಕೊಳ್ಳಬೇಕಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೋಷಿಯಲ್ ಮೀಡಿಯಾಗಳು ಸಾಂಪ್ರದಾಯಿಕ ಮಾಧ್ಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಈ ಸವಾಲಿನ ನಡುವೆ ಪತ್ರಕರ್ತರು ಮುನ್ನಡೆಯಬೇಕಿದೆ ಎಂದು ಹೇಳಿದರು.

ಇತ್ತೀಚೆಗೆ ಪ್ಲಾಂಟೆಡ್‌ ನ್ಯೂಸ್‌ ಮಾಡುವ ಸಿಂಡಿಕೇಟ್‌ ಜರ್ನಲಿಸಂ ಹುಟ್ಟಿಕೊಂಡಿದೆ. ಯಾವುದೇ ಒಂದು ಸುದ್ದಿಯನ್ನು ಸೃಷ್ಟಿಸಿ ಅದನ್ನು ಫೋಕಸ್‌ ಮಾಡಲಾಗುತ್ತಿದೆ. ಇದರಲ್ಲಿ ಕಲ್ಪಿತ ಮತ್ತು ಸುಳ್ಳು ಸುದ್ದಿಗಳೂ ಸೇರಿಕೊಳ್ಳುತ್ತಿವೆ. ತನಿಖಾ ವರದಿಗಾರಿಕೆ, ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಆದ್ಯತೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದರು.

ಶಿವಮೊಗ್ಗ ನಂದನ್‌ ಸ್ಮರಣಾರ್ಥ ಛಾಯಾ ಚಿತ್ರ ಪ್ರದರ್ಶನ ಉದ್ಘಾಟಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ‌ ಮಾತನಾಡಿ, ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಪತ್ರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುವ ವಿವಿಧ ವಿಭಾಗದವರನ್ನು ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ. ಪತ್ರಿಕಾ ರಂಗ ಸಂವಿಧಾನದ ನಾಲ್ಕನೇ ಅಂಗ ಎಂಬ ಬಿರುದನ್ನು ಸಮಾಜವೇ ನೀಡಿದೆ. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವರು ಒಂದು ರೀತಿಯಲ್ಲಿ ಸುದ್ದಿ ನೀಡುವ ಮತ್ತು ಸತ್ಯ ಹೇಳುವ ಯೋಧರಿದ್ದಂತೆ ಎಂದರು.

ಪತ್ರಕರ್ತರು ಸಮಾಜ ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾರೆ. ಪತ್ರಿಕಾ ಕ್ಷೇತ್ರದಲ್ಲಿನ ಕೆಲವು ವ್ಯಕ್ತಿಗಳು ಸುಳ್ಳು ಸುದ್ದಿ ಹರಡುವ ಕಾರಣ ಇಡೀ ಕ್ಷೇತ್ರದ ಮೇಲೆ ತಪ್ಪು ಭಾವನೆ ಬರುವಂತೆ ಮಾಡುತ್ತಾರೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.

ವಾರ್ತಾಧಿಕಾರಿ ಆರ್.ಮಾರುತಿ ಮಾತನಾಡಿ, ಪತ್ರಿಕೋದ್ಯಮವನ್ನು ಖಾಸಗಿ ವ್ಯವಹಾರಗಳ ರಕ್ಷಣೆ ಮಾಡಲು ಬಳಸಿಕೊಳ್ಳಬಾರದು. ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಆರೋಗ್ಯ ಸಂಜೀವಿನಿ, ಕ್ಷೇಮನಿಧಿ ಅರ್ಹರಿಗೆ ದೊರಕುವ ನಿಟ್ಟಿನಲ್ಲಿ ಪತ್ರಿಕಾ ಸಂಘಟನೆಗಳು ಸರ್ಕಾರದೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಹೇಳಿದರು.ಛಾಯಚಿತ್ರ ಪ್ರದರ್ಶನ: ಶಿವಮೊಗ್ಗ ಪ್ರೆಸ್‌ಟ್ರಸ್ಟ್ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯ ಅಂಗವಾಗಿ ಛಾಯಾಗ್ರಾಹಕ ದಿ.ಶಿವಮೊಗ್ಗ ನಂದನ್ ಸವಿ ನೆನಪಿನಲ್ಲಿ ಪತ್ರಿಕಾ ಛಾಯಾಗ್ರಾಹಕರಿಂದ ಛಾಯಾಚಿತ್ರ ಪದರ್ಶನ ಕಾಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಅಧ್ಯಕ್ಷ ಎನ್.ಮಂಜುನಾಥ್‌ ಮಾತನಾಡಿದರು. ಹಿರಿಯ ಪತ್ರಕರ್ತ ಗೋಪಾಲ್‌ ಯಡಗೆರೆ, ಪಿ.ಜೇಸುದಾಸ್‌ , ಕೆ.ತಿಮ್ಮಪ್ಪ, ಚಂದ್ರಶೇಖರ್‌ ಶೃಂಗೇರಿ, ರಾಮಚಂದ್ರ ಗುಣಾರಿ, ವೈ.ಕೆ.ಸೂರ್ಯನಾರಾಯಣ್‌, ಕಾರ್ಯದರ್ಶಿ ನಾಗರಾಜ್‌ ನೇರಿಗೆ, ಸಂತೋಷ್‌ ಕಾಚಿನಕಟ್ಟೆ, ಹೊನ್ನಾಳಿ ಚಂದ್ರಶೇಖರ್‌ ಸೇರಿದಂತೆ ಇತರ ಪತ್ರಕರ್ತರು ಇದ್ದರು.

--------------------

ಪತ್ರಕರ್ತರಿಗೆ ಸನ್ಮಾನ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಪತ್ರಿಕಾಭವನದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಕನ್ನಡಪ್ರಭ ಪತ್ರಿಕೆಯ ಜಾಹಿರಾತು ವಿಭಾಗದ ಮ್ಯಾನೇಜರ್ ಕಾರ್ತಿಕ್ ಚಂದ್ರಮೌಳಿ ಸೇರಿದಂತೆ ಸರ್ವಜ್ಞ ಪತ್ರಿಕೆ ಸಂಪಾದಕ ಎಸ್ ಬಿ ಮಠದ್, ಝೇಂಕಾರ್ ಅಡ್ವಟೈಸರ್ಸ್ ನಿರ್ದೇಶಕ ಟಿ.ಎ.ನರೇಶ್ ಕುಮಾರ್ , ವಿಜಯ ಕರ್ನಾಟಕ ಪತ್ರಿಕೆ ಮುದ್ರಣ ವ್ಯವಸ್ಥಾಪಕ ನಾರಪ್ಪ ಗೌಡ್ರು, ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಗ್ರಾಫಿಕ್ಸ್ ಡಿಸೈನರ್ ಎಂ.ಸಿ.ರಾಜು, ವಿಜಯವಾಣಿ ಪತ್ರಿಕೆಯ ಛಾಯಾಗ್ರಾಹಕ ಶಿವಮೊಗ್ಗ ಯೋಗರಾಜ್, ರಿಪಬ್ಲಿಕ್ ಕನ್ನಡದ ವಿಡಿಯೊ ಜರ್ನಲಿಸ್ಟ್ ಚಿರಾಗ್, ಹಿರಿಯ ಪತ್ರಿಕಾ ವಿತರಕರಾದ ಬಿ.ಮಂಜುನಾಥ್‌ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ