ಕನ್ನಡಪ್ರಭ ವಾರ್ತೆ ಕುಂದಾಪುರಸಂಸದ ಅನಂತ ಕುಮಾರ್ ಹೆಗಡೆ ಅವರದು ಅಹಂಕಾರದ ಮಾತು. ಒಬ್ಬ ವ್ಯಕ್ತಿ ಸರಿ ಇಲ್ಲ ಎಂದರೆ ನಾವು ಅವರ ಹತ್ತಿರವೂ ಸುಳಿಯದೆ ಬೇರೆ ದಾರಿಯೇ ಹಿಡಿಯುತ್ತೇವೆ. ಅಂತವರ ಬಗ್ಗೆ ಮಾತನಾಡುವುದಕ್ಕಿಂತ ಸುಮ್ಮನಿರುವುದೇ ಒಳಿತು ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ವೈದ್ಯ ಕಿಡಿಕಾರಿದರು.
ನನ್ನ ವಿರುದ್ಧ ಸ್ಪರ್ಧಿಗಳೇ ಇಲ್ಲ ಎಂದಿದ್ದ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಮ್ಮಲ್ಲಿಯೂ ಪೈಪೋಟಿ ಇದೆ. ನಾವು ಪ್ರಬಲರಾಗಿದ್ದು, ಅವರನ್ನು ಸೋಲಿಸುತ್ತೇವೆ ಎಂದರು.ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಿವರಾಮ್ ಹೆಬ್ಬಾರ್ ಕಾಂಗ್ರೆಸ್‍ಗೆ ಬರುತ್ತೇನೆ ಎನ್ನುತ್ತಿದ್ದರೆ ಅವರನ್ನು ಬಿಜೆಪಿಯಲ್ಲಿ ಹೇಗೆ ನೋಡಿಕೊಂಡಿರಬೇಕು ಎನ್ನುವುದು ತಿಳಿಯುತ್ತದೆ. ನಾವು ಅವರನ್ನು ಬರಬೇಡಿ ಎಂದಿಲ್ಲ, ನಮ್ಮ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ಬರುವುದಿದ್ದರೆ ನಮ್ಮ ಸ್ವಾಗತವಿದೆ ಎಂದರು.ಮೀನುಗಳ ಸಂತತಿ ವೃದ್ಧಿಸುವ ಉದ್ದೇಶದಿಂದ ಕೃತಕ ಬಂಡೆಗಳ ಸಾಲು ಅಳವಡಿಕೆಗೆ ಮುಂದಾಗಿದ್ದು, 17 ಕೋಟಿ 37 ಲಕ್ಷ ರು. ವೆಚ್ಚದಲ್ಲಿ ಮಂಗಳೂರಿನಿಂದ ಕಾರವಾರದ ತನಕ 52 ಕಡೆಗಳಲ್ಲಿ ಕೃತಕ ಬಂಡೆಗಳನ್ನು ನಿರ್ಮಿಸಲಿದ್ದೇವೆ ಎಂದರು.ಸಂತ್ರಸ್ತ ಮೀನುಗಾರರಿಗೆ ಪರಿಹಾರ ಹಾಗೂ ವಿವಿಧ ಸವಲತ್ತು ವಿತರಣೆಯ ಕಾರ್ಯಕ್ರಮಕ್ಕೆ ಹಾಜರಾಗದ ಶಾಸಕ ಗುರುರಾಜ್ ಗಂಟಿಹೊಳೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಡವರಿಗೆ ಸಹಾಯಗುತ್ತದೆ ಅಂತಾದರೆ ಶಾಸಕರು ಬರಲಿ, ಬಾರದೇ ಇರಲಿ ನಾನು ನನ್ನ ಕೆಲಸ ಮಾಡಿಕೊಂಡು ಹೋಗುತ್ತೇನೆ. ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸಿದ್ದೇವೆ. ಈ ಕಾರ್ಯಕ್ರಮ ಶಾಶ್ವತವಾಗಿ ಮನದಲ್ಲಿ ಉಳಿಯಬೇಕು, ಬಡವರಿಗೆ ಮುಟ್ಟಬೇಕು ಎನ್ನುವ ದಿಸೆಯಲ್ಲಿ ಆಯೋಜಿಸಿದ್ದೇವೆ ಬಿಟ್ಟರೆ ಪ್ರಚಾರಕ್ಕಾಗಿ ಈ ಕಾರ್ಯಕ್ರಮ ಮಾಡಿಲ್ಲ ಎಂದರು.