ಕನ್ನಡಪ್ರಭ ವಾರ್ತೆ ಕೋಲಾರ
ಶಾಸಕ ಮುನಿರತ್ನ ವಿರುದ್ಧ ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ, ಅತ್ಯಾಚಾರ ಪ್ರಕರಣ ದಾಖಲಾಗಿದ್ದು ಬೆಳಗ್ಗೆ ಪತ್ರಿಕೆ ನೋಡಿದಾಗ ತಿಳಿಯಿತು, ದಲಿತ ಮತ್ತು ಒಕ್ಕಲಿಗ ಸಮುದಾಯಕ್ಕೆ ಜಾತಿ ನಿಂದನೆ ಮಾಡಿದ್ದಾರೆ, ಅವರನ್ನು ನ್ಯಾಯಾಲಯ ವಶಕ್ಕೆ ಪಡೆದಿದೆ, ಹೆಣ್ಣು ಮಗುವೊಂದು ಅತ್ಯಾಚಾರದ ಅರೋಪ ಮಾಡಿದೆ, ಅದಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಹೇಳಿದರು.ನಗರದ ಜಿಪಂ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆ ಹೆಣ್ಣು ಮಗಳಿಗೆ ಕೀಟಲೆ ಮಾಡಿ ಎಂದು ನಾವು ಹೇಳಿಕೊಟ್ಟಿದ್ದೆವಾ? ದಲಿತ, ಒಕ್ಕಲಿಗ ಗುತ್ತಿಗೆದಾರನಿಗೆ ಜಾತಿ ಹೆಸರಲ್ಲಿ ನಿಂದಸಲು ನಾವು ಹೇಳಿಕೊಟ್ಟಿದ್ದೆವಾ? ಜಾತಿ ಹೆಸರೇಳಿ ಬೈದಿದ್ದಕ್ಕೆಲ್ಲಾ ರಾಜಕೀಯ ಅನ್ನೋದಕ್ಕೆ ಆಗುತ್ತಾ? ಕಾಂಗ್ರೆಸ್‌ನ ಯಾವುದೇ ಶಾಸಕರ ವಿರುದ್ಧ ಅಟ್ರಾಸಿಟಿ ಇದಿಯಾ ಎಂದು ಪ್ರಶ್ನಿಸಿದರು.
ಯಾವುದೆ ಪಕ್ಷದ ಶಾಸಕರ ಜಾತಿ ನಿಂದನೆ ಆಡಿಯೋ ಅಥವಾ ವಿಡಿಯೋ ಇದ್ದರೆ ಹೇಳಿ, ಬಿಜೆಪಿ ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುತ್ತಿದೆ, ಇಷ್ಟು ದಿನ ಇಲ್ಲದ ಪ್ರಕರಣಗಳು ಈಗೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುನಿರತ್ನ ಈಗ ಬೈದಿರುವುದಕ್ಕೆ ಪ್ರಕರಣ ದಾಖಲಾಗಿದೆ, ಪ್ರಕರಣ ತನಿಖೆ ಹಂತದಲ್ಲಿದೆ ಧ್ವನಿ ಕುರಿತು ಎಫ್‌ಎಸ್‌ಎಲ್ ವರದಿ ಬಂದ ಬಳಿಕ ತೀರ್ಮಾನ ಎಂದರು.ನಾಗಮಂಗಲ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿ, ಎನ್‌ಐಎ ತನಿಖೆಗಿಂತ ನಮ್ಮ ಪೊಲೀಸರೇ ಸಮರ್ಥರಿದ್ದಾರೆ, ನಾಗಮಂಗಲದಲ್ಲಿ ಕೇರಳ ಮೂಲದವ ಅಲ್ಲೇ ೨೦ ವರ್ಷಗಳಿಂದ ನೆಲೆಸಿದ್ದಾನೆ, ಇದು ಭಾರತ ದೇಶ, ಯಾರು ಎಲ್ಲಿ ಬೇಕಾದರೂ ಇರಬಹುದು, ಯಾರೇ ತಪ್ಪು ಮಾಡಿದರೂ ಬಿಡುವ ಪ್ರಶ್ನೆಯೇ ಇಲ್ಲ, ಕೋಮು ಗಲಭೆ ಸೃಷ್ಟಿಸಿದವರನ್ನು ನೇಣಿಗೆ ಹಾಕಬೇಕು ಎಂದು ಸಚಿವ ಸುರೇಶ್ ಹೇಳಿದರು.
ವಾಕಿಂಗ್‌ಪಾಥ್- ಮಕ್ಕಳ ಉದ್ಯಾವನ ಲೋಕಾರ್ಪಣೆಗೆ ಡೀಸಿಗೆ ಸೂಚನೆ:ಕೋಲಾರಮ್ಮ ಕೆರೆಕಟ್ಟೆ ಭಾಗದಲ್ಲಿ ನಿರ್ಮಿಸಿರುವ ವಾಕಿಂಗ್ ಪಾಥ್ ಕಾಮಗಾರಿ ಮತ್ತು ಬೈಪಾಸ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಮಕ್ಕಳ ಉದ್ಯಾವನ ಲೋಕಾರ್ಪಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಡೀಸಿಗೆ ಸೂಚಿಸಲಾಗಿದೆ, ಎರಡನೇ ಹಂತದ ಕಾಮಗಾರಿ ನಿಲ್ಲಿಸಿ ಮೊದಲ ಹಂತದಲ್ಲಿ ಪೂರ್ಣಗೊಂಡಿರುವ ಅಭಿವೃದ್ಧಿ ಲೋಕಾರ್ಪಣೆ ಮಾಡಬೇಕೆಂದು ತಿಳಿಸಿದೆ ಎಂದು ಹೇಳಿದರು.
ಡ್ರಗ್ಸ್ ಮಾಫಿಯಾಗೆ ಕಡಿವಾಣಕ್ಕೆ ಪೊಲೀಸ್ ಇಲಾಖೆಗೆ ಸಚಿವರ ಸೂಚನೆ:ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಗಾಂಜಾ ಪ್ರಕರಣ, ಗೂಂಡಾಗಿರಿ, ರೌಡಿ ಪ್ರಕರಣಗಳ ಬಗ್ಗೆ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದೆ, ಶಾಲಾ ಕಾಲೇಜು ವ್ಯಾಪ್ತಿಗಳಲ್ಲಿ, ವಸತಿ ನಿಲಯಗಳ ಬಳಿ ಡ್ರಗ್ಸ್, ಮಾದಕ ವಸ್ತುಗಳ ಮಾರಾಟ, ಸೇವನೆಯ ಹಾವಳಿ ನಿಯಂತ್ರಿಸಲು ಕಟ್ಟು ನಿಟ್ಟಿನ ಆದೇಶ ಜಾರಿಗೆ ತಂದು ಕರ್ನಾಟಕವನ್ನು ವ್ಯಸನ ಮುಕ್ತ ರಾಜ್ಯವನ್ನಾಗಿಸಲು ಪ್ರತಿಯೊಂದು ಇಲಾಖೆಯೂ ಸಹಕಾರ ನೀಡಬೇಕೆಂದು ಸೂಚಿಸಿದ್ದಾರೆ
ಕೋಲಾರದ ಅಭಿವೃದ್ಧಿಗೆ ೧೨೬ ಕೋಟಿ ರು.ಅನುದಾನ ಬಿಡುಗಡೆ:ಕೋಲಾರ ನಗರದ ಅಭಿವೃದ್ಧಿಗೆ ಈಗಾಗಲೇ ೧೨೬ ಕೋಟಿ ರು. ಅನುದಾನ ತಂದಿದ್ದು, ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರೈತರಿಗೆ ಮಳೆ ವಿಫಲತೆಯಿಂದ ಉಂಟಾಗಿರುವ ನಷ್ಟದ ವರದಿ ೪ ದಿನದಲ್ಲಿ ನೀಡಲು ಸೊಚಿಸಿದ್ದು, ಇದನ್ನು ಸಿಎಂ ಗಮನಕ್ಕೆ ತಂದು ಪರಿಹಾರದ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.