ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಆಕರ್ಷಿಕ ಗುಲಾಬಿ ಮಿಶ್ರಿತ ಬಿಳಿ ಬಣ್ಣದ ಜೀಪ್ ನಲ್ಲಿ ಆಗಮಿಸಿದ ಪೊಲೀಸ್ ಇಲಾಖೆಯ ಅಕ್ಕಪಡೆಯ ಸಿಬ್ಬಂದಿ ಬಸ್ ನಿಲ್ದಾಣ ಮತ್ತು ಪಟ್ಟಣದ ವಿವಿಧೆಡೆ ತೆರಳಿ ಜನತೆಯಲ್ಲಿ ಅದರಲ್ಲೂ ಮಹಿಳೆಯರಲ್ಲಿ ಜಾಗೃತಿ ಮೂಡಿಸಿ ತಮ್ಮ ಸಮಸ್ಯೆಗಳೆನೇ ಇದ್ದರೂ ನಮ್ಮ ಗಮನಕ್ಕೆ ತನ್ನಿ ಎಂದು ಹತ್ತು ಹಲವಾರು ವಿಚಾರಗಳನ್ನು ವಿನಿಮಯ ಮಾಡಿಕೊಂಡು ಮಾಹಿತಿ ಪಡೆದರು.
ಬಸ್ ನಿಲ್ದಾಣ, ವಿ.ವಿ. ರಸ್ತೆ, ಹಾಸನ ರಸ್ತೆಯಲ್ಲಿ ಸಂಚರಿಸಿದ ಅಕ್ಕಪಡೆ ಸಾರ್ವಜನಿಕರನ್ನು ಆಕರ್ಷಿಸಿತಲ್ಲದೆ, ಅಕ್ಕಪಡೆಯ ಬಗ್ಗೆ ಪೂರ್ಣ ಮಾಹಿತಿ ಸಾಮಾನ್ಯರಿಗಿಲ್ಲದ ಕಾರಣ ಹಲವರಲ್ಲಿ ಇದೇನು ಪೊಲೀಸರ ಹೊಸ ಜೀಪ್ ಎನ್ನುವ ಚರ್ಚೆಗೆ ಕಾರಣವಾಯಿತಲ್ಲದೆ, ಇದರ ಬಗ್ಗೆ ತಿಳಿದು ಸರ್ಕಾರದ ಕ್ರಮ ಮಹಿಳೆಯರಿಗೆ ರಕ್ಷಣೆ ನೀಡಲು ಉತ್ತಮ ಯೋಜನೆಯಾಗಿದೆ ಎಂದು ಪ್ರಶಂಸಿದರು.ಮಹಿಳಾ ಮುಖ್ಯಪೇದೆ ಪಲ್ಲವಿ, ವಾಹನ ಚಾಲಕ ನಜೀರ್ ಹಾಗೂ ಸಿಬ್ಬಂದಿಗಳಾದ ಭವಾನಿ ಮತ್ತು ಪೂರ್ಣಿಮಾ ಎಲ್ಲಡೆ ಸಂಚರಿಸಿ ಮಹಿಳೆಯರಿಂದ ತಮ್ಮ ಕರ್ತವ್ಯ ಏನು, ತಾವು ಕಾರ್ಯನಿರ್ವಹಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿನೀಡಿ ನಿಮಗಾಗಿ ನಾವಿದ್ದು ನಮ್ಮ ಬಳಿ ತಮ್ಮ ಏನೆ ಸಮಸ್ಯೆಗಳಿದ್ದರೂ ಹೇಳಿಕೊಳ್ಳಿ ಅದಕ್ಕೆ ಪರಿಹಾರ ಸೂಚಿಸುವುದಾಗಿ ಧೈರ್ಯ ತುಂಬಿದರು.
ಸಂತೆ, ದೇವಸ್ಥಾನ, ಜಾತ್ರೆ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ನೀಡುವಂತೆ ಅಕ್ಕಪಡೆ ಸಿಬ್ಬಂದಿಗೆ ಸೂಚಿಸಲಾಗಿದೆ. ಪಡೆಗೆ ಪ್ರತ್ಯೇಕ ವಾಹನದ ಸೌಲಭ್ಯವಿದ್ದು, ಅದರಲ್ಲಿ ಪೊಲೀಸ್ ಇಲಾಖೆಯ ವಾಹನ ಚಾಲಕ ಹಾಗೂ ಮಹಿಳಾ ಪೊಲೀಸ್ ಪೇದೆ ಇರುತ್ತಾರೆ ಎಂದು ತಿಳಿಸಿದರು.