ಚನ್ನಪಟ್ಟಣ: ಕ್ಷೇತ್ರದಲ್ಲಿ ಈಗ ಶಾಸಕರು ಇಲ್ಲ. ನಾನು ರಾಮಲಿಂಗಾರೆಡ್ಡಿಯವರೇ ನಿಮಗೆ ಉಸ್ತುವಾರಿ, ನಾವೇ ನಿಮ್ಮ ಸೇವಕರು, ನಿಮ್ಮ ಶಾಸಕರು, ನಿಮ್ಮ ಮಂತ್ರಿಗಳು, ನಾವೇ ನಿಮ್ಮ ಸರ್ಕಾರ. ಸರ್ಕಾರವೇ ನಿಮ್ಮ ಸಮಸ್ಯೆ ಪರಿಹರಿಸಲು ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ, ಏನು ಬೇಕೋ ಕೆಲಸ ಮಾಡಿಸಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ಕಾಂಪಿಟೇಷನ್‌ಗೆ ಬಂದಿಲ್ಲ:
ನಾನು ಯಾರ ಮೇಲು ಕಾಂಪಿಟೇಷನ್ ಮಾಡಲು ಇಲ್ಲಿಗೆ ಬಂದಿಲ್ಲ. ನಾನು ಬಂದಿರುವುದು ನಿಮ್ಮ ಸಮಸ್ಯೆ ಪರಿಹರಿಸಲು. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ನಾನು ಕ್ಷೇತ್ರಕ್ಕೆ ಹೆಚ್ಚಾಗಿ ಬರದಿದ್ದರೂ ನಮಗೆ ಹೆಚ್ಚಿನ ಶಕ್ತಿ ನೀಡಿದ್ದೀರಾ. ನನ್ನ ತಮ್ಮನ ಬೆಂಬಲಕ್ಕೆ ನೀವೆಲ್ಲ ನಿಂತಿದ್ದೀರಾ. ವಿಧಾನಸಭೆ ಚುನಾವಣೆಯಲ್ಲಿ ನಮಗೆ ಕೇವಲ ೧೭ ಸಾವಿರ ಮತ ಬಂದಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ೮೫ ಸಾವಿರ ಮತ ನೀಡಿದ್ದೀರಾ. ನಿಮ್ಮ ಋಣ ತೀರಿಸಲೇಬೇಕು ಎಂಬ ಉದ್ದೇಶದಿಂದ ನಾನು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.ಈಗಾಗಲೇ ಮೂರು ಹೋಬಳಿಗಳಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಲಾಗಿದೆ. ೪,೬೧೯ ಅರ್ಜಿಗಳು ಸ್ವೀಕೃತವಾಗಿದೆ. ಯಾರು ಯಾವ ವಿಚಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಪಟ್ಟಿ ಮಾಡಲಾಗಿದೆ. ಸಾವಿರಾರು ಜನ ವಸತಿಗಾಗಿ, ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರಿ ಜಮೀನು ಲಭ್ಯವಿಲ್ಲದ ಕಡೆ ಖಾಸಗಿ ಜಮೀನು ಗುರುತಿಸಿ ಖರೀದಿ ಮಾಡಿ ನಿವೇಶನ ನೀಡಲಾಗುವುದು ಎಂದು ತಿಳಿಸಿದರು.
ಲಂಚವಿಲ್ಲದೇ ಕೆಲಸ: ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ವಿರೋಧಿಗಳು ಅಪಪ್ರಚಾರ ನಡೆಸಿದರು. ಆದರೆ, ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಯೋಜನೆಗಳು ಯಾವುದೇ ಲಂಚವಿಲ್ಲದೇ ನಿಮಗೆ ತಲುಪುತ್ತಿವೆ. ಚನ್ನಪಟ್ಟಣದಲ್ಲಿ ಕಂದಾಯ ಇಲಾಖೆಯಲ್ಲಿಯೇ ಆಗಲಿ ಇನ್ಯಾವುದೇ ಇಲಾಖೆಯಲ್ಲಿ ಆಗಲಿ ಹತ್ತು ರು. ಲಂಚವಿಲ್ಲದಂತೆ ನಿಮ್ಮ ಕೆಲಸ ಮಾಡಿಸಿಕೊಡುವುದು ನನ್ನ ಜವಾಬ್ದಾರಿ ಎಂದು ಘೋಷಿಸಿದರು.
ಯಾರೂ ಶಾಶ್ವತರಲ್ಲ: ದೇವರಾಜ ಅರಸು ನಿಗಮ ಸೇರಿದಂತೆ ಸಾಕಷ್ಟು ನಿಗಮಗಳಲ್ಲಿ ಸಾಲ ಸೌಲಭ್ಯ ನೀಡುವ ಕೆಲಸ ಮಾಡುಲಾಗುವುದು. ನಾವು ಕಾಂಗ್ರೆಸ್‌ಗೆ ಮತ ಹಾಕಲಿಲ್ಲ ಎಂದು ಅರ್ಜಿ ಸಲ್ಲಿಸಲು ಹಿಂಜರಿಯಬೇಡಿ. ಇಲ್ಲಿ ಯಾರು ಶಾಶ್ವತರಲ್ಲ. ಇಲ್ಲಿ ಅರ್ಜಿ ಸಲ್ಲಿಸಲು ಆಗದವರು ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಿ, ನಾನು ನಿಮ್ಮ ಸೇವೆ ಮಾಡಲು ಬಂದಿದ್ದೇನೆ. ರಾಜಕಾರಣ ಇರುತ್ತದೆ. ಅದನ್ನು ನಾನು ಬಿಡುವುದಿಲ್ಲ ನೀವು ಬಿಡುವುದಿಲ್ಲ. ನಾಲ್ಕು ಬಾರಿ ಈ ಭಾಗದ ಜನ ನಾನು ವಿಧಾನಸಭೆಗೆ ಆಯ್ಕೆಯಾಗಲು ಸಹಕರಿಸಿದ್ದಾರೆ. ಕ್ಷೇತ್ರ ಮರುವಿಂಗಡನೆಯ ನಂತರ ಕನಕಪುರ ಕ್ಷೇತ್ರಕ್ಕೆ ಹೋಗಬೇಕಾಯಿತು. ಹಿಂದಿನಿಂದಲೂ ನನಗೆ ಚನ್ನಪಟ್ಟಣ ಕ್ಷೇತ್ರದ ಮೇಲೆ ಅಪಾರವಾದ ವಿಶ್ವಾಸವಿದೆ ಎಂದರು.
ಪೊಟೋ೭ಸಿಪಿಟಿ೧: