ಗ್ಯಾರಂಟಿ ಆಧಾರದ ಮೇಲೆ ಮತ ಕೇಳ್ತಿದ್ದೇವೆ: ಎಚ್‌.ಕೆ ಪಾಟೀಲ್‌

KannadaprabhaNewsNetwork | Updated : Apr 21 2024, 02:19 AM IST

ಸಾರಾಂಶ

ನಾವು ನುಡಿದಂತೆ ನಡೆದು ಮತಕ್ಕಾಗಿ ಜನರ ಮನೆ ಬಾಗಿಲಿಗೆ ತೆರಳುತ್ತಿದ್ದೇವೆ. ದೇಶದ ಇತಿಹಾಸದಲ್ಲಿಯೇ ಪ್ರಥಮವಾಗಿ ಯಾರ ಶೋಷಣೆ ಇಲ್ಲದೆ ನೇರವಾಗಿ ಕುಟುಂಬದ ಸದಸ್ಯರಿಗೆ ಲಾಭ ತಲುಪಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್‌

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯ ಆಧಾರದ ಮೇಲೆ ಲೋಕಸಭೆ ಚುನಾವಣೆಗಾಗಿ ಮತಯಾಚನೆ ಮಾಡುತ್ತಿದ್ದೇವೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್‌.ಕೆ ಪಾಟೀಲ್‌ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಅನುಮಾನ ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ ವಾಸ್ತವಿಕತೆ ಗಮನಿಸದೆ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ 10 ತಿಂಗಳಲ್ಲಿ ಪಂಚ ಗ್ಯಾರಂಟಿಗಳ ಮೂಲಕ ಅದ್ಭುತ ಹಾಗೂ ಐತಿಹಾಸಿಕ ದಾಖಲೆ ಮಾಡಿದ್ದೇವೆ. ಪಂಚ ಗ್ಯಾರಂಟಿಗಳ ಮೂಲಕ ಕಾಂಗ್ರೆಸ್‌ 1.10 ಕೋಟಿ ಬಡ ಕುಟುಂಬಗಳನ್ನು ಮೇಲೆತ್ತುವ ಮೂಲಕ ಜಾಗತಿಕ ದಾಖಲೆ ಮಾಡಿದ್ದೇವೆ. ಶಕ್ತಿ ಯೋಜನೆಯಡಿ 163.52 ಕೋಟಿ ಜನ ಮಹಿಳೆಯರು ಲಾಭ ಪಡೆದಿದ್ದಾರೆ. 349 ಕೋಟಿ ರು. ತಗುಲಿದೆ. ಗೃಹ ಜ್ಯೋತಿ ಯೋಜನೆಯಡಿ 1.66 ಕೋಟಿ ಜನ ನೋಂದಣಿಯಾಗಿದ್ದರೆ 1.60 ಕೋಟಿ ಕುಟುಂಬಗಳು ಇದರ ಲಾಭ ಪಡೆಯುತ್ತಿವೆ ಇದಕ್ಕಾಗಿ 3644 ಕೋಟಿ ರು. ನೀಡಲಾಗಿದೆ ಎಂದು ವಿವರ ನೀಡಿದರು.

ಗೃಹ ಲಕ್ಷ್ಮಿ ಯೋಜನೆಯಡಿ 1.21 ಕೋಟಿ ಜನರು ಲಾಭ ಪಡೆಯುತಿದ್ದಾರೆ. ಇದಕ್ಕಾಗಿ 17500 ಕೋಟಿ ರು. ವೆಚ್ಚ ಮಾಡಲಾಗಿದೆ. ಅನ್ನ ಭಾಗ್ಯ ಯೋಜನೆಯಡಿ 4.40 ಕೋಟಿ ಜನರಿಗೆ ಲಾಭ ಪಡೆದರೆ ಸುಮಾರು 1.28 ಕೋಟಿ ಕುಟುಂಬಗಳು ಲಾಭ ಪಡೆದುಕೊಂಡಿವೆ. ಇದಕ್ಕಾಗಿ 44,411 ಕೋಟಿ ರು. ವೆಚ್ಚ ಮಾಡಲಾಗಿದೆ. ಯುವನಿಧಿ ಯೋಜನೆ ಜನವರಿ ತಿಂಗಳಿನಲ್ಲಿ ಆರಂಭಗೊಂಡಿದ್ದು 1.38 ಲಕ್ಷ ಯುವಕರು ನೋಂದಣಿಯಾಗಿದ್ದು ಇಲ್ಲಿವರೆಗೆ 16.9 ಕೋಟಿ ರು. ವಿಲೇವಾರಿ ಮಾಡಲಾಗಿದೆ ಎಂದರು.

ದೇಶದ ಇತಿಹಾಸದಲ್ಲಿಯೇ ಪ್ರಥಮವಾಗಿ ಯಾರ ಶೋಷಣೆ ಇಲ್ಲದೆ ನೇರವಾಗಿ ಕುಟುಂಬದ ಸದಸ್ಯರಿಗೆ ಲಾಭ ತಲುಪಿಸಲಾಗಿದೆ. ಶೋಷಣಮುಕ್ತ ಯೋಜನೆಯಾಗಿದ್ದು ಕ್ರಾಂತಿಕಾರಿ ಯೋಜನೆಗಳಾಗಿವೆ. ಈ ಯೋಜನೆಯಿಂದಲೇ ಕಳೆದ ಯುಗಾದಿ ಹಾಗೂ ರಂಜಾನ್‌ ಸಂತೆಗೆ ಮಹಿಳೆಯರದ್ದೇ ದರ್ಬಾರ್‌ ಇತ್ತು.

ಈ ಚುನಾವಣೆಯಲ್ಲಿ ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಬಡತನ ನಿವಾರಣೆಗಾಗಿ ಬದಲಾವಣೆ ತರುತ್ತೇವೆ ಎಂದು ರಾಹುಲ ಗಾಂಧಿ ಹೇಳಿದ್ದಾರೆ. ನಮ್ಮ ಕಾರ್ಯಕ್ರಮ ಸರಿಯಿಲ್ಲ ಎಂದ ಮೋದಿ ಅವರು ನಿವ್ಯಾಕೆ ಗ್ಯಾರಂಟಿ ಕಡೆಗೆ ಸರಿದಿದ್ದೀರಿ ಎಂದು ಪಾಟೀಲ್‌ ಪ್ರಶ್ನಿಸಿದರು.

2014ಕ್ಕೂ ಮುನ್ನ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು. ಹಾಕುತ್ತೇನೆ ಎಂದವರು 10 ವರ್ಷ ಕಳೆದರೂ ನಿಮ್ಮ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ. ಜನರಿಗೆ ಆಸೆ ತೋರಿಸಿದ್ದೀರಿ ಹೀಗಾಗಿ ನೀವು ವಚನ ಭ್ರಷ್ಟರಾಗಿದ್ದೀರಿ ಎಂದು ಎಚ್‌ಕೆ ಪಾಟೀಲ್‌ ಕಿಡಿ ಕಾರಿದರು.

ಈ ಭಾಗದ 12 ಸ್ಥಾನಗಳಲ್ಲಿ ಗೆಲವು: ಮುಂಬೈ-ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 12 ಲೋಕಸಭಾ ಕ್ಷೇತ್ರಗಳು ಬರುತ್ತವೆ ಅವು ಎಲ್ಲವು ನಾವು ಗೆಲ್ಲುತ್ತೇವೆ ರಾಜ್ಯದಲ್ಲಿ ಸುಮಾರು 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸುತ್ತೇವೆ ಎಂಬ ಭರವಸೆಯನ್ನು ಎಚ್‌ಕೆ ಪಾಟೀಲ್‌ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್‌ ಖಾನ್‌, ಶಾಸಕರಾದ ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ್‌, ಭೀಮರಾವ್‌ ಪಾಟೀಲ್‌, ಮಾಜಿ ಶಾಸಕ ಅಶೋಕ ಖೇಣಿ, ಜಿಲ್ಲಾಧ್ಯಕ್ಷ, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು.

Share this article