ನಮ್ಮ ಪಾಲಿನ ನೀರು ಪಡೆಯಲು ಯಾರ ಅಪ್ಪಣೆ ಬೇಕಿಲ್ಲ: ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ

KannadaprabhaNewsNetwork |  
Published : Jan 17, 2025, 12:49 AM ISTUpdated : Jan 17, 2025, 01:16 PM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪದಾಧಿಕಾರಿಗಳು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

 ಚಿತ್ರದುರ್ಗ : ಭದ್ರಾ ಜಲಾಶಯದಿಂದ ನಮ್ಮ ಪಾಲಿನ ನೀರು ಪಡೆಯಲು ಯಾರ ಅಪ್ಪಣೆಯೂ ಬೇಕಿಲ್ಲ. 20 ವರ್ಷಗಳ ಹಿಂದೆಯೇ ನೀರು ಹಂಚಿಕೆಯಾಗಿದ್ದು ಭಾರತೀಯ ರೈತ ಒಕ್ಕೂಟ ಈ ವಿಚಾರದಲ್ಲಿ ಪದೇ ಪದೇ ಖ್ಯಾತೆ ತೆಗೆಯುವುದು ಬೇಡ ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಲಹೆ ಮಾಡಿದೆ.

ಇಲ್ಲಿನ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಪದಾಧಿಕಾರಿಗಳು ರಾಜಕೀಯ ಹೇಳಿಕೆಗಳ ನೀಡಿ ರೈತರ ಭಾವನಾತ್ಮಕವಾಗಿ ಪ್ರಚೋದಿಸುವ ಕೆಲಸ ಯಾರೂ ಮಾಡಬಾರದೆಂದು ಸಮಿತಿ ವಿನಂತಿಸಿದರು.

ಭದ್ರಾ ಮತ್ತು ತುಂಗಾ ನದಿಯಲ್ಲಿ ಬಯಲು ಸೀಮೆ ಪ್ರದೇಶಗಳಿಗೆ 29.90 ಟಿಎಂಸಿ ನೀರು ಹಂಚಿಕೆಯಾಗಿ ಎರಡು ದಶಕಗಳು ಕಳೆದಿವೆ. 17.4 ಟಿಎಂಸಿ ತುಂಗಾ ನದಿ ಹಾಗೂ 12.5 ಟಿಎಂಸಿ ಯಷ್ಟು ಭದ್ರಾ ನದಿಯಲ್ಲಿ ಪಾಲು ನೀಡಲಾಗಿದೆ. ಭದ್ರಾ ಮೇಲ್ದಂಡೆ ಕಾಮಗಾರಿ ಶೇ.50 ರಷ್ಟು ಪೂರ್ಣಗೊಂಡಿದೆ. ಇಂತಹ ಸಂದರ್ಭದಲ್ಲಿ ಖ್ಯಾತೆ ತೆಗೆಯುವುದು ಬಯಲು ಸೀಮೆ ರೈತರ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಭದ್ರಾ ಮೇಲ್ದಂಡೆಯಡಿ ತುಂಗಾದಲ್ಲಿ ಅತಿಹೆಚ್ಚು ನೀರಿನ ಪಾಲು ಇದೆ. ಜಗಳೂರಿಗೂ ಯೋಜನೆಯಡಿ ನೀರು ಪೂರೈಕೆಯಾಗುತ್ತಿದ್ದು ದಾವಣಗೆರೆ ರೈತರು ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲೆ ರೈತರ ಹೋರಾಟಕ್ಕೆ ದನಿ ಗೂಡಿಸಬೇಕೇ ವಿನಹ ಅಪಸ್ವರ ಎತ್ತಬಾರದು ಎಂದರು.

ಭದ್ರಾ ಮೇಲ್ದಂಡೆ ಯೋಜನೆಯಡಿ ಲಭ್ಯವಾಗುವ ನೀರನ್ನ ಕೆರೆ ತುಂಬಿಸಲು, ಹಾಗೂ ಮೈ ಕ್ರೋ ಇರಿಗೇಷನ್ ಮೂಲಕ ರೈತರ ಜಮೀನುಗಳಿಗೆ ಹರಿಸಲಾಗುತ್ತಿದೆ. ಮೈಕ್ರೋ ಇರಿಗೇಶನ್ ಗೆ 21.90 ಟಿಎಂಸಿ, 367 ಕೆರೆ ತುಂಬಿಸಲು 6 ಟಿಎಂಸಿ, ವಾಣಿ ವಿಲಾಸ ಸಾಗರಕ್ಕೆ ಎರಡು ಟಿಎಂಸಿ ನೀರು ಮೀಸಲಿಡಲಾಗಿದೆ. ಯೋಜನೆಯಡಿ ನಾವೇನೂ ಭತ್ತ ಬೆಳೆಯಲು ಜಮೀನುಗಳಲ್ಲಿ ಮನಸೋ ಇಚ್ಚೆ ನೀರು ನಿಲುಗಡೆ ಮಾಡಿಕೊಳ್ಳುತ್ತಿಲ್ಲ. ಬದಲಾಗಿ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಳ ಮಾಡಿಕೊಳ್ಳುತ್ತಿದ್ದೇವೆ. ವಿವಿ ಸಾಗರ ಜಲಾಶಯದಿಂದ ಈಗಾಗಲೇ ಹೊಳಲ್ಕೆರೆ, ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ತಾಲೂಕಿನ ಸೈನ್ಸ್ ಸಿಟಿಗೂ ನೀರು ಒಯ್ಯಲಾಗಿದೆ.ನೀರು ರಾಷ್ಟ್ರೀಯ ಆಸ್ತಿ ಎಂಬುದ ದಾವಣಗೆರೆ ಮಂದಿ ಅರಿಯುವುದು ಒಳಿತು ಎಂದು ಸಲಹೆ ಮಾಡಿದೆ.

ಭದ್ರಾ ಮೇಲ್ದಂಡೆ ಯಡಿ ಜಗಳೂರು ತಾಲೂಕಿಗೂ ನೀರುಣಿಸಲಾಗುತ್ತಿದೆ. ಜಗಳೂರು ದಾವಣಗೆರೆ ಜಿಲ್ಲೆಯಲ್ಲಿದೆ ಎಂಬ ಸಂಗತಿ ಅಲ್ಲಿನ ಹೋರಾಟಗಾರರಿಗೆ ಅರಿವಿದ್ದರೆ ಒಳಿತು. . ಜಗಳೂರು ತಾಲೂಕಿನ ಕಾಮಗಾರಿ ಇದುವರೆಗೂ ಆರಂಭವಾಗಿಲ್ಲ. ಈ ಬಗ್ಗೆ ಭಾರತೀಯ ರೈತ ಒಕ್ಕೂಟದ ಪದಾಧಿಕಾರಿಗಳು ಹೋರಾಟ ನಡೆಸಿ ತಮ್ಮ ಜಿಲ್ಲೆಯ ಬರಡು ಪ್ರದೇಶವಾದ ಜಗಳೂರು ತಾಲೂಕಿಗೆ ನ್ಯಾಯ ಸಲ್ಲಿಸಬೇಕಾಗಿದೆ. ಈ ವಿಚಾರದಲ್ಲಿ ದುರ್ಗದ ಹೋರಾಟಗಾರರ ಜೊತೆ ದನಿಗೂಡಿಸಲಿ. ಭಾರತೀಯ ರೈತ ಒಕ್ಕೂಟದ ಪದಾಧಿಕಾರಿಗಳು ಚಿತ್ರದುರ್ಗ ಜಿಲ್ಲೆಯ ರೈತರು ಕೂಡಾ ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರಲಿದ್ದಾರೆ ಎಂಬ ವಾಸ್ತವ ಅರಿಯಲಿ. ಈ ಬಗ್ಗೆ ಒಕ್ಕೂಟದ ಪದಾಧಿಕಾರಿಗಳಿಗೆ ಅವರರವರ ಮನೆ ದೇವರು ಸನ್ಮಾರ್ಗ ದಯಪಾಲಿಸಲಿ ಎಂದು ಸಮಿತಿ ಪ್ರಾರ್ಥಿಸಿದೆ.

ನೀರಾವರಿ ಅನುಷ್ಟಾನ ಹೋರಾಟ ಸಮಿತಿಯ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಜೆ.ಯಾದವರೆಡ್ಡಿ, ಕೆ.ಸಿ.ಹೊರಕೇರಪ್ಪ, ಹಂಪಯ್ಯನ ಮಾಳಿಗೆ ಧನಂಜಯ, ಆರ್.ಬಿ.ನಿಜಲಿಂಗಪ್ಪ, ಕಬ್ಬಿಗೆರೆ ನಾಗರಾಜ್, ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಸಂಘದ ಮುಖಂಡರಾದ ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಚಂದ್ರಶೇಖರ ನಾಯ್ಕ, ಬಾಗೇನಹಾಳು ಕೊಟ್ರಬಸಪ್ಪ, ಹಳಿಯೂರು ಸಿದ್ದಪ್ಪ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''