ಕನ್ನಡಪ್ರಭ ವಾರ್ತೆ ಕೊರಟಗೆರೆ
ಅಕ್ಕಿರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಕಮರ್ ತಪ್ಸಮ್ ಅವರ ವರ್ಗಾವಣೆಯನ್ನ ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ ನಡೆಸಿ ಆಸ್ಪತ್ರೆಗೆ ಮುತ್ತಿಗೆ ಹಾಕಿ ತಾಲೂಕು ಆರೋಗ್ಯಾಧಿಕಾರಿ ವಿಜಯಕುಮಾರ್ ಅವರನ್ನು ತರಾಟೆ ತೆಗೆದುಕೊಂಡಿರುವ ಘಟನೆ ಗುರುವಾರ ನಡೆದಿದೆ.ಕೊರಟಗೆರೆ ತಾಲೂಕಿನ ಅಕ್ಕಿರಾಂಪುರ ಗ್ರಾಪಂ ಕೇಂದ್ರ ಸ್ಥಾನದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಮೂರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದ ಡಾ.ಕಮರ್ ತಪ್ಸಮ್ ಅವರು ಬರುವ ರೋಗಿಗಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡು ಉತ್ತಮ ಚಿಕಿತ್ಸೆ ನೀಡುವ ವೈದ್ಯೆಯನ್ನು ರಾಜಕೀಯ ದುರುದ್ದೇಶದಿಂದ ವರ್ಗಾವಣೆ ಮಾಡಿದ್ದಾರೆ. ಈ ಹಿಂದೆ ಡಾ.ಪ್ರಕಾಶ್‌ಗೌಡ ಎನ್ನುವ ವೈದ್ಯ ಇಲ್ಲಿನ ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ಸರಿಯಾಗಿ ಸ್ಪಂದಿಸದೆ ಕಾಲಹರಣ ಮಾಡಿಕೊಂಡು ಹೋಗುತ್ತಿದ್ದರು. ಅಂತಹ ಬೇಜವಾಬ್ದಾರಿ ವೈದ್ಯ ಇರುವವಗೂ ಆಸ್ಪತ್ರೆಗೆ ಯಾರು ಬರುತ್ತಿರಲಿಲ್ಲ. ಅದರೆ ಡಾ.ಕಮರ್ ತಪ್ಸಮ್ ಅವರು ಬಂದಮೇಲೆ ೧೫೦ ಕ್ಕೂ ಹೆಚ್ಚು ಒಪಿಡಿ ದಾಖಲಾಗುತ್ತಿದೆ. ಉತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯೆಯನ್ನು ತುಮಕೂರು ಡಿಎಚ್‌ಒ ಡಾ.ನಾಗೇಂದ್ರಪ್ಪ ಮತ್ತು ಕೊರಟಗೆರೆ ಟಿಎಚ್‌ಒ ಡಾ.ವಿಜಯಕುಮಾರ್ ವರ್ಗಾವಣೆ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.ಸ್ಥಳೀಯರಾದ ಕುಮಾರ್‌ಸ್ವಾಮಿ ಹಾಗೂ ಹೊಸಹಳ್ಳಿ ಗ್ರಾಮಸ್ಥರಾದ ಶಫೀವೂಲ್ಲಾ ಮಾತನಾಡಿ, ಡಾ. ಪ್ರಕಾಶಗೌಡ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬೈರೇನಹಳ್ಳಿ ಗ್ರಾಮದಲ್ಲಿ ಚುನಾವಣೆ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಲೆಯ ಮೇಲೆ ಕಲ್ಲು ಬಿದ್ದಾಗ ಅಕ್ಕಿರಾಂಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇರುತ್ತಾರೆ ಎಂದು ಬಂದಾಗ ಈ ಡಾ.ಪ್ರಕಾಶ್‌ಗೌಡ ೩ ಗಂಟೆಗೆ ಆಸ್ಪತ್ರೆಯಲ್ಲಿ ಇರಲಿಲ್ಲ. ಅಂತಹ ವೈದ್ಯರನ್ನು ಸಾರ್ವಜನಿಕರು ವರ್ಗಾವಣೆ ಮಾಡುವಂತೆ ಒತ್ತಾಯ ಮಾಡಿದಾಗ ಗೃಹ ಸಚಿವರು ಬೇರೆಡೆ ವರ್ಗಾವಣೆ ಮಾಡುವಂತೆ ಸೂಚಿಸಿದರು. ಆ ವೈದ್ಯರು ನಮಗೆ ಬೇಡ ನಮಗೆ ಡಾ.ಕಮರ್ ತಪ್ಸಮ್ ಅವರನ್ನ ನೇಮಕ ಮಾಡಿ ಎಂದು ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ಈಶಪ್ರಸಾದ್, ಸಿದ್ದಪ್ಪ, ನಾಗರಾಜು, ಹನುಮಂತರಾಯಪ್ಪ, ಆನಂದ್, ರವಿಕುಮಾರ್, ಚಾಂದ್ ಪಾಷ್, ಗುಲಾಬ್, ಹನುಮಂತರಾಯಪ್ಪ, ರಾಜಣ್ಣ, ಸತ್ಯನಾರಾಯಣಪ್ಪ, ರಮೇಶ್, ರಘು, ನಾಗೇಶ್, ಮಹಮದ್ ಖಾನ್, ಅನ್ಸಾರ್, ರೂಪ, ಜಯಮ್ಮ, ಶ್ರೀನಿವಾಸ್, ಫಕುದ್ದೀನ್, ರಂಗಣ್ಣ, ಅಲ್ತಾಫ್, ಹುಲಿರಾಮಯ್ಯ, ರವಿಕುಮಾರ್, ಸೇರಿದಂತೆ ಇತರರು ಇದ್ದರು.ಕೋಟ್ 1 ಅಕ್ಕಿರಾಂಪುರ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಕಮರ್ ತಪ್ಸಮ್ ಅವರನ್ನು ವಾರಕ್ಕೆ ಮೂರು ದಿನ ಮಲ್ಲೇಕಾವುನಲ್ಲಿ ಕೆಲಸ ಮಾಡಲು ನಿಯೋಜನೆ ಮಾಡಲಾಗಿದೆ. ಸ್ಥಳೀಯರ ಒತ್ತಾಯವನ್ನು ಡಿಎಚ್‌ಒ ಅವರ ಗಮನಕ್ಕೆ ತಂದು ಮುಂದಿನ ಕ್ರಮ ತಗೆದುಕೊಳ್ಳಲಾಗುವುದು - ವಿಜಯಕುಮಾರ್, ತಾಲೂಕು ಆರೋಗ್ಯಾಧಿಕಾರಿ.