ಅಮಿತ್‌ ಶಾ ಸುಳ್ಳು ಬಯಲು ಮಾಡ್ತೇವೆ: ದಿನೇಶ್‌ ಗುಂಡೂರಾವ್‌

KannadaprabhaNewsNetwork | Published : Apr 4, 2024 1:02 AM
11 | Kannada Prabha

ಕರ್ನಾಟಕದ ಬರಗಾಲಕ್ಕೆ ಕೇಂದ್ರದಿಂದ ಯಾಕೆ ದುಡ್ಡು ಕೊಟ್ಟಿಲ್ಲ ಅಂದರೆ, ನಾವು ಅವರಿಗೆ ಸರಿಯಾಗಿ ಮಾಹಿತಿ ಕೊಟ್ಟಿಲ್ಲ ಅಂತ ಅಮಿತ್‌ ಶಾ ಹೇಳಿದ್ದಾರೆ. ಇದಕ್ಕಿಂತ ಅಪ್ಪಟ ಸುಳ್ಳು ಯಾವುದೂ ಇಲ್ಲ.

ಕನ್ನಡಪ್ರಭ ವಾರ್ತೆ ಮಂಗಳೂರು

ಬಿಜೆಪಿಯವರು ಕರ್ನಾಟಕಕ್ಕೆ ಅನುದಾನ ಹಂಚಿಕೆಯಲ್ಲಿ ಮೋಸ ಮಾಡಿದ್ದಷ್ಟೇ ಅಲ್ಲ. ಅಮಿತ್‌ ಶಾ ಮಂಗಳವಾರ ರಾಜ್ಯಕ್ಕೆ ಆಗಮಿಸಿ ಸುಳ್ಳು ಹೇಳಿ ಹೋಗಿದ್ದಾರೆ. ಈ ಸುಳ್ಳನ್ನು ಬಯಲು ಮಾಡುವ ಕೆಲಸ ಚುನಾವಣೆಯಲ್ಲಿ ಆಗಲಿದೆ ಎಂದು ಆರೋಗ್ಯ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಬರಗಾಲಕ್ಕೆ ಕೇಂದ್ರದಿಂದ ಯಾಕೆ ದುಡ್ಡು ಕೊಟ್ಟಿಲ್ಲ ಅಂದರೆ, ನಾವು ಅವರಿಗೆ ಸರಿಯಾಗಿ ಮಾಹಿತಿ ಕೊಟ್ಟಿಲ್ಲ ಅಂತ ಅಮಿತ್‌ ಶಾ ಹೇಳಿದ್ದಾರೆ. ಇದಕ್ಕಿಂತ ಅಪ್ಪಟ ಸುಳ್ಳು ಯಾವುದೂ ಇಲ್ಲ. ಅನುದಾನ ಕೊಡದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹಾಕಿದ್ದೇವೆ. ಸುಪ್ರೀಂ ಮುಂದೆ ಅಮಿತ್‌ ಶಾ ಈ ಮಾತನ್ನು ಹೇಳಲಿ, ಆಗ ಒಪ್ಕೊಳ್ತೇನೆ ಎಂದರು.

ಬಿಜೆಪಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ, ರೈತರ ಆದಾಯ ದುಪ್ಪಟ್ಟು, ಡಾಲರ್‌ಗೆ 40 ರು. ಇಳಿಸುವ ಗ್ಯಾರಂಟಿ ನೀಡಿದ್ದರು, ಯಾವುದನ್ನಾದರೂ ಕಾರ್ಯಗತ ಮಾಡಿದ್ದಾರಾ? ಇವೆಲ್ಲ ಗ್ಯಾರಂಟಿಗಳಲ್ಲ, ಜುಮ್ಲಾ ಅಂತ ಅವರೇ ಹೇಳಿಕೊಂಡಿದ್ದಾರೆ. ಆದರೆ ಕಾಂಗ್ರೆಸ್‌ ಭರವಸೆ ನೀಡಿದಂಗೆ ಗ್ಯಾರಂಟಿ ಜಾರಿ ಮಾಡಿ ತೋರಿಸಿದೆ. ರಾಜ್ಯದ ಪ್ರತಿ ಕುಟುಂಬಕ್ಕೂ ಅನುಕೂಲ ಆಗುವಂಥ ಕೆಲಸ ಮಾಡಿದ್ದೇವೆ. ಆದ್ದರಿಂದ ಗ್ಯಾರಂಟಿ ಪ್ರಭಾವ ಈ ಚುನಾವಣೆಯಲ್ಲಿ ಖಂಡಿತವಾಗಿಯೂ ಇರಲಿದೆ ಎಂದು ಹೇಳಿದರು.

ಭಯೋತ್ಪಾದಕರಿಗೆ ಕಾಂಗ್ರೆಸ್‌ ಬೆಂಬಲ ಎಂಬ ಅಮಿತ್‌ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಣಿಪುರ ಘಟನೆ ನಡೆಯಿತು. ಕಾಶ್ಮೀರದಲ್ಲಿ ಈಗಲೂ ಭಯೋತ್ಪಾದನೆ ನಡೆಯುತ್ತಿದೆ. ಛತ್ತೀಸ್‌ಗಡದಲ್ಲಿ ನಕ್ಸಲರ ಹಾವಳಿ ಇದೆ. ಇದೆಲ್ಲ ಹೇಗೆ ನಡೆಯುತ್ತಿದೆ? ಆದರೆ ಭಯೋತ್ಪಾದನೆಗೆ ಯಾರೂ ಸಪೋರ್ಟ್‌ ಮಾಡಲು ಸಾಧ್ಯವಿಲ್ಲ ಎಂದು ಗುಂಡೂರಾವ್ ತಿರುಗೇಟು ನೀಡಿದರು.

ಜಾತಿ- ಧರ್ಮಗಳ ನಡುವಿನ ಚುನಾವಣೆ ಅಲ್ಲ: ಬಿಕೆ ಹರಿಪ್ರಸಾದ್‌

ಮಂಗಳೂರು: ಈ ಚುನಾವಣೆ ರಾಷ್ಟ್ರದ ಸಂವಿಧಾನ ಉಳಿಸುವುದು, ಪ್ರಜಾಪ್ರಭುತ್ವ ವ್ಯವಸ್ಥೆ, ಜಾತ್ಯತೀತ ತತ್ವಗಳನ್ನು ಕಾಪಾಡಲು ನಡೆಯುವುದೇ ಹೊರತು, ಯಾವುದೇ ಜಾತಿ- ಧರ್ಮಗಳ ಮಧ್ಯೆ ಅಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಬರುವಾಗ ಜಾತಿ, ಧರ್ಮಾಧಾರಿತ ಹೇಳಿಕೆಗಳು ಬರುತ್ತವೆ. ಆದರೆ ಇದು ಜಾತಿ- ಧರ್ಮಗಳ ಮಧ್ಯೆ ನಡೆಯುವ ಚುನಾವಣೆ ಅಲ್ಲ. ಸಂವಿಧಾನ ಉಳಿಸುವ ಸ್ವತಂತ್ರ್ಯ ಹೋರಾಟದ ಆಶಯಗಳನ್ನು ಉಳಿಸಿಕೊಳ್ಳುವ ಕೆಲಸ ಈ ಚುನಾವಣೆಯ ಮೂಲಕ ಆಗಬೇಕಾಗಿದೆ. ಅತ್ಯಂತ ದೊಡ್ಡ ಸಂಖ್ಯೆಯ ಸ್ವಾತಂತ್ರ್ಯ ಹೋರಾಟಗಾರರಿರುವ ದ.ಕ. ಜಿಲ್ಲೆಯಲ್ಲಿ ಸ್ವತಂತ್ರ ಭಾರತದ ಆಶಯಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಈ ಹೋರಾಟ ಎಂದರು.ದ.ಕ. ಹಿಂದುತ್ವದ ಭದ್ರಕೋಟೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿ.ಕೆ. ಹರಿಪ್ರಸಾದ್‌, ಹಿಂದುತ್ವದ ಭದ್ರಕೋಟೆ ಮಹಾರಾಷ್ಟ್ರದಲ್ಲೇ ಇಲ್ಲ. ಅಲ್ಲಿ ಸಾವರ್ಕರ್‌ ಸೃಷ್ಟಿಮಾಡಿದ್ದು, ಅಲ್ಲೇ ಭದ್ರವಾಗಿಲ್ಲ ಅಂದರೆ ಎಲ್ಲರನ್ನೂ ಖರೀದಿ ಮಾಡಿ ಹಿಂದುತ್ವದ ಕೋಟೆ ಮಾಡಲು ಆಗೋದಿಲ್ಲ ಎಂದರ್ಥ. ಕಾರಣಾಂತರದಿಂದ ದ.ಕ.ದಲ್ಲಿ ಬಿಜೆಪಿ ಗೆದ್ದಿದೆ. ಅದರರ್ಥ ಹಿಂದುತ್ವದ ಕೋಟೆ ಅಂತ ಹೇಳಲು ಆಗದು ಎಂದು ಹೇಳಿದರು.ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ದಕ್ಷಿಣ ಕನ್ನಡದಲ್ಲಿ ಹೊಸ ಅಧ್ಯಾಯ ಆರಂಭ ಮಾಡಬೇಕು ಅಂತ ವಕೀಲರಾಗಿರುವ ಪದ್ಮರಾಜ್‌ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಈ ಬಾರಿ ಹೊಸ ಮುಖಕ್ಕೆ ಜನತೆ ಅವಕಾಶ ಮಾಡಿಕೊಡಲಿದ್ದಾರೆ ಎಂದರು.