ಕನ್ನಡಪ್ರಭ ವಾರ್ತೆ ತುಮಕೂರು
ಕನ್ನಡ ಭಾಷೆಗಳನ್ನಾಡುವ ಜನರು ಒಂದೆಡೆ ತರಬೇಕೆಂಬ ಉದ್ದೇಶದಿಂದ ಆಲೂರು ವೆಂಕಟರಾವ್, ಹುುಲುಗೋಳು ನಾರಾಯಣರಾಯರ ನೇತೃತ್ವದಲ್ಲಿ ನಡೆದ ಕರ್ನಾಟಕ ಏಕೀಕರಣದ ಫಲವಾಗಿ ಇಂದು ನಾವೆಲ್ಲರೂ ಒಂದು ರಾಜ್ಯ, ಒಂದು ಭಾಷೆಯ ಅಡಿಯಲ್ಲಿ ಕೆಲಸ ಮಾಡುತಿದ್ದೇವೆ. ಇದಕ್ಕೆ ಕಾರಣರಾದವರು ಕನ್ನಡ ಹೋರಾಟಗಾರರು ಎಂಬುದನ್ನು ನಾವ್ಯಾರು ಮರೆಯುವಂತಿಲ್ಲ ಎಂದು ಕರುನಾಡ ವಿಜಯಸೇನೆಯ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ ತಿಳಿಸಿದ್ದಾರೆ.ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಕರುನಾಡ ವಿಜಯಸೇನೆಯ ಜಿಲ್ಲಾ ಪದಾಧಿಕಾರಿಗಳ ಪ್ರದಗ್ರಹಣ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಿಗರೆಲ್ಲರೂ ಒಗ್ಗೂಡಲು ಸಹಕಾರಿಯಾದ ಕರ್ನಾಟಕದ ಏಕೀಕರಣ ಹೋರಾಟದ ಗೀತೆಯಾಗಿದ್ದು, ರಸಋಷಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ ಗೀತೆ ಅಂದು, ಇಂದು, ಮುಂದು ಕೂಡ ಕನ್ನಡ ಪರ ಹೋರಾಟಗಳಲ್ಲಿ ಕನ್ನಡಿಗರ ಮನದಲ್ಲಿ ಅನುರಣಿಸುತ್ತಿರುತ್ತದೆ. ಅಂತಹ ಶಕ್ತಿ ಈ ಗೀತೆಗೆ ಇದೆ. ನಮ್ಮಲಿರುವ ಒಡೆಕು, ಅಸಹಾಕತೆಯನ್ನು ತೋರಿಸುತ್ತಲೇ ನಮ್ಮೆಲ್ಲರ ಒಗ್ಗಟ್ಟಿಗೆ ಕಾರಣವಾಗಿದೆ ಎಂದರು.
ಭಾರತಕ್ಕೆ ಸ್ವಾತಂತ್ರ ಬಂದು 75 ವರ್ಷಗಳ ನಂತರ ಕನ್ನಡ ನಾಡು ಉದಯವಾದ ನಂತರವೂ ಕನ್ನಡ ಭಾಷೆ, ನೆಲ, ಜಲ ಭಾಷೆಯ ಬಗ್ಗೆ ಹೋರಾಡಲು ಕನ್ನಡಪರ ಸಂಘಟನೆಗಳ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಆದರೆ ಎಲ್ಲಿಯವರಗೆ ಕನ್ನಡಿಗರಲ್ಲಿ ಭಾಷೆ, ನೆಲ, ಜಲದ ಬಗ್ಗೆ ಅಭಿಮಾನ ಮೂಡುವುದಿಲ್ಲವೋ, ಅಲ್ಲಿಯವರೆಗೂ ಇಂತಹ ಕನ್ನಡಪರ ಸಂಘಟನೆಗಳ ಅಗತ್ಯವಿದೆ. ಸಂವೃದ್ಧವಾಗಿದ್ದ ಕನ್ನಡ ನಾಡಿಗೆ ಕೆಲಸ ಅರಸಿ ಬಂದ ಬಿಹಾರಿಗಳು, ಉತ್ತರ ಪ್ರದೇಶದ ಜನರು ಇಂದು ಇಂಚಿಂಚಾಗಿಯೇ ನಮ್ಮ ವ್ಯಾಪಾರ, ವ್ಯವಹಾರವನ್ನು ಕಿತ್ತುಕೊಂಡು, ನಮ್ಮ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ. ನಮ್ಮ ನೆಲದಲ್ಲಿಯೇ ಕನ್ನಡದಲ್ಲಿ ನಾಮಫಲಕ ಅಳವಡಿಸಲು ಇವರ ಅನುಮತಿ ಕೇಳಬೇಕಾದ ಸ್ಥಿತಿ ಇದೆ. ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ, ಮುಂದೊಂದು ದಿನ ಕನ್ನಡಿಗರು ನಮ್ಮ ನೆಲಕ್ಕಾಗಿ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.ಕರುನಾಡ ವಿಜಯಸೇನೆಯ ಅತ್ಯಂತ ಶಿಸ್ತು ಬದ್ದ ಮತ್ತು ತನ್ನದೇ ಆದ ತತ್ವ ಸಿದ್ಧಾಂತಗಳನ್ನು ಹೊಂದಿರುವ ಸಂಘಟನೆ, ಜಾತಿ, ಮತ, ಧರ್ಮದ ಹಂಗಿಲ್ಲ. ಇಲ್ಲಿ ಎಲ್ಲರೂ ಸಮಾನವಾಗಿ ಬದುಕಲು ಅವಕಾಶವಿದೆ. ಕುವೆಂಪು ಮಾತಿನಂತೆ ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವುದೇ ನಮ್ಮ ಗುರಿ. ಕನ್ನಡಪರ ಸಂಘಟನೆ ಎಂದರೆ ದುಡ್ಡು ಮಾಡಬಹುದು ಎಂಬ ಭ್ರಮೆಯಿಂದ ಕಾರ್ಯಕರ್ತರು, ಪದಾಧಿಕಾರಿಗಳು ಹೊರಬರಬೇಕು. ಎಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತದೆಯೋ ಅಲ್ಲಿ ನಮ್ಮ ಸಂಘಟನೆ ಇದ್ದೇ ಇರುತ್ತದೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಸಂಘಟನೆಗೆ ನಿಷ್ಠರಾಗಿ ಕಾರ್ಯನಿರ್ವಹಿಸುವಂತೆ ನೂತನ ಪದಾಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ವೇದಿಕೆಯಲ್ಲಿ ಕರುನಾಡ ವಿಜಯಸೇನೆ ಮಹಿಳಾ ಘಟಕದ ಅಧ್ಯಕ್ಷೆ ಯಾಸ್ಮೀನ್ ತಾಜ್, ಜಿಲ್ಲಾ ಉಪಾಧ್ಯಕ್ಷ ತನ್ವೀರ್ ಅಹಮದ್, ಪ್ರಧಾನ ಕಾರ್ಯದರ್ಶಿ ಗಂಗಾಧರ್, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಪವನ್ ಯಾದವ್, ಸಂಘಟನಾ ಕಾರ್ಯದರ್ಶಿಗಳಾದ ಜಬಿವುಲ್ಲಾ, ರಾಜೇಂದ್ರ,ಗಿರೀಶ್‌ಗೌಡ, ಕಾರ್ಯದರ್ಶಿ ಹೃದಯ ಶಿವ ಮತ್ತಿತರರು ಉಪಸ್ಥಿತರಿದ್ದರು.ಇದೇ ವೇಳೆ ಕರುನಾಡ ವಿಜಯಸೇನೆಯ ಜಿಲ್ಲಾ ಉಪಾಧ್ಯಕ್ಷರಾಗಿ ಆದೇಶ್ ಸಿ.ಎಂ., ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಎಂ.ಡಿ. ಮನ್ಸೂರ್ ಆಲಿ, ನಗರಾಧ್ಯಕ್ಷರಾಗಿ ಯಧುನಂದನ್, ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ನಾಸೀರ್ ಅಹಮದ್, ನಗರ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಕಿರಣ್ ಕೀರ್ತಿ, ಕಾನೂನು ಘಟಕದ ಅಧ್ಯಕ್ಷರಾಗಿ ಕಿರಣ್‌ಕುಮಾರ್, ತುಮಕೂರು ಕಸಭಾ ಹೋಬಳಿ ಅಧ್ಯಕ್ಷರಾಗಿ ಮೌಲಾನ ಪಾಷ ಅವರು ಇಂದು ಪದಗ್ರಹಣ ನಡೆಸಿದರು.