ಕನ್ನಡಪ್ರಭ ವಾರ್ತೆ, ಕೊಪ್ಪ
ವಿಧಾನಸಭಾ ಚುನಾವಣೆಗೂ ಮೊದಲು ಬೆಲೆ ಏರಿಕೆಯಿಂದ ತತ್ತರಿಸಿದ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ವಾಗುವಂತಹ ಕಾರ್ಯಕ್ರಮ ನೀಡಬೇಕೆಂಬ ಸದುದ್ದೇಶದಿಂದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಗೊಳಿಸಿದೆ ಎಂದು ಕೆಆರ್‌ಇಡಿಬಿ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ. ರಾಜೇಗೌಡ ಹೇಳಿದರು. ಪಟ್ಟಣದ ಪುರಭವನ ಆವರಣದಲ್ಲಿ ಭಾನುವಾರ ತಾಲೂಕು ಆಡಳಿತ ಏರ್ಪಡಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಚುನಾವಣೆಗೂ ಮೊದಲು ನೀಡಿದ ಭರವಸೆಯಂತೆ ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿಯನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ಈಡೇರಿಸಿದ್ದೇವೆ ಎಂದರು.ತಾಲೂಕಿನಲ್ಲಿ 26,162 ವಿದ್ಯುತ್ ಸಂಪರ್ಕ ಪಡೆದ ಮನೆಗಳಿದ್ದು 22,944 ಮನೆಗಳನ್ನು ನೋಂದಾಯಿಸಿ ಯೋಜನೆ ಲಾಭ ಪಡೆದುಕೊಳ್ಳುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 18.071 ರೇಷನ್ ಕಾರ್ಡುಗಳಿದ್ದು 16,539 ಫಲಾನುಭವಿಗಳು ನೋಂದಾಯಿಸಿದ್ದು,15,500 ಮಂದಿ ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ. ತಾಂತ್ರಿಕ ಕಾರಣದಿಂದಾಗಿ ಯೋಜನೆ ಯಡಿ ಇನ್ನೂ ಕೆಲ ಕುಟುಂಬದ ಗೃಹಿಣಿಯರಿಗೆ ಸೌಲಭ್ಯ ದೊರಕುತ್ತಿಲ್ಲ. ತಾಂತ್ರಿಕ ದೋಷ ಸರಿಪಡಿಸಲೆಂದೇ ಸಮಾವೇಶದ ಆವರಣದಲ್ಲಿ 3 ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲಾಗಿದೆ. ಫಲಾನುಭವಿಗಳು ಅಗತ್ಯ ದಾಖಲೆ ಗಳೊಂದಿಗೆ ಅಧಿಕಾರಿಗಳನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ ಕುಟುಂಬದಲ್ಲಿ 5 ಜನ ಸದಸ್ಯರಿದ್ದರೆ 25 ಕೆಜಿ ಅಕ್ಕಿ ಒಬ್ಬರಿಗೆ 170 ರಂತೆ ಒಟ್ಟು 850 ರು. ಪಾವತಿಯಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ಪ್ರತೀ ಕುಟುಂಬದ ಯಜಮಾನಿಗೆ 2000, ಗೃಹಜ್ಯೋತಿ ಯಡಿ ಪ್ರತೀ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್, ಯುವನಿಧಿಯಡಿ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3000 ಸಾವಿರ, ಡಿಪ್ಲೋಮ ಪದವೀಧರರಿಗೆ ಮಾಸಿಕ 1500 ನೀಡಲಾಗುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ರಾಜ್ಯ ಜನಪ್ರಿಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನಮ್ಮ ಸರ್ಕಾರ ಕಳೆದ ಹಲವಾರು ವರ್ಷಗಳಿಂದ ಬೆಲೆ ಏರಿಕೆ ಪರಿಣಾಮ ಆರ್ಥಿಕವಾಗಿ ಹಿಂದುಳಿದ ಜನರಿಗೆ ಆರ್ಥಿಕ ಚೈತನ್ಯ ನೀಡಲು ಈ ಮಹಾತ್ಮಾಕಾಂಕ್ಷಿ 5 ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಯೋಜನೆಗಳು ಕುಂಠಿತಗೊಂಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸು ತ್ತಿರುವುದು ಸತ್ಯಕ್ಕೆ ದೂರವಾಗಿದೆ. ತುರ್ತು ಮತ್ತು ಅಗತ್ಯ ಕಾಮಗಾರಿಗಳಿಗೆ ಆದ್ಯತೆ ಮೇರೆಗೆ ಅನುದಾನ ಬಿಡುಗಡೆ ಯಾಗುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಕೇಂದ್ರ ಸರ್ಕಾರ ರಾಜ್ಯದ ತೆರಿಗೆ ಪಾಲನ್ನು ನೀಡದೆ ಸತಾಯಿಸುತ್ತಿದೆ. ಸಕಾಲಕ್ಕೆ ಅದನ್ನು ನೀಡಿದ್ದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ನಡೆಸಲು ಅನುಕೂಲವಾಗುತ್ತದೆ ಎಂದರು.ಹೊನ್ನಳ್ಳಿ ಕಾಲೇಜಿನ ಪ್ರಾಧ್ಯಾಪಕ ಧನಂಜಯ್ ಗ್ಯಾರಂಟಿಗಳ ಕುರಿತು ಉಪನ್ಯಾಸ ನೀಡಿದರು. ತಹಸೀಲ್ದಾರ್ ಮಂಜುಳಾ ಬಿ. ಹೆಗಡಾಳ, ತಾಪಂ ಈಒ ನವೀನ್ ಕುಮಾರ್, ಪಪಂ ಆಡಳಿತಾಧಿಕಾರಿ ಸುಜಾತ ಮುಂತಾದವರು ಗ್ಯಾರಂಟಿಗಳ ಬಗ್ಗೆ ಮಾನತಾಡಿದರು. ಶಾಸಕರೊಂದಿಗೆ ಯೋಜನೆಗಳ ಕೆಲವು ಫಲಾನುಭವಿಗಳು ವೇದಿಕೆಗೆ ತೆರಳಿ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣೆ ಶಿಬಿರ ಹಾಗೂ ಆಯುಷ್ಮಾನ ನೊಂದಣಿ ಶಿಬಿರ ಆಯೋಜಿಸಲಾಗಿತ್ತು. ಸುಮಾರು 100ಕ್ಕೂ ಹೆಚ್ಚು ಜನ ತಪಾಸಣೆ ಮಾಡಿಸಿಕೊಂದು 65 ಜನರಿಗೆ ಆಯುಷ್ಮಾನ ಆರೋಗ್ಯ ಕಾರ್ಡ್ ಮಾಡಿಸಲಾಯಿತು.ಪಪಂ ಮುಖ್ಯಾಧಿಕಾರಿ ಚಂದ್ರಕಾಂತ್, ಶಿಕ್ಷಣಾಧಿಕಾರಿ ಜ್ಯೋತಿ, ಪಪಂ ಸದಸ್ಯರಾದ ಮೈತ್ರಾ ಗಣೇಶ್, ವಿಜಯ್ ಕುಮಾರ್, ಆರೋಗ್ಯ ಮಿತ್ರ ಸುರೇಶ್ ಕಟಾರ್, ಶಿಕ್ಷಣ ಇಲಾಖೆ ಸುಚಿತ್ಚಂದ್ರ ಸೇರಿದಂತೆ ತಾಲೂಕಿನ ವಿವಿಧ ಅಧಿಕಾರಿಗಳು ತಾಲೂಕಿನ ವಿವಿಧ ಪಂಚಾಯಿತಿ ಅಧ್ಯಕ್ಷರು, ವಿವಿಧ ಇಲಾಖೆಗಳ ಅಧ್ಯಕ್ಷರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮಲ್ಲಿದ್ದರು.