ಅಭಿವೃದ್ಧಿ ವಿಚಾರದಲ್ಲಿ ಎಂದೂ ದ್ವೇಷ ರಾಜಕಾರಣ ಮಾಡಿಲ್ಲ

KannadaprabhaNewsNetwork | Published : May 19, 2025 12:07 AM
Follow Us

ಸಾರಾಂಶ

ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಕನಸು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಾನಾಗಲಿ, ನನ್ನ ಸಹೋದರ ಚನ್ನರಾಜ ಹಟ್ಟಿಹೊಳಿ ಆಗಲಿ ಅಭಿವೃದ್ಧಿ ವಿಚಾರದಲ್ಲಿ ಎಂದೂ ದ್ವೇಷ ರಾಜಕಾರಣ ಮಾಡಿಲ್ಲ. ಮಾಡುವುದೂ ಇಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಕನಸು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬಾಳೇಕುಂದ್ರಿ ಬಿ.ಕೆ ಗ್ರಾಮದ ಶ್ರೀ ರಾಮೇಶ್ವರ ದೇವಸ್ಥಾನದ ನೂತನ ಕಟ್ಟಡ ಕಾಮಗಾರಿಗೆ ಭಾನುವಾರ ಗ್ರಾಮಸ್ಥರ ಸಮ್ಮುಖದಲ್ಲಿ‌ ಭೂಮಿ ಪೂಜೆ‌ ನೆರವೇರಿಸಿ ಅವರು ಮಾತನಾಡಿದರು. ಅಧಿಕಾರವಿದ್ದಾಗ ಜನ ಸಾಮಾನ್ಯರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು. ನನಗೆ ತೊಂದರೆ ಕೊಟ್ಟ ಜನರಿಗೆ ತೊಂದರೆ ಕೊಡುವಂಥ ವಿಕೃತ ಮನಸ್ಸು ನನ್ನದಲ್ಲ ಎಂದರು.‌

ನನಗೆ ಒಂದು ಅವಕಾಶ ಕೊಡಿ, ನಿಮ್ಮ ಮನೆ ಮಗಳಾಗಿ ಈ ಊರಿನ ಸೇವೆ ಮಾಡುತ್ತೇನೆ ಎಂದು ಚುನಾವಣೆ ವೇಳೆ ವಚನ ಕೊಟ್ಟಿದ್ದೆ. ಇವತ್ತು ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇನೆ. ಈ ಊರಿನ ಸಮಗ್ರ ಅಭಿವೃದ್ಧಿ ಹಾಗೂ ಸುಧಾರಣೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಚುನಾವಣೆ ವೇಳೆ ಮಾತ್ರ ರಾಜಕಾರಣ, ಚುನಾವಣೆ ಬಳಿಕ ಅಭಿವೃದ್ಧಿಯೇ ಮೂಲ ಮಂತ್ರ, ಅಧಿಕಾರ ಎಂದಿಗೂ ಶಾಶ್ವತ ಅಲ್ಲ.‌ ಜನರಿಗಾಗಿ ನಾವು ಮಾಡುವ ಕೆಲಸ ಕಾರ್ಯಗಳೇ ‌ಎಂದಿಗೂ ಶಾಶ್ವತ ಎಂದು ಸಚಿವರು ಹೇಳಿದರು.

ಜನರು ಆಶೀರ್ವಾದ ಮಾಡಿದ ಫಲವಾಗಿ ಇಂದು ಸಚಿವೆಯಾಗಿರುವೆ. ಕ್ಷೇತ್ರದ ವ್ಯಾಪ್ತಿಗೆ ಬರುವ 114 ಹಳ್ಳಿಗಳಲ್ಲಿ 140 ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದ್ದೇನೆ. ಮಾತಿಗಿಂತ ನನಗೆ ಕೆಲಸಗಳು ಮುಖ್ಯ. ಗುಡಿ ಕಟ್ಟಿದರಷ್ಟೇ ಅಭಿವೃದ್ಧಿಯಲ್ಲ. ನಾಳೆ ನಮ್ಮ ಮಕ್ಕಳಿಗೆ ಆ ಸಂಸ್ಕೃತಿ ತಿಳಿಯಬೇಕೆಂದರೆ ಗುಡಿಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು‌ ಹೇಳಿದರು.

ನಮ್ಮ ಮನೆತನ ದಾನ ಧರ್ಮ, ದೇಶದ ಸಂಸ್ಕೃತಿಯಲ್ಲಿ ವಿಶ್ವಾಸ ಇಟ್ಟುಕೊಂಡಿರುವ ಮನೆತನ. ನಮ್ಮ ತಂದೆ, ತಾಯಿ, ನಮ್ಮ ತಾತ ಅದೇ ಸಂಸ್ಕೃತಿಯನ್ನು ನಮಗೆ ಕಲಿಸಿಕೊಟ್ಟಿದ್ದಾರೆ. ಅದೇ ಹಾದಿಯಲ್ಲಿ ನಾವು ಸಾಗುತಿದ್ದೇವೆ ಎಂದರು.

₹1.25 ಕೋಟಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ:

ಸುಮಾರು ₹1.25 ಕೋಟಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣಗೊಳ್ಳಲಿದ್ದು, ಸ್ಥಳೀಯರ ಸಲಹೆ ಸೂಚನೆ ಪಡೆದು, ಸಾರ್ವಜನಿಕರಿಗೆ ಯಾವುದೇ ತೊಂದರೆಗಳಾಗದಂತೆ ನಿಗಾವಹಿಸಿ, ದೇವಸ್ಥಾನ ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ಸಚಿವರು ಸೂಚಿಸಿದರು. ‌

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಶಂಕರಗೌಡ ಪಾಟೀಲ, ಹೊನಗೌಡ ಪಾಟೀಲ, ಸುರೇಶ ಕಾಳೋಜಿ, ಉಮೇಶರಾವ್ ಜಾಧವ್, ವಿನಯಗೌಡ ಪಾಟೀಲ, ನಾಗೇಶ ದೇಸಾಯಿ, ಪ್ರವೀಣ ಪಾಟೀಲ, ರಾಮನಗೌಡ ಪಾಟೀಲ, ಚರಂತಯ್ಯ ಹಿರೇಮಠ, ರುದ್ರಗೌಡ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗುಲಾಬಿ ಕೋಲಕಾರ ಹಾಗೂ ಸರ್ವ ಸದಸ್ಯರು, ಗ್ರಾಮದ ಅನೇಕರು ಉಪಸ್ಥಿತರಿದ್ದರು.