ಪಾಕ್‌ ಪರ ಘೋಷಣೆ ನಾವು ಸಮರ್ಥಿಸಿಲ್ಲ: ಸಚಿವ ರಾಮಲಿಂಗಾರೆಡ್ಡಿ

KannadaprabhaNewsNetwork | Published : Mar 7, 2024 1:45 AM

ಸಾರಾಂಶ

ಬಿಜೆಪಿ ಪೂರ್ವಜರು ಅಂದರೆ ಆರ್‌ಎಸ್ಎಸ್, ವಿಶ್ವಹಿಂದೂ ಪರಿಷತ್. ಅವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲ್ಲಿಲ್ಲ. ಸ್ವಾತಂತ್ರ್ಯದ ಹಕ್ಕು ದೇಶದ ಜನರಿಗೆ ಕೊಟ್ಟಿದ್ದೇ ನಮ್ಮ ಕಾಂಗ್ರೆಸ್ ಪಕ್ಷ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಪಾಕ್ ಪರ ಘೋಷಣೆ ಕೂಗಿದವರನ್ನು ನಾವು ಸಮರ್ಥಿಸಿಕೊಂಡಿಲ್ಲ. ಅದನ್ನು ಯಾರೂ ಒಪ್ಪುವಂತಿಲ್ಲ. ನಾವೆಲ್ಲರೂ ಖಂಡಿಸಿದ್ದೇವೆ. ಹಾಗೆ ಕೂಗಿದವರ ಮೇಲೆ ಕೇಸ್‌ ಹಾಕಿ ಜೈಲಿಗೆ ಕಳುಹಿಸಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು,.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ಮಂಡ್ಯದಲ್ಲಿ ಪ್ರತಿಭಟನೆ ನಡೆಸುವಾಗ ಬಿಜೆಪಿಯ ಕಾರ್ಯಕರ್ತನೇ ಪಾಕ್‌ ಪರ ಘೋಷಣೆ ಕೂಗಿದ್ದ. ಅವನ ಬಾಯಿಯನ್ನು ಇನ್ನೊಬ್ಬ ಮುಚ್ಚಿದರೂ ಆತ ಕೂಗುತ್ತಲೇ ಇದ್ದ. ಆಗ ಬಿಜೆಪಿ ನಾಯಕರೇಕೆ ಸುಮ್ಮನಿದ್ದರು? ನಾವು ಅವತ್ತೂ ಖಂಡಿಸಿದ್ದೇವೆ. ಇವತ್ತು ಖಂಡಿಸಿದ್ದೇವೆ. ಮುಂದೇನೂ ಖಂಡಿಸುತ್ತೇವೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೇ ನಾವು (ಕಾಂಗ್ರೆಸ್‌) ಎಂದರು.

ಬಿಜೆಪಿ ಪೂರ್ವಜರು ಅಂದರೆ ಆರ್‌ಎಸ್ಎಸ್, ವಿಶ್ವಹಿಂದೂ ಪರಿಷತ್. ಅವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲ್ಲಿಲ್ಲ. ಸ್ವಾತಂತ್ರ್ಯದ ಹಕ್ಕು ದೇಶದ ಜನರಿಗೆ ಕೊಟ್ಟಿದ್ದೇ ನಮ್ಮ ಕಾಂಗ್ರೆಸ್ ಪಕ್ಷ. ನಮಗಿದ್ದಷ್ಟು ದೇಶಾಭಿಮಾನ ಅವರಗಿಲ್ಲ. ಅವರು ದ್ವೇಷ ಪ್ರೇಮಿಗಳು, ನಾವು ದೇಶ ಪ್ರೇಮಿಗಳು ಎಂದರು.

ಎಫ್ಎಸ್ಎಲ್ ವರದಿಯನ್ನು ಅಧಿಕೃತ ಅಂತ ಗೃಹಮಂತ್ರಿಗಳು ಹೇಳಿದ್ದಾರೆ. ಕ್ರಮ ಆಗಿದೆ, ಮುಂದಿನದ್ದನ್ನು ಕೋರ್ಟ್ ನೋಡಿಕೊಳ್ಳುತ್ತದೆ ಎಂದರು.

ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತನೇ ಕೂಗಿದಾಗ ಏನು ಮಾಡುತ್ತಿದ್ದರು? ಯಾಕೆ ಖಂಡಿಸಲಿಲ್ಲ? ಪ್ರತಾಪ್ ಸಿಂಹ ಅವರೇ ಪಾರ್ಲಿಮೆಂಟ್‌ಗೆ ಪಾಸ್ ಕೊಟ್ಟಿದ್ದರು. ಅವರು ಅಲ್ಲಿ ಹೋಗಿ ಗ್ಯಾಸ್ ಬಾಂಬ್ ಹಾಕಿದರೂ, ಅದನ್ನು ಖಂಡಿಸಿಲ್ಲ. ಪ್ರತಾಪ್ ಸಿಂಹ ರಾಜೀನಾಮೆಯನ್ನೂ ಕೇಳಲಿಲ್ಲ ಎಂದರು.

ನಾವು ಬಂದಾಗ ಜನ ಸೇರುತ್ತಾರೆ. ಅವರಲ್ಲಿ ಯಾರೋ ಒಬ್ಬರು ಕೂಗಿದರೆ ನಾವು ಕೂಗಿದಂತೆ ಆಗುತ್ತದೆಯೇ? ಎಂದು ಪ್ರಶ್ನಿಸಿದರು.

ಲಕ್ಷ್ಮೀ ಹೆಬ್ಬಾಳ್ಕರಗೆ ಗೊತ್ತಿರಲಿಲ್ಲ ಅಂತ ಅನಿಸುತ್ತೆ. ಯಾರೋ ಮಾಹಿತಿ ಕೊಟ್ಟಿರುತ್ತಾರೆ. ಅದಕ್ಕೆ ಆ ರೀತಿ ಕೂಗಿಲ್ಲ ಎಂದು ಹೇಳಿರಬಹುದು. ಒಬ್ಬರಿಗೆ ಒಂದೊಂದು ತರಹ ಮಾಹಿತಿ ಹೋಗಿರುತ್ತದೆ ಎಂದರು.

Share this article