ಯೋಗೇಶ್ವರ್ ನಂಬಿ ನಾವು ಗೆದ್ದು ಬಂದಿಲ್ಲ: ಶಾಸಕಿ ಶಾರದಾ ಪೂರ್ಯನಾಯ್ಕ್

KannadaprabhaNewsNetwork | Published : Nov 27, 2024 1:03 AM

ಸಾರಾಂಶ

ಶಿವಮೊಗ್ಗ: ನಾವು ನಿಮ್ಮನ್ನು ನಂಬಿ ನಮ್ಮ ಕ್ಷೇತ್ರದಲ್ಲಿ ಗೆದ್ದು ಬಂದಿಲ್ಲ ಎಂದು ಜೆಡಿಎಸ್ ಶಾಸಕಿ ಶಾರದಾ ಪೂರ್ಯನಾಯ್ಕ್ ಅವರು ಶಾಸಕ ಸಿ.ಪಿ.ಯೋಗೇಶ್ವರ್ ಅವರಿಗೆ ತಿರುಗೇಟು ನೀಡಿದರು.

ಶಿವಮೊಗ್ಗ: ನಾವು ನಿಮ್ಮನ್ನು ನಂಬಿ ನಮ್ಮ ಕ್ಷೇತ್ರದಲ್ಲಿ ಗೆದ್ದು ಬಂದಿಲ್ಲ ಎಂದು ಜೆಡಿಎಸ್ ಶಾಸಕಿ ಶಾರದಾ ಪೂರ್ಯನಾಯ್ಕ್ ಅವರು ಶಾಸಕ ಸಿ.ಪಿ.ಯೋಗೇಶ್ವರ್ ಅವರಿಗೆ ತಿರುಗೇಟು ನೀಡಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಹೋಗಲು ಸಿ.ಪಿ.ಯೋಗೇಶ್ವರ್‌ ಅವರು ಯಾರು ? ಜೆಡಿಎಸ್ ಆಪರೇಷನ್ ಮಾಡಲು ಸಾಧ್ಯವಿಲ್ಲ. ಯೋಗೇಶ್ವರ್ ಗೆದ್ದ ಅಹಂನಲ್ಲಿ ಏನು ಬೇಕಾದರೂ ಹೇಳುವುದು. ಅವರ ಘನತೆಗೆ ಅಲ್ಲ. ಈ ರೀತಿ ಹೇಳಿಕೆಗಳು ಯೋಗೇಶ್ವರ್‌ಗೆ ಶೋಭೆ ಕೊಡುವುದಿಲ್ಲ. ಬೇರೆ ಪಕ್ಷದಲ್ಲಿದ್ದಾಗ ಮಾಡಿದ್ದನ್ನು ಇಲ್ಲಿ ಮಾಡುವುದಾಗಿ ಕಾಂಗ್ರೆಸ್ ಮುಖಂಡರನ್ನು ಮೆಚ್ಚಿಸಲು ಆ ರೀತಿ ಮಾತಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಶಾಸಕರು ಬೇರೆ ಪಕ್ಷಕ್ಕೆ ಹೋಗುವ ವಿಚಾರ ಕಿವಿಗೆ ಬಿದ್ದಿಲ್ಲ. ಶಾಸಕ ಯೋಗೇಶ್ವರ್ ರವರೆ ನಿಂತು ರಾಜಕಾರಣ ಮಾಡಿರೋದು ಅವರೇ ನಿಂತು ಜೆಡಿಎಸ್ ಶಾಸಕರನ್ನು ಗೆಲ್ಲಿಸಿರೋದು ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಹಜವಾಗಿ ನನ್ನನ್ನು ಪಕ್ಷಕ್ಕೆ ಕರೀತಾರೆ. ಅವರು ಮೊದಲು ಶಾಸಕರಾಗಿದ್ದೆ ಜೆಡಿಎಸ್‌ನಿಂದ ಹೀಗಾಗಿ ವಿಶ್ವಾಸದಿಂದ ಅವರು ಕರೆಯುತ್ತಾರೆ. ಆದರೆ, ನಾನು ಹೋಗುವುದಿಲ್ಲ ಎಂದು ಅವರಿಗೆ ಗೊತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಜಿ.ಟಿ.ದೇವೇಗೌಡರ ಆಪಸ್ವರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ತುಂಬಾ ದಿನದಿಂದ ಇದೆ. ಆದರೆ, ಅವರನ್ನು ಪಕ್ಷ ಕಡೆಗಣಿಸಿಲ್ಲ. ಅವರ ತಂದೆ ಮತ್ತು ಮಗನಿಗೂ ನಮ್ಮ ಪಕ್ಷದಿಂದ ಟಿಕೆಟ್ ನೀಡಿದೆ. ಯಾವಾಗ್ಲೂ ಗ್ಯಾಪ್ ಆಗುತ್ತಿದೆ ಅದನ್ನು ಸರಿಪಡಿಸುತ್ತೇವೆ ಎಂದರು.

ಸಿಎಂ ಇಬ್ರಾಹಿಂ ಯಾವಾಗ ದೇವೇಗೌಡರ ಬೈಯುತ್ತಾರೋ, ಸಿದ್ದರಾಮಯ್ಯ ಬೈಯುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ ಎಂದ ಅವರು, ಜೆಡಿಎಸ್ ಉಪ ಚುನಾವಣೆಯಲ್ಲಿ ಸೋತಿದೆ ಎಂದು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಉಪಚುನಾವಣೆಯಲ್ಲಿ ಸೋಲು, ಗೆಲುವು ಸಹಜ. ಈಗ ಸೋತಿರಬಹುದು ಮುಂದೆ ನಮಗೆ ಗೆಲುವು ಸಿಕ್ಕೆ ಸಿಗುತ್ತದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್‌ ಸಹಾಯ ಮಾಡಿದ ವಿಚಾರ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.

Share this article