ಕನ್ನಡಪ್ರಭ ವಾರ್ತೆ ಆಲೂರು
ಸಂಘಟನೆ ಮೂಲಕ ಹೋರಾಡಿ ನಮಗೆ ದೊರಕಬೇಕಾದ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.ತಾಲೂಕಿನ ಪಾಳ್ಯ ಹೋಬಳಿಯ ಸಂಕಲಾಪುರ ಗ್ರಾಮದಲ್ಲಿ ರಾಜ್ಯ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ, ತಾಲೂಕು ಕಾಫಿ ಬೆಳೆಗಾರರ ಸಂಘ ಮತ್ತು ಪ್ರಕೃತಿ ಸಣ್ಣ ಕಾಫಿ ಬಳಗದ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆಲೂರು-ಸಕಲೇಶಪುರ ಭಾಗದಲ್ಲಿ ಕಳೆದ ನಾಲ್ಕು ದಶಕಗಳಿಂದ ಕಾಡಾನೆ ಸಮಸ್ಯೆ ನಿರಂತರವಾಗಿದೆ. ಜೀವ, ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿಯಾಗುತ್ತಿದೆ. ಈ ಬಗ್ಗೆ ಈಗಾಗಲೇ ಬೆಳೆಗಾರರ ಸಂಘಟನೆಯೊಂದಿಗೆ ಅರಣ್ಯ ಸಚಿವರನ್ನು ಭೇಟಿಯಾಗಿ ಸಮಸ್ಯೆ ಗಂಭೀರತೆಯನ್ನು ತಿಳಿಸಲಾಗಿದೆ. ಕಾಫಿ ಬೆಳೆಗಾರರ ಸಂಘಟನೆ ಹೆಚ್ಚು ಬಲ ಹೊಂದಿದ್ದು ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸುತ್ತಿದೆ. ಶಾಸಕನಾಗಿ ಅಧಿಕಾರ ಬಳಸಿ ಕ್ಷೇತ್ರದ ಹಲವು ಸಮಸ್ಯೆ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಗಟ್ಟಿಯಾಗಿ ಧ್ವನಿ ಎತ್ತಿದ್ದೇನೆ. ಮುಂದೆಯೂ ಸರ್ಕಾರದ ಮೇಲೆ ಹೆಚ್ಚು ಒತ್ತಡ ತಂದು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಮುಂದಾಗುತ್ತೇನೆ. ಪ್ರಸಕ್ತ ಸಾಲಿನಲ್ಲಿ ಕಾಫಿ ಬೀಜಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ವ್ಯಕ್ತವಾಗಿ ಬೆಳೆಗಾರರ ಕಷ್ಟ ಅಲ್ಪಸ್ವಲ್ಪ ಪರಿಹಾರವಾಗಿದೆ. ಭೂತಾಯಿ ಎಂದಿಗೂ ತನ್ನನ್ನು ನಂಬಿದವರನ್ನು ಕೈ ಬಿಡುವುದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.ದೇವರಾಜ ಅರಸು ಅಭಿವೃದ್ಧಿ ನಿಗಮದ ನಿರ್ದೇಶಕ ಎಂ.ಡಿ. ಕಾಂತರಾಜ್ ಮಾತನಾಡಿ, ಕಾಫಿ ಬೆಳೆಗಾರರು ಕೃಷಿ ಚಟುವಟಿಕೆ ಜೊತೆಗೆ ಸಂಘಟನೆಯೊಂದಿಗೆ ಹೋರಾಟ ಮಾಡಿ ಯಶಸ್ಸು ಕಾಣಬೇಕು. ಹಲವು ದಶಕಗಳಿಂದ ಜೀವಂತವಾಗಿರುವ ಕಾಡನೆ ಸಮಸ್ಯೆ ಬಗೆಹರಿದಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶವಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರ ಪರಿಣಾಮ ಮಲೆನಾಡಿನಲ್ಲಿ ಹವಾಮಾನ ವೈಪರೀತ್ಯ ಉಂಟಾಗಿ ಮಳೆಗಾಲದಲ್ಲಿ ಬಿಸಿಲು, ಬೇಸಿಗೆಯಲ್ಲಿ ಮಳೆ ಈ ರೀತಿಯಾಗಿ ಇಲ್ಲಿಯ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವುದಕ್ಕೆ ಕಷ್ಟವಾಗಿದೆ. ಸಂಘಟನೆಗಳು ತಮ್ಮ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.
ಕಾರ್ಯಕ್ರಮದ ಸಾನಿದ್ಯವನ್ನು ಸಂಕಲಾಪುರಮಠ ಮತ್ತು ಕಲ್ಮಠ ಪರಮಪೂಜ್ಯರಾದ ಧರ್ಮರಾಜೇಂದ್ರ ಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಪ್ರಕೃತಿ ಸಣ್ಣ ಕಾಫಿ ಬಳಗಾರರ ಸಂಘದ ಅಧ್ಯಕ್ಷ ಕೆ.ಎಸ್.ಶಶಿಧರ, ಕರ್ನಾಟಕ ಬೆಳೆಗಾರರ ಒಕ್ಕೂಟ ಅಧ್ಯಕ್ಷ ಎಚ್. ಪಿ. ಶಿವಣ್ಣ, ಹಾಸನ ಜಿಲ್ಲಾ ಪ್ಲಾಂಟರ್ ಸಂಘದ ಅಧ್ಯಕ್ಷ ವಿ.ಎಸ್.ಪರಮೇಶ್, ಜೆಡಿಎಸ್ ತಾಲೂಕ ಅಧ್ಯಕ್ಷ ಮಂಜೇಗೌಡ, ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ. ಪಿ. ಸುರೇಂದ್ರ, ಗೌರವ ಕಾರ್ಯದರ್ಶಿ ಕೆ. ಟಿ. ಲೋಹಿತ್, ಆಲೂರು ತಾಲೂಕು ಬೆಳಗಾರರ ಸಂಘದ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಬೋಪಣ್ಣ ಇತರರು ಉಪಸ್ಥಿತರಿದ್ದರು.