ಸಂಸ್ಕೃತಿ, ಧರ್ಮವನ್ನು ಇಟ್ಟುಕೊಂಡು ಮುನ್ನಡೆಯಬೇಕು

KannadaprabhaNewsNetwork | Published : Apr 27, 2025 1:49 AM

ಸಾರಾಂಶ

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಜಾತಿ, ಊರು, ಭಾಷೆ ಕೇಳಲಿಲ್ಲ. ಹಿಂದು ಎಂದು ಹೇಳಿದಾಗ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ನಾವು ನಮ್ಮ ಸಂಸ್ಕೃತಿ ಧರ್ಮವನ್ನು ಇಟ್ಟುಕೊಂಡು ಮುನ್ನಡೆಯಬೇಕಿದೆ ಎಂದು ಅಯೋಧ್ಯೆ ಶ್ರೀರಾಮ ಮಂದಿರ ಖಜಾಂಚಿ, ಗೀತಾ ಪರಿವಾರದ ಸಂಸ್ಥಾಪಕ ಗೋವಿಂದದೇವ ಗಿರೀಜಿ ಮಹಾರಾಜರು ನುಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಜಾತಿ, ಊರು, ಭಾಷೆ ಕೇಳಲಿಲ್ಲ. ಹಿಂದು ಎಂದು ಹೇಳಿದಾಗ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ನಾವು ನಮ್ಮ ಸಂಸ್ಕೃತಿ ಧರ್ಮವನ್ನು ಇಟ್ಟುಕೊಂಡು ಮುನ್ನಡೆಯಬೇಕಿದೆ ಎಂದು ಅಯೋಧ್ಯೆ ಶ್ರೀರಾಮ ಮಂದಿರ ಖಜಾಂಚಿ, ಗೀತಾ ಪರಿವಾರದ ಸಂಸ್ಥಾಪಕ ಗೋವಿಂದದೇವ ಗಿರೀಜಿ ಮಹಾರಾಜರು ನುಡಿದರು.ನಗರದ ಲಕ್ಷ್ಮೀ ಟೇಕಡಿಯ ಹುಕ್ಕೇರಿ ಹಿರೇಮಠದ ಶಾಖೆಯ ಸಭಾಂಗಣದಲ್ಲಿ ಭಾರತೀಯ ಸಂತ ಮಹಾಪರಿಷತ್ತಿನಲ್ಲಿ ಶನಿವಾರ ಭಾಗಿಯಾಗಿ ಅವರು ಮಾತನಾಡಿದರು. ನಮ್ಮ ಹಿಂದು ಸಮಾಜದವರ ದುರ್ಬಳಕೆ ಭಯೋತ್ಪಾದಕರ ಶಕ್ತಿಯಾಗಿದೆ. ನಮ್ಮಲ್ಲಿ ಹೃದಯದಿಂದ ಒಂದಾಗಬೇಕಾಗಿದೆ. ಇಂದಿನ ಭಾರತೀಯ ಸಂತ ಮಹಾಸಭಾದ ಉದ್ದೇಶವಾಗಿದೆ. ಬಟೆಂಗೆ ತೋ ಕಟೆಂಗೆ ಭಿನ್ನವಾದರೆ ನಾವು ತುಂಡು ತುಂಡಾಗುತ್ತೇವೆ ಎನ್ನುವುದು ಸಂತರಿಗೂ ಅನ್ವಯವಾಗುತ್ತದೆ. ಸಂತರ ಸಂಘಟನೆಯ ಸಲುವಾಗಿ ಬೇಕಾದ ಸೇವೆ ಕೊಡಿ ನಾನು ಅದನ್ನು ಮಾಡಲು ಸಿದ್ಧನಿದ್ದೇನೆ ಎಂದರು.

ಆಲಸಿ ಮನುಷ್ಯನ ಬಾಯಿಯಲ್ಲಿ ಅಮೃತ ಬಿಂದು ಬಂದಿದೆ. ಇನ್ನೊಂದು ಕಡೆ ಸಂತರು ಒಂದೇ ಕಡೆ ಸೇರಿದ್ದು ಅತೀವ ಸಂತಸ ತಂದಿದೆ ಎಂದ ಅವರು, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಎಲ್ಲ ಸಂತರನ್ನು ಒಂದೇ ಕಡೆ ಸೇರಿಸಿ ಸಮಾಜ ಜಾಗೃತಿ ಮಾಡುವ ಉದ್ದೇಶದಿಂದ ಆಯೋಜಿಸಿರುವ ಈ ಸಂತ ಪರಿಷತ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದರು.

ಸಂತರು ತೋರಿಸುವ ದಿಕ್ಕುಗಳು ಸರಿಯಾಗಿವೆ. ಇಡೀ ಸಮಾಜ ನಮ್ಮ ಕಡೆ ನೋಡುತ್ತಿದೆ. ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಸಂಗಮ ಸಾಕ್ಷಿಯಾಗಿದೆ. ಸಮಾಜಕ್ಕೆ ನಿಜವಾದ ಪ್ರೇರಣೆ ಸಿಗುವುದು ಸಂತರಿಂದ ಮಾತ್ರ ಸಾಧ್ಯವೇ ಹೊರತು, ಬೇರೆಯವರಿಂದಲ್ಲ. ಕರ್ನಾಟಕದಲ್ಲಿ ಎಲ್ಲ ಸಂತರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಎಲ್ಲರೂ ಒಟ್ಟಾಗಿ ಸೇರಿ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಯೋಧ್ಯೆ ಶ್ರೀರಾಮ ಮಂದಿರ ಖಜಾಂಚಿ, ಗೀತಾ ಪರಿವಾರದ ಸಂಸ್ಥಾಪಕ ಗೋವಿಂದದೇವ ಗಿರೀಜಿ ಮಹಾರಾಜರು ಶ್ರೀರಾಮನ ಪ್ರತಿಷ್ಠಾಪನೆ ಮಾಡುವ ಗುರುವಿನ ಸ್ಥಾನದಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ಅವರ ಉಪವಾಸವನ್ನು ಬಿಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಶ್ಲಾಘನೀಯ. ನಮ್ಮ ಮಠದಲ್ಲಿ ನಮ್ಮ ಸಂಪ್ರದಾಯ ಇರಲಿ. ಆದರೆ ನಾವು ಒಗ್ಗಟ್ಟಾಗಿ ಭಾರತದಲ್ಲಿರುವ ನಮ್ಮವರನ್ನು ಉಳಿಸಬೇಕು. ಇಲ್ಲದಿದ್ದರೇ ಮುಂದೊಂದು ದಿನ ಬಹಳ ಅನಾಹುತವಾಗುತ್ತದೆ ಎಂದು ಎಚ್ಚರಿಸಿದರು.ಉಗ್ರರ ಅಟ್ಟಹಾಸಕ್ಕೆ ಖಂಡನೆ, ಮಂಡನೆ ಸಾಲದು ಭಾರತ ಹಾಗೂ ರಾಜ್ಯ ಸರ್ಕಾರಗಳು ನಮ್ಮವರನ್ನು ಉಳಿಸಲು ಮುಂದಾಗಬೇಕು. ಇಂಥ ಕೆಲಸ ಮಾಡಿದವರಿಗೆ ಖಂಡನೇ ಮಾತ್ರವಲ್ಲ ಅವರಿಗೆ ಸರಿಯಾದ ದಂಡಣೆ ಕೊಟ್ಟರೆ ಮಾತ್ರ ನಾವು ಉಳಿಯಲು ಸಾಧ್ಯ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದ ಅವರು, ಹಿಂದುಗಳಿಗೆ ಧೈರ್ಯ ತುಂಬುವ ಕೆಲಸವನ್ನು ಎಲ್ಲ ಮಠಾಧೀಶರು ಮಾಡಬೇಕು. ನಾನು ಖಾವಿ ಹಾಕಿಕೊಂಡಿದ್ದೇನೆ ಎಂದರೆ ನಾನು ಹಿಂದುಗಳನ್ನು ಉಳಿಸಬೇಕು ಎಂದು ತಿಳಿಸಿದರು.ಹರಿಹರ ಪುರದ ಶ್ರೀ ಲಕ್ಷ್ಮೀ ನರಸಿಂಹ ಶಾರದಾ ಕ್ಷೇತ್ರದ ಶ್ರೀ ಶಂಕರಾಚಾರ್ಯರು ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಬೆಂಗಳೂರಿನ ರಾಜರಾಜೇಶ್ವರಿ ನಗರದ ಶ್ರೀ ಕೈಲಾಸಾಶ್ರಮ ಮಹಾಸಂಸ್ಥಾನ ಜಯೇಂದ್ರ ಪುರಿ ಸ್ವಾಮೀಜಿ, ಬೆಳಗಾವಿ, ಬೆಂಗಳೂರು, ಬಳ್ಳಾರಿ ಸೇರಿದಂತೆ 50 ಜನ ಎಲ್ಲ ಪರಂಪರೆಯ ಸ್ವಾಮೀಜಿ ಭಾಗಿಯಾಗಿದ್ದರು.

Share this article