ಭೂ ಸಂತ್ರಸ್ತರಿಗೆ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಆಗ್ರಹ

KannadaprabhaNewsNetwork | Published : Oct 22, 2024 12:04 AM

ಸಾರಾಂಶ

ಪೊಲೀಸರ ಕಾರ್ಯ ದಕ್ಷತೆ, ಪ್ರಾಮಾಣಿಕತೆ, ಕರ್ತವ್ಯ ಪ್ರಜ್ಞೆ ಹಾಗೂ ನಿಸ್ವಾರ್ಥ ಸೇವೆಯನ್ನು ನಾವುಗಳು ಸ್ಮರಿಸಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ್ ಶ್ರೀಧರ್ ಹೇಳಿದರು.

ರಾಣಿಬೆನ್ನೂರು: ನಗರದ ಬಾಗಲಕೋಟಿ-ಬಿಳಿಗಿರಿರಂಗನಬೆಟ್ಟ ರಾಜ್ಯ ಹೆದ್ದಾರಿಯ ರೇಲ್ವೆ ಗೇಟ್ 219 (ದೇವರಗುಡ್ಡ ರಸ್ತೆ) ಬಳಿ ನಿರ್ಮಾಣವಾಗುತ್ತಿರುವ ರೇಲ್ವೆ ಮೇಲ್ಸೇತುವೆಗೆ ಭೂಮಿ ಕಳೆದುಕೊಂಡ ರೈತರ ಜಮೀನುಗಳಿಗೆ ಓಡಾಡಲು 10 ಮೀಟರ್ ಅಗಲ ಕಾಂಕ್ರೀಟ್ (ಸರ್ವಿಸ್) ರಸ್ತೆ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರ್ವಜನಿಕರು ಸೋಮವಾರ ರೇಲ್ವೆ ಇಲಾಖೆ ಡೆಪ್ಯೂಟಿ ಚೀಫ್ ಎಂಜಿನಿಯರ್ ದೇವೇಂದ್ರ ಗುಪ್ತಾ ಅವರಿಗೆ ಮನವಿ ಸಲ್ಲಿಸಿದರು. ರೇಲ್ವೆ ಮೇಲ್ಸೇತುವೆ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದ ರೇಲ್ವೆ ಅಧಿಕಾರಿ ಜತೆ ತಮ್ಮ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ರೇಲ್ವೆ ಇಲಾಖೆಯು 2023ನೇ ಸಾಲಿನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ಸುಮಾರು 2.30 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಕಾಮಗಾರಿ ಪ್ರಾರಂಸಿದ್ದು ಇದೀಗ ಮುಕ್ತಾಯ ಹಂತ ತಲುಪಿದೆ. ಭೂ ಸ್ವಾಧೀನದ ಸಮಯದಲ್ಲಿ ಹಾವೇರಿ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಭೂಮಿ ನೀಡಿದ ರೈತರು, ರೇಲ್ವೆ ಮೇಲ್ಸೇತುವೆ ಹೋರಾಟ ಸಮಿತಿ, ಕಂದಾಯ ಇಲಾಖೆ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ 10 ಮೀ. ಅಗಲದ ಸರ್ವೀಸ್ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಲಾಗಿತ್ತು. ಅದಕ್ಕೆ ರೇಲ್ವೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದರು. ಆದರೆ ಇದೀಗ ಕೇವಲ 6 ಮೀ.ವಿಸ್ತೀರ್ಣದ ರಸ್ತೆ ನಿರ್ಮಿಸಲಾಗುತ್ತಿದೆ. ಇದಲ್ಲದೆ ಭೂಮಿ ಕಳೆದುಕೊಂಡ ರೈತರಿಗೆ ಇಂದಿನವರೆಗೂ ಭೂ ಮತ್ತು ಬೆಳೆ ಪರಿಹಾರ ಹಾಗೂ ಕಟ್ಟಡ ಪರಿಹಾರ ನೀಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು. ಸಾರ್ವಜನಿಕರ ಅಹವಾಲು ಆಲಿಸಿದ ರೇಲ್ವೆ ಅಧಿಕಾರಿ ದೇವೇಂದ್ರ ಗುಪ್ತಾ ಮಾತನಾಡಿ, ಇಲಾಖೆ ನೀಡಿದ ಡ್ರಾಯಿಂಗ್ ಪ್ರಕಾರವೇ ರೇಲ್ವೆ ಮೇಲ್ಸೇತುವೆ ಹಾಗೂ ಸರ್ವಿಸ್ ರಸ್ತೆ ನಿರ್ಮಿಸಲಾಗುತ್ತಿದೆ. ನಂತರ ಸಾರ್ವಜನಿಕರ ಕೋರಿಕೆಯಂತೆ ಸರ್ವಿಸ್ ರಸ್ತೆ ಅಗಲವನ್ನು 8 ಮೀಟರ್‌ಗೆ ವಿಸ್ತರಿಸಲು ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ನಂತರ ಪರಿಹಾರ ವಿಚಾರದಲ್ಲಿ ಎರಡ್ಮೂರು ಬಾರಿ ದರ ಹೆಚ್ಚಳಕ್ಕೆ ಪಟ್ಟು ಹಿಡಿದ ಪರಿಣಾಮ ಪರಿಣಾಮ ವಿಳಂಬವಾಗಿದೆ. ಇದರ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು. ರವೀಂದ್ರ ಗೌಡ ಪಾಟೀಲ, ಪ್ರಕಾಶ ಪೂಜಾರ, ನಿಂಗಪ್ಪ ಹೊನ್ನಾಳಿ, ಶಂಕರ ಪಾಟೀಲ, ಜಗದೀಶ ನರಸಗೊಂಡರ, ಬಸಣ್ಣ ಹೊನ್ನಾಳಿ, ಮಾರುತಿ ದೊಡ್ಡಮನಿ, ಜಗದೀಶ ಕೆರೊಡಿ, ಹೊನ್ನಪ್ಪ ಹೊಳೆಯಮ್ಮನವರ, ಶಂಕ್ರಪ್ಪ ನರಸಗೊಂಡರ, ರಾಜು ಹೊಳೆಯಮ್ಮನವರ ಮತ್ತಿತರರಿದ್ದರು.

Share this article